ಧರ್ಮಸ್ಥಳ ವಿರುದ್ಧ ಷಡ್ಯಂತ್ರ ವಿರೋಧಿಸಿ ಭಕ್ತರ ಪ್ರತಿಭಟನೆ

| Published : Aug 23 2025, 02:00 AM IST

ಸಾರಾಂಶ

ಒಬ್ಬ ಅನಾಮಿಕ ವ್ಯಕ್ತಿ ಶವಗಳನ್ನು ಹೂತು ಹಾಕಿದ್ದೇನೆ ಎಂದು ಸ್ಥಳ ಗುರುತಿಸಿದ್ದಾನೆ. ಇಲ್ಲಿ ಯಾವುದೇ ಸಾಕ್ಷಿ ಅಥವಾ ಅಸ್ಥಿಪಂಜರ ಸಿಕ್ಕಿಲ್ಲ. ಆದರೂ, ಎಸ್‌ಐಟಿ ತನಿಖಾ ತಂಡ ಒಬ್ಬ ಅನಾಮಿಕನ ಸುಳ್ಳು ಹೇಳಿಕೆ ಆಧರಿಸಿ ಜೆಸಿಬಿ, ಹಿಟಾಚಿ ಮೂಲಕ ನಿರಂತರವಾಗಿ ಗುಂಡಿ ಅಗೆದು ಪರಿಶೀಲನೆ ನಡೆಸಿದೆ.

ಕನ್ನಡಪ್ರಭ ವಾರ್ತೆ ಪಾಂಡವಪುರ

ಧಾರ್ಮಿಕ ಕ್ಷೇತ್ರ ಧರ್ಮಸ್ಥಳದ ವಿರುದ್ಧ ವ್ಯವಸ್ಥಿತ ಅಪಪ್ರಚಾರದಿಂದ ಹಿಂದುಗಳ ಭಾವನೆಗೆ ಧಕ್ಕೆ ತರಲಾಗುತ್ತಿದೆ ಎಂದು ಆರೋಪಿಸಿ ಶ್ರೀ ಕ್ಷೇತ್ರ ಧರ್ಮಸ್ಥಳದ ಭಕ್ತ ವೃಂದದ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದರು.

ಪಟ್ಟಣದ ಐದು ದೀಪ ಬಳಿ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಸೇರಿ ಶ್ರೀ ಕ್ಷೇತ್ರದ ಭಕ್ತರು ಪಾಲ್ಗೊಂಡು ಅಲ್ಲಿಂದ ಡಾ.ರಾಜ್‌ಕುಮಾರ್ ವೃತ್ತ, ಹಳೇ ಬಸ್ ನಿಲ್ದಾಣ, ಡಿಸಿಸಿ ಬ್ಯಾಂಕ್ ರಸ್ತೆ ಸೇರಿ ಪ್ರಮುಖ ರಸ್ತೆಗಳಲ್ಲಿ ಜಾಥಾ ನಡೆಸಿ, ತಾಲೂಕು ಕಚೇರಿ ಮುತ್ತಿಗೆ ಹಾಕಿ ಅಪಪ್ರಚಾರದಲ್ಲಿ ತೊಡಗಿರುವ ವ್ಯಕ್ತಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಘೋಷಣೆ ಕೂಗಿದರು.

ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಮಾತನಾಡಿ, ಕೆಲವು ಕಿಡಿಗೇಡಿಗಳು ಉದ್ದೇಶಪೂರ್ವಕವಾಗಿ ಧರ್ಮಸ್ಥಳ ಕ್ಷೇತ್ರವನ್ನು ಕಲುಷಿತ ಮಾಡುವ ಹುನ್ನಾರ ನಡೆಸಿದ್ದಾರೆ. ಶ್ರೀ ಕ್ಷೇತ್ರ ಮತ್ತು ಮಂಜುನಾಥಸ್ವಾಮಿಗೆ ಕಿಂಚಿತ್ತು ಕಳಂಕ ಆಗದ ರೀತಿಯಲ್ಲಿ ಭಕ್ತರಾಗಿ ನಾವು ನಮ್ಮ ಜವಾಬ್ದಾರಿ ನಿಭಾಯಿಸಬೇಕಿದೆ ಎಂದರು.

