ಸಾರಾಂಶ
ಸುಬ್ರಹಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ಚಂಪಾಷಷ್ಠಿ ಜಾತ್ರಾ ಮಹೋತ್ಸವದ ಚೌತಿಯ ದಿನವಾದ ಶನಿವಾರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಭಕ್ತರು ಎಡೆಸ್ನಾನ ಸೇವೆ ನೆರವೇರಿಸಿದರು.
ಗೋವುಗಳು ಸೇವಿಸಿದ ಎಲೆಯ ಮೇಲೆ ಭಕ್ತರು ಉರುಳು ಸೇವೆ ನಡೆಸುವ ಮೂಲಕ ಚೌತಿಯ ದಿನದಂದು ಎಡೆಸ್ನಾನ ಹರಕೆ ಸೇವೆ ಸಲ್ಲಿಸಿದರು. ಸುಮಾರು ೯೫ ಭಕ್ತರು ಸ್ವಯಂಪ್ರೇರಿತರಾಗಿ ಸೇವೆ ನೆರವೇರಿಸಿದರು. ಇನ್ನು ಪಂಚಮಿ ಮತ್ತು ಷಷ್ಠಿಯಂದು ಭಕ್ತರು ಎಡೆಸ್ನಾನ ಸೇವೆ ನೆರವೇರಲಿದೆ.ಶ್ರೀ ದೇವರ ಮಧ್ಯಾಹ್ನದ ಮಹಾಪೂಜೆ ಬಳಿಕ ದೇವಳದ ಹೊರಾಂಗಣದ ಸುತ್ತಲೂ ೪೩೨ ಬಾಳೆ ಎಲೆಗಳನ್ನು ಹಾಕಿ ಅದರ ಮೇಲೆ ದೇವರ ನೈವೇದ್ಯ ಬಡಿಸಲಾಯಿತು. ಬಳಿಕ ದೇವಳದ ಗೋವುಗಳು ಆ ಎಲೆಗಳಲ್ಲಿದ್ದ ಅನ್ನಪ್ರಸಾದವನ್ನು ತಿಂದವು. ಹಸುಗಳು ತಿಂದ ಅನ್ನಪ್ರಸಾದದ ಮೇಲೆ ದೇವಳದ ಎದುರಿನ ದರ್ಪಣತೀರ್ಥ ನದಿಯಲ್ಲಿ ಸ್ನಾನ ಮಾಡಿ ಬಂದಿದ್ದ ಎಲ್ಲ ವಯೋಮಾನದ ಭಕ್ತರು ಉರುಳು ಸೇವೆ ಕೈಗೊಂಡರು. ಗೋವು ತಿಂದ ಎಲೆಯ ಮೇಲೆ ಉರುಳು ಸೇವೆ ಮಾಡುತ್ತಾ ಒಂದು ಸುತ್ತು ಪ್ರದಕ್ಷಿಣೆ ಹಾಕಿದ ಬಳಿಕ ಭಕ್ತರು ದರ್ಪಣ ತೀರ್ಥ ನದಿಯಲ್ಲಿ ಸ್ನಾನ ಮಾಡಿ ದೇವರ ಪ್ರಸಾದ ಮತ್ತು ಪ್ರಸಾದ ಭೋಜನ ಸ್ವೀಕರಿಸಿದರು. ತನ್ನ ಒಳಿತಿಗಾಗಿ ಹಿರಿಯರು ಹೇಳಿದ ಹರಕೆಯಂತೆ ಪುಟ್ಟ ಬಾಲಕಿಯೊಬ್ಬಳು ಎಡೆಸ್ನಾನ ಹರಕೆ ನೆರವೇರಿಸಿದಳು. ಈ ಸಂದರ್ಭದಲ್ಲಿ ಶ್ರೀ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನರಾಂ ಸುಳ್ಳಿ, ಕಾರ್ಯನಿರ್ವಹಣಾಧಿಕಾರಿ ಡಾ.ನಿಂಗಯ್ಯ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ವನಜಾ.ವಿ.ಭಟ್, ಶ್ರೀವತ್ಸ ಬೆಂಗಳೂರು, ಮನೋಹರ ರೈ, ಪಿಜಿಎಸ್‌ಎನ್ ಪ್ರಸಾದ್, ಶೋಭಾ ಗಿರಿಧರ್, ಶ್ರೀ ದೇವಳದ ಅಧೀಕ್ಷಕ ಪದ್ಮನಾಭ ಶೆಟ್ಟಿಗಾರ್, ಹೆಬ್ಬಾರ್ ಪ್ರಸನ್ನ ಭಟ್ ಉಪಸ್ಥಿತರಿದ್ದರು.
