ಸಾರಾಂಶ
ಮಠಕ್ಕೆ ಬೀಗ ಹಾಕಲು ಪ್ರಯತ್ನ । ಬಹಿರಂಗ ಸಭೆ, ಪೀಠತ್ಯಾಗ ಮಾಡುವಂತೆ ಆಗ್ರಹ
ಕನ್ನಡಪ್ರಭ ವಾರ್ತೆ ಯಲಬುರ್ಗಾಪಟ್ಟಣದ ಸಂಸ್ಥಾನ ಹಿರೇಮಠದ ಪೀಠಾಧಿಪತಿ ಸಿದ್ದರಾಮೇಶ್ವರ ಸ್ವಾಮೀಜಿ ವಿರುದ್ಧ ಮಂಗಳವಾರ ಶ್ರೀಮಠದ ಆವರಣದಲ್ಲಿ ಭಕ್ತರು ಸಭೆ ಸೇರಿ ಬಹಿರಂಗ ಆಕ್ರೋಶ ವ್ಯಕ್ತಪಡಿಸಿ, ಮಠಕ್ಕೆ ಬೀಗ ಹಾಕಲು ಮುಂದಾದ ಘಟನೆ ಜರುಗಿತು.
ಶ್ರೀಮಠದ ಶಿಕ್ಷಣ ಸಂಸ್ಥೆಯಲ್ಲಿ ಎಫ್‌ಡಿಎ ಆಗಿ ಕೆಲಸ ನಿರ್ವಹಿಸುತ್ತಿದ್ದ ಸಿದ್ದಯ್ಯ ಗಡ್ಡಿಮಠ ಎಂಬಾತನನ್ನು ಶ್ರೀಗಳು 2-3 ದಿನಗಳ ಹಿಂದೆ ಏಕಾಏಕಿ ಹೊರಹಾಕಿದ್ದು, ಶ್ರೀಗಳ ಸಹೋದರ ಆತನ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆ ಶ್ರೀಮಠದ ಅಪಾರ ಭಕ್ತರು ಶ್ರೀಗಳನ್ನು ಭೇಟಿ ಮಾಡಿ, ಸಿದ್ದಯ್ಯರನ್ನು ಯಾವ ಕಾರಣಕ್ಕೆ ಹೊರಹಾಕಿದ್ದೀರಿ. ಈ ರೀತಿ ಮಾಡಿದ್ದು ಸರಿಯಲ್ಲ ಎಂದರು. ಆಗ ಅದನ್ನು ಕೇಳಲು ನೀವ್ಯಾರು, ಹೊರಗೆ ನಡೆಯಿರಿ ಎಂದು ಶ್ರೀಗಳು ಹೇಳಿದ್ದು ಭಕ್ರರನ್ನು ಕೆರಳಿಸಿತ್ತು. ಶ್ರೀಗಳ ಮಾತನ್ನು ಖಂಡಿಸಿ ನೂರಾರು ಸಂಖ್ಯೆಯ ಭಕ್ತರು ಆಕ್ರೋಶ ವ್ಯಕ್ತಪಡಿಸಿದರು.ಭಕ್ತರ ಬಹಿರಂಗ ಸಭೆ:
ವಕೀಲರ ಸಂಘದ ಅಧ್ಯಕ್ಷ ಪ್ರಕಾಶ ಬೇಲೇರಿ ಮಾತನಾಡಿ, ಶ್ರೀಮಠದ ಶಿಕ್ಷಣ ಸಂಸ್ಥೆಯಲ್ಲಿ ಕೆಲಸ ಮಾಡುತ್ತಾ, ಮಠದ ಸೇವಕನಾಗಿದ್ದ ಸಿದ್ದಯ್ಯ ನೇಮಕ ನಿಯಮದ ಪ್ರಕಾರವೇ ಇದೆ. ಅವರನ್ನು ತೆಗೆಯಲು ಶ್ರೀಗಳಿಗೆ ಅಧಿಕಾರವಿಲ್ಲ. ಮಠದ ಆಸ್ತಿಯನ್ನು, ಬಂಗಾರ, ನಿವೇಶನಗಳನ್ನು ಭಕ್ತ ಸಮೂಹದ ಮುಂದೆ ಬಹಿರಂಗ ಪಡಿಸಬೇಕು. ಕಾನೂನಾತ್ಮಕವಾಗಿ ಭಕ್ತರಿಗೆ ಬೆಂಬಲ ಕೊಡುತ್ತೇನೆ. ಹಿಂದಿನ ಪೂಜ್ಯರು ಶಿರಗುಂಪಿಯ ದಲಿತ ಕುಟುಂಬಕ್ಕೆ ಭೂಮಿ ನೀಡಿದ್ದರು. ಈಗಿನ ಸ್ವಾಮೀಜಿ ತಮ್ಮ ಸಹೋದರನ ಹೆಸರಿನಲ್ಲಿ ಆಸ್ತಿ ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ಇದರಿಂದ ಮಠಕ್ಕೆ ಕಳಂಕ ತರುವ ಕೆಲಸವನ್ನು ಶ್ರೀಗಳು ಮಾಡಿದ್ದು, ಸರಿಯಲ್ಲ ಭಕ್ತರ ಕೋರಿಕೆಯಂತೆ ಟ್ರಸ್ಟ್ ರಚಿಸಬೇಕು. ಬೇರೆ ಸ್ವಾಮೀಜಿಯನ್ನು ಪೀಠಾಧ್ಯಕ್ಷರನ್ನಾಗಿ ನೇಮಕ ಮಾಡಬೇಕು ಎಂದು ಒತ್ತಾಯಿಸಿದರು.ಮಠದ ಭಕ್ತರಾದ ವೀರನಗೌಡ ಬನ್ನಪ್ಪಗೌಡ್ರ, ಮಂಜುನಾಥ ಅಧಿಕಾರಿ, ದಾನನಗೌಡ ತೊಂಡಿಹಾಳ ಹಾಗೂ ಸಂಗಪ್ಪ ಕೊಪ್ಪಳ ಮಾತನಾಡಿ, ಭಕ್ತರ ಹಿತಕ್ಕಿಂತ ಕುಟುಂಬ ಸದಸ್ಯರ ಹಿತ ಕಾಪಾಡುವಲ್ಲಿ ಮುಂದಾಗಿದ್ದಾರೆ. ಭಕ್ತರನ್ನು ಹೆದರಿಸುತ್ತಿದ್ದಾರೆ. ಹಲವರಿಗೆ ಸ್ವಾಮೀಜಿಯಿಂದ ಅನ್ಯಾಯ, ಹಲ್ಲೆ ನಡೆದಿವೆ, ಮಠವು ಭಕ್ತರಿಂದ ಬೆಳೆದಿದೆ ಎನ್ನುವುದನ್ನು ಸ್ವಾಮೀಜಿ ಅರ್ಥ ಮಾಡಿಕೊಳ್ಳದೇ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ. ಕೂಡಲೇ ಮಠದಿಂದ ಪೀಠತ್ಯಾಗ ಮಾಡುವಂತೆ ಆಗ್ರಹಿಸಿದರು.
ಇನ್ನೂ ಸಭೆ ನಡೆಸುತ್ತಿದ್ದಂತೆ ಮಠಕ್ಕೆ ಪಿಎಸ್‌ಐ ವಿಜಯಪ್ರತಾಪ ಭೇಟಿ ನೀಡಿ ಭಕ್ತರೊಂದಿಗೆ ಮಾತುಕತೆ ನಡೆಸಿದರು.ಮುಖಂಡರಾದ ಪಪಂ ಮಾಜಿ ಅಧ್ಯಕ್ಷ ಸುರೇಶಗೌಡ ಶಿವನಗೌಡ್ರ, ಶಿವನಗೌಡ ಬನ್ನಪ್ಪಗೌಡ್ರ, ರವಿತೇಜ ಅಧಿಕಾರಿ, ವೀರಯ್ಯ, ಕೆ.ಎಸ್. ಮುಳಗುಂದ ಮಾತನಾಡಿದರು. ಪಪಂ ಅಧ್ಯಕ್ಷ ಅಂದಯ್ಯ ಕಳ್ಳಿಮಠ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭ ಸಿದ್ದರಾಮೇಶ ಬೆಲೇರಿ, ಮುದಕಪ್ಪ ನರೇಗಲ, ಫಕೀರಪ್ಪ ಬೆದವಟ್ಟಿ, ಶರಣಪ್ಪ ಹಡಪದ, ಕುಮಾರ, ಮುತ್ತಣ್ಣ ಹಡಪದ, ಕುಬೇರಗೌಡ, ಉಮೇಶಗೌಡ ಮಾಲಿಪಾಟೀಲ, ಸಂಗಪ್ಪ ರಾಮತ್ನಾಳ, ಗುರುರಾಜ ಬೆಲೇರೀ, ಶಿವಾನಂದಪ್ಪ ಮಾಸ್ತರ, ಮುತ್ತು ಅರಕೇರಿ, ಮಂಜುನಾಥ ಬೇಲೇರಿ, ಮಂಜು ಹಳ್ಳಿಕೇರಿ, ಶರಣಪ್ಪ ಕೊಡಗಲಿ ವಿರುಪಾಕ್ಷಯ್ಯ ಗಂಧದ ಮತ್ತಿತರರು ಇದ್ದರು.