ಪೂಜ್ಯ ವೀರೇಂದ್ರ ಹೆಗ್ಗಡೆ ಅವರ ಆಶೀರ್ವಾದದಿಂದ ಮಹಿಳೆಯರು ಆರ್ಥಿಕವಾಗಿ ಬಲವರ್ದನೆಗೊಂಡಿದ್ದಾರೆ. ಅಪಪ್ರಚಾರದ ಕಳಂಕವನ್ನು ತೊಡೆದು ಹಾಕಲು ಕ್ಷೇತ್ರದ ಭಕ್ತರೆಲ್ಲರೂ ಒಗ್ಗೂಡಿ ಹೋರಾಟ ಮಾಡಬೇಕಾದ ಅನಿವಾರ್ಯತೆ ಇದೆ. ಇದು ಯಾವುದೇ ಜಾತಿ, ಧರ್ಮ ಅಥವಾ ಪಕ್ಷದ ಹೋರಾಟ ಅಲ್ಲ. ನಾವೆಲ್ಲ ಮಂಜುನಾಥಸ್ವಾಮಿ ಭಕ್ತರಾಗಿ ಅಪಪ್ರಚಾರದ ವಿರುದ್ಧ ಹೋರಾಟ ನಡೆಸಬೇಕಿದೆ ಎಂದರು.

ಸೋಮವಾರ ಧರ್ಮಸ್ಥಳಕ್ಕೆ ರ್‍ಯಾಲಿ:

ಸೋಮವಾರ ಬೆಳಗಿನ ಜಾವ ಮಂಡ್ಯ ಮತ್ತು ಮೈಸೂರು ಭಾಗದ ಸಾವಿರಾರು ಭಕ್ತರು ನೂರಾರು ಕಾರುಗಳಲ್ಲಿ ಧರ್ಮಸ್ಥಳ ಕ್ಷೇತ್ರಕ್ಕೆ ತೆರಳುವ ಸಂಕಲ್ಪ ಮಾಡಲಾಗಿದೆ. ಈ ರ್‍ಯಾಲಿಗೆ ಎಲ್ಲರೂ ಪಕ್ಷಾತೀತವಾಗಿ ಆಗಮಿಸಬೇಕು. ಬೆಳಗ್ಗೆ 4.30 ಗಂಟೆಗೆ ಕೆಆರ್‌ಎಸ್‌ನಿಂದ ಇಲವಾಲಕ್ಕೆ ಕಾರು ರ್‍ಯಾಲಿ ಹೊರಟು ಅಲ್ಲಿಂದ ಧರ್ಮಸ್ಥಳಕ್ಕೆ ಹೊರಡಲಾಗುವುದು. ಮಂಜುನಾಥನ ಆಶೀರ್ವಾದ ಪಡೆದು ವೀರೇಂದ್ರ ಹೆಗ್ಗಡೆ ಅವರಿಗೆ ಬೆಂಬಲ ಸೂಚಿಸಲಾಗುವುದು ಎಂದು ತಿಳಿಸಿದರು.

ಮೈಷುಗರ್ ಮಾಜಿ ಅಧ್ಯಕ್ಷ ಜೆ.ಶಿವಲಿಂಗೇಗೌಡ ಮಾತನಾಡಿ, 800 ವರ್ಷಗಳ ಇತಿಹಾಸವಿರುವ ಒಂದು ಕ್ಷೇತ್ರದ ಬಗ್ಗೆ ನಿಕೃಷ್ಟ ಮಟ್ಟದಲ್ಲಿ ಅಪಪ್ರಚಾರ ಮಾಡಲಾಗುತ್ತಿದೆ. ಇದರಲ್ಲಿ ಬಹುಮುಖ್ಯ ಪಾತ್ರ ವಹಿಸಿರುವ ಗಿರೀಶ್ ಮಟ್ಟಣ್ಣನವರ್, ಅಂಚನ್, ಯೂಟ್ಯೂಬರ್ ಎಂ.ಡಿ.ಸಮೀರ್, ಮಹೇಶ್ ಶೆಟ್ಟಿ ತಿಮರೋಡಿ, ಸಂತೋಷ್ ಶೆಟ್ಟಿ ಸೇರಿದಂತೆ ಈ ಷಡ್ಯಂತ್ರ ಪಾಲುದಾರರಾಗಿರುವ ಪ್ರತಿಯೊಬ್ಬರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕಿದೆ ಎಂದು ಆಗ್ರಹಿಸಿದರು.