ಅನ್ನದಾನದ ಸಂಕೇತವಾಗಿ ದೇವಸ್ಥಾನದಲ್ಲಿ ಪಲ್ಲಪೂಜೆ- ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಚಂಪಾಷಷ್ಠಿ ಜಾತ್ರಾ ಮಹೋತ್ಸವದ ಕಾರ್ತಿಕ ಶುದ್ಧ ಚೌತಿಯ ದಿನವಾದ ಶನಿವಾರ ಶ್ರೀ ದೇವಳದಲ್ಲಿ ಪಲ್ಲಪೂಜೆ ನೆರವೇರಿತು. ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಸೀತಾರಾಮ ಎಡಪಡಿತ್ತಾಯರು ಒಳಾಂಗಣದಲ್ಲಿ ಪಲ್ಲಪೂಜೆ ನೆರವೇರಿಸಿದರು.ಅಲ್ಲದೆ ಅಕ್ಷಯ ಪಾತ್ರೆಗೆ ಪೂಜೆ ಸಲ್ಲಿಸಿದರು.ಕುಕ್ಕೆಯಲ್ಲಿ ನಿರಂತರ ಅನ್ನದಾನ ನಡೆಯುವುದು ಪ್ರಧಾನವಾಗಿದ್ದು ಜಾತ್ರಾ ಸಮಯ ವಿಶೇಷ ಭೋಜನ ಪ್ರಸಾದ ವಿತರಣೆಯ ಸಂಕೇತವಾಗಿ ಶ್ರೀ ದೇವಳದಲ್ಲಿ ಪಲ್ಲಪೂಜೆ ನಡೆಯಿತು.ಆದಿ ಭೋಜನ ಶಾಲೆಯಲ್ಲಿ ಪಲ್ಲಪೂಜೆ: ಜಾತ್ರೋತ್ಸವದ ಪ್ರಧಾನ ೪ ದಿನಗಳಾದ ಚೌತಿ, ಪಂಚಮಿ, ಷಷ್ಠಿ ಮತ್ತು ಅವಭೃತೋತ್ಸವದಂದು ವಿಶೇಷ ಅನ್ನದಾನ ನೆರವೇರುತ್ತದೆ. ಈ ಸಂಬಂಧವಾಗಿ ಶನಿವಾರ ಮದ್ಯಾಹ್ನ ಪುರೋಹಿತ ಪ್ರಸನ್ನ ಹೊಳ್ಳರು ಆದಿಯ ಭೋಜನ ಶಾಲೆಯಲ್ಲಿ ವಿವಿಧ ವೈದಿಕ ವಿದಿ ವಿಧಾನಗಳ ಮೂಲಕ ಅನ್ನಬ್ರಹ್ಮನಿಗೆ ಪೂಜೆ ಸಲ್ಲಿಸಿದರು. ಬಳಿಕ ಪ್ರಸಾದ ವಿತರಿಸಿದರು. ಈ ಬಾರಿ ಆದಿ ಬೋಜನ ಶಾಲೆಯಲ್ಲಿ ಜಾತ್ರೋತ್ಸವದ ಮೂರು ದಿನಗಳ ಕಾಲ ಪ್ರಥಮ ಬಾರಿ ಭಕ್ತರಿಗರೆ ಬೆಳಗ್ಗಿನ ಉಪಹಾರ ಕೂಡಾ ವಿತರಿಸಲಾಗುತ್ತದೆ.ಈ ಸಂದರ್ಭದಲ್ಲಿ ಶ್ರೀ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನರಾಂ ಸುಳ್ಳಿ, ಕಾರ್ಯನಿರ್ವಹಣಾಧಿಕಾರಿ ಡಾ.ನಿಂಗಯ್ಯ ಸೇರಿದಂತೆ ವ್ಯವಸ್ಥಾಪನಾ ಸಮಿತಿ ಸದಸ್ಯರು,ಮಾಸ್ಟರ್ ಪ್ಲಾನ್ ಮೇಲುಸ್ತುವಾರಿ ಸಮಿತಿ ಸದಸ್ಯರು, ದೇವಳದ ಸಿಬ್ಬಂದಿ, ಭಕ್ತರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಶ್ರೀ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನರಾಂ ಸುಳ್ಳಿ, ಕಾರ್ಯನಿರ್ವಹಣಾಧಿಕಾರಿ ಡಾ.ನಿಂಗಯ್ಯ ಸೇರಿದಂತೆ ವ್ಯವಸ್ಥಾಪನಾ ಸಮಿತಿ ಸದಸ್ಯರು,ಮಾಸ್ಟರ್ ಪ್ಲಾನ್ ಮೇಲುಸ್ತುವಾರಿ ಸಮಿತಿ ಸದಸ್ಯರು, ದೇವಳದ ಸಿಬ್ಬಂದಿ, ಭಕ್ತರು ಉಪಸ್ಥಿತರಿದ್ದರು.