ಸಾರಾಂಶ
ಕನ್ನಡಪ್ರಭ ವಾರ್ತೆ ಬಳ್ಳಾರಿ
ಶ್ರೀ ಕ್ಷೇತ್ರ ಧರ್ಮಸ್ಥಳ ದೇವಾಲಯವನ್ನು ಗುರಿಯಾಗಿಸಿಕೊಂಡು ವಿನಾಕಾರಣ ಕೆಲವರು ಅಪಪ್ರಚಾರದಲ್ಲಿ ತೊಡಗಿದ್ದು, ಇದಕ್ಕೆ ಸರ್ಕಾರ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿ ಶ್ರೀ ಕ್ಷೇತ್ರ ಧರ್ಮಸ್ಥಳ ಅಭಿಮಾನಿ ವೇದಿಕೆ ನೇತೃತ್ವದಲ್ಲಿ ಬಿಜೆಪಿ, ಕಾಂಗ್ರೆಸ್ ಸೇರಿದಂತೆ ವಿವಿಧ ಪಕ್ಷಗಳ ಕಾರ್ಯಕರ್ತರು, ಸಾರ್ವಜನಿಕರು ಹಾಗೂ ಧರ್ಮಸ್ಥಳ ಭಕ್ತ ವೃಂದದ ಸದಸ್ಯರು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.ಪವಿತ್ರ ಧಾರ್ಮಿಕ ಕ್ಷೇತ್ರವಾದ ಧರ್ಮಸ್ಥಳವು ಸುಮಾರು 800 ವರ್ಷಗಳ ಇತಿಹಾಸ ಹೊಂದಿದೆ. ಈ ಕ್ಷೇತ್ರ ''''ದಕ್ಷಿಣ ಕಾಶಿ'''' ಎಂದೇ ಹೆಸರಾಗಿದೆ. ರಾಜ್ಯದಲ್ಲಷ್ಟೇ ಅಲ್ಲದೆ ತಮಿಳುನಾಡು, ಕೇರಳ, ಆಂಧ್ರಪ್ರದೇಶ ಹೀಗೆ ದೇಶದ ಬೇರೆ ಬೇರೆ ಕಡೆಗಳಿಂದ ನಿತ್ಯ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆಯಲು ನಿತ್ಯ 50 ಸಾವಿರದಿಂದ 1 ಲಕ್ಷ ಮಂದಿ ಭಕ್ತರು ಅಲ್ಲಿಗೆ ಆಗಮಿಸುತ್ತಾರೆ. ಇಂತಹ ಧಾರ್ಮಿಕ ತಾಣದ ಬಗ್ಗೆ ಅಪಪ್ರಚಾರ ಮಾಡುವ ದೃಷ್ಟಿಯಿಂದ ಕಳೆದ ಕೆಲವು ವರ್ಷಗಳಿಂದ ಕೆಲವು ಯೂಟ್ಯೂಬರ್‌ಗಳು ಹಾಗೂ ಪ್ರಗತಿಪರ ಎಂದೆನಿಸಿಕೊಂಡವರು ಶ್ರೀ ಮಂಜುನಾಥ ಸ್ವಾಮಿ ದೇವಾಲಯ ಹಾಗೂ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಮತ್ತು ಅವರ ಕುಟುಂಬಸ್ಥರ ಹೆಸರಿಗೆ ಕಳಂಕ ತರುವ ಹುನ್ನಾರ ನಡೆಸಿದ್ದಾರೆ. ಸುಳ್ಳಿನ ವೀಡಿಯೋಗಳ ತುಣುಕುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಪ್ರಯತ್ನ ನಡೆಸಿದ್ದಾರೆ. ಇದರಿಂದ ಸಮಾಜದಲ್ಲಿ ಉದ್ವಿಗ್ನತೆ ಮತ್ತು ಶಾಂತಿಭಂಗಕ್ಕೆ ಆಸ್ಪದ ಮಾಡಿಕೊಟ್ಟಂತಾಗಿದೆ ಎಂದು ಪ್ರತಿಭಟನಾಕಾರರು ದೂರಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಅನಿಲ್‌ಕುಮಾರ್ ಮೋಕಾ ಹಾಗೂ ಮಾಜಿ ಶಾಸಕ ಜಿ.