ಒಬ್ಬ ಅನಾಮಿಕ ವ್ಯಕ್ತಿ ಶವಗಳನ್ನು ಹೂತು ಹಾಕಿದ್ದೇನೆ ಎಂದು ಸ್ಥಳ ಗುರುತಿಸಿದ್ದಾನೆ. ಇಲ್ಲಿ ಯಾವುದೇ ಸಾಕ್ಷಿ ಅಥವಾ ಅಸ್ಥಿಪಂಜರ ಸಿಕ್ಕಿಲ್ಲ. ಆದರೂ, ಎಸ್‌ಐಟಿ ತನಿಖಾ ತಂಡ ಒಬ್ಬ ಅನಾಮಿಕನ ಸುಳ್ಳು ಹೇಳಿಕೆ ಆಧರಿಸಿ ಜೆಸಿಬಿ, ಹಿಟಾಚಿ ಮೂಲಕ ನಿರಂತರವಾಗಿ ಗುಂಡಿ ಅಗೆದು ಪರಿಶೀಲನೆ ನಡೆಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಂತರ ತಹಸೀಲ್ದಾರ್ ಅವರ ಅನುಪಸ್ಥಿತಿಯಲ್ಲಿ ಕಂದಾಯ ಶಿರಸ್ತೇದಾರ್ ಮೋಹನ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಡಾ.ಮಣಿಕರ್ಣಿಕಾ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಮಂಗಳಾ ನವೀನ್, ಕೆ.ಎಲ್.ಆನಂದ್, ಬಿಜೆಪಿ ತಾಲೂಕು ಅಧ್ಯಕ್ಷ ಧನಂಜಯ, ಜೆಡಿಎಸ್ ತಾಲೂಕು ಅಧ್ಯಕ್ಷ ಎಸ್.ಎ.ಮಲ್ಲೇಶ್, ಜಿಪಂ ಮಾಜಿ ಸದಸ್ಯ ಎಚ್.ಮಂಜುನಾಥ್, ಡಿ.ಸಿ.ಸಿ.ಬ್ಯಾಂಕ್ ನಿರ್ದೇಶಕ ಚೆಲುವರಾಜು, ಪುರಸಭೆ ಅಧ್ಯಕ್ಷೆ ಜ್ಯೋತಿಬಾಬು, ಉಪಾಧ್ಯಕ್ಷ ಆಶೋಕ್, ಹಳೇಬೀಡು ಗ್ರಾಪಂ ಅಧ್ಯಕ್ಷ ಧನಂಜಯ, ಜೆ.ಪಿ.ಶಿವಶಂಕರ್, ವಡ್ಡರಹಳ್ಳಿ ನಿಂಗೇಗೌಡ, ರಾಜ್‌ಕುಮಾರ್, ಚಂದ್ರಶೇಖರಯ್ಯ, ಅಶ್ವತ್‌ಕುಮಾರಗೌಡ, ಸ್ನೇಹಲೋಕ ಕುಮಾರ್, ಶಾಂತಿಪ್ರಸಾದ್, ಆಶೋಕ್‌ಚೆನ್ನ್, ಕಾರ್ಯದರ್ಶಿ ಪುರುಷೋತ್ತಮ್, ಎಚ್.ಎನ್.ಮಂಜುನಾಥ್, ಎಸ್.ಎನ್.ಟಿ.ಸೋಮಶೇಖರ್, ಎಚ್.ಆರ್.ಧನ್ಯಕುಮಾರ್, ವಿಜಿಕುಮಾರ್, ಶ್ರೀನಿವಾಸನಾಯಕ, ಇತರರು ಇದ್ದರು.