ಸೋಮಶೇಖರ ರೆಡ್ಡಿ ಮಾತನಾಡಿ, ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡುತ್ತಿರುವ ದುಷ್ಕರ್ಮಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರಲ್ಲದೆ, ಅನಾಮಿಕ ವ್ಯಕ್ತಿಯೋರ್ವ ನೀಡಿದ ದೂರಿನ ಆಧಾರದಲ್ಲಿ ರಾಜ್ಯ ಸರ್ಕಾರವು ವಿಶೇಷ ತನಿಖಾ ತಂಡವನ್ನು ರಚಿಸಿ ತನಿಖೆ ನಡೆಸುತ್ತಿರುವುದನ್ನು ಶ್ರೀ ಕ್ಷೇತ್ರದ ಭಕ್ತವೃಂದದವರಾದ ನಾವೆಲ್ಲರೂ ಗೌರವದಿಂದ ಸ್ವಾಗತಿಸುತ್ತೇವೆ. ಆದರೆ ಇದೀಗ ಅನಾಮಿಕ ದೂರುದಾರನನ್ನು ಬಳಸಿಕೊಂಡು ಶ್ರೀ ಕ್ಷೇತ್ರದ ಬಗ್ಗೆ ದಿನಕ್ಕೊಂದು ರೀತಿಯಲ್ಲಿ ತಮ್ಮ ಯೂಟ್ಯೂಬ್, ಫೇಸ್‌ಬುಕ್ ಮುಂತಾದ ಸಾಮಾಜಿಕ ಜಾಲತಾಣದ ಮೂಲಕ ಸುಳ್ಳು ಮಾಹಿತಿಗಳನ್ನು ಭಿತ್ತರಿಸಿ ಭಕ್ತರಲ್ಲಿ ಗೊಂದಲ ನಿರ್ಮಿಸುತ್ತಿರುವ ವಿರುದ್ಧ ಕ್ರಮ ಕೈಗೊಳ್ಳಬೇಕು. ಅಪಪ್ರಚಾರ ಮಾಡುತ್ತಿರುವುದರ ಹಿನ್ನೆಲೆ ಏನು?, ಸುಳ್ಳು ಆರೋಪ ಮಾಡಲು ಪ್ರಚೋದಿಸುತ್ತಿರುವವರು ಯಾರು? ಈ ತಂಡಕ್ಕೆ ಹಣಕಾಸಿನ ನೆರವು ಎಲ್ಲಿಂದ ಬರುತ್ತಿದೆ? ಎಂಬುದನ್ನು ತಿಳಿಯಲು ಸೂಕ್ತ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.ಶ್ರೀಧರ್ಮಸ್ಥಳ ಅಭಿಮಾನಿ ವೇದಿಕೆಯ ವಿರುಪಾಕ್ಷಗೌಡ, ರೂಪಶ್ರೀ, ಪ್ರಶಾಂತ ಶೆಟ್ಟಿ, ಹೋಟೆಲ್ ಮಾಲೀಕರ ಸಂಘದ ಹರೀಶ್‌ಶೆಟ್ಟಿ, ಪಾಲಿಕೆ ಸದಸ್ಯ ಶ್ರೀನಿವಾಸ ಮೋತ್ಕರ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಲ್ಲಂ ಪ್ರಶಾಂತ್, ಹಿಂದು ಜಾಗರಣ ವೇದಿಕೆ, ಬಿಜೆಪಿ, ದಲಿತ ಸಂಘರ್ಷ ಸಮಿತಿ, ಬಳ್ಳಾರಿ ಹೋಟೆಲ್ ಅಸೋಸಿಯೇಷನ್, ಮೈತ್ರಿ ಮಹಿಳಾ ಕೂಟ, ಕರ್ನಾಟಕ ರಕ್ಷಣಾ ವೇದಿಕೆ ಸೇರಿದಂತೆ ಬಳ್ಳಾರಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.