ಭಕ್ತರು, ಹಿರಿಯ ವಿದ್ಯಾರ್ಥಿಗಳು ಶ್ರೀಮಠದ ನಿಜವಾದ ಆಸ್ತಿ: ರಂಗಾಪುರ ಶ್ರೀ

| Published : Jun 04 2024, 12:31 AM IST

ಭಕ್ತರು, ಹಿರಿಯ ವಿದ್ಯಾರ್ಥಿಗಳು ಶ್ರೀಮಠದ ನಿಜವಾದ ಆಸ್ತಿ: ರಂಗಾಪುರ ಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ಶ್ರೀಮಠದ ಭಕ್ತರಾದಿಯಾಗಿ ಎಲ್ಲರೂ ತಮ್ಮ ಮಕ್ಕಳಿಗೆ ಉತ್ತಮ ವಿದ್ಯೆ, ಸಂಸ್ಕಾರ, ಆಚಾರ ವಿಚಾರಗಳನ್ನು ನೀಡಿ ಉತ್ತಮ ವ್ಯಕ್ತಿಗಳನ್ನಾಗಿಸುವತ್ತ ಹೆಚ್ಚಿನ ಒತ್ತು ನೀಡಬೇಕು.

ಕನ್ನಡಪ್ರಭ ವಾರ್ತೆ ತಿಪಟೂರು

ಕಲ್ಪತರು ನಾಡಿನ ಪ್ರಸಿದ್ಧ ಕೆರೆಗೋಡಿ-ರಂಗಾಪುರ ಸುಕ್ಷೇತ್ರದ ತ್ರಿವಿಧ ದಾಸೋಹಿಗಳಾದ ಕೆರೆಗೋಡಿ-ರಂಗಾಪುರ ಸುಕ್ಷೇತ್ರಾಧ್ಯಕ್ಷ, ಶ್ರೀ ಗುರುಪರದೇಶಿಕೇಂದ್ರ ಸ್ವಾಮೀಜಿಯವರಿಗೆ, ಸುಕ್ಷೇತ್ರದ ಹಿರಿಯ ವಿದ್ಯಾರ್ಥಿಗಳ ಹಾಗೂ ಶ್ರೀ ಕ್ಷೇತ್ರಾಭಿಮಾನಿಗಳ ಸಂಘದ ಬೆಂಗಳೂರು ಶಾಖಾ ವತಿಯಿಂದ ಬೆಂಗಳೂರಿನ ಅಡಕಮಾರನಹಳ್ಳಿಯ ಶ್ರೀ ಗುರುಪೀಠದಲ್ಲಿ ಗುರುವಂದನಾ ಮಹೋತ್ಸವ ಹಾಗೂ ಭಕ್ತಿ ಸಮರ್ಪಣಾ ಕಾರ್ಯಕ್ರಮವನ್ನು ಅದ್ಧೂರಿಯಾಗಿ ನೆರವೇರಿಸಲಾಯಿತು.

ಗುರುವಂದನೆ ಸ್ವೀಕರಿಸಿದ ಶ್ರೀ ಗುರುಪರದೇಶಿಕೇಂದ್ರ ಸ್ವಾಮೀಜಿಯವರು ಆಶೀರ್ವಚನ ನೀಡಿ, ಭಕ್ತರೇ ಶ್ರೀಮಠದ ನಿಜವಾದ ಆಸ್ತಿಯಾಗಿದ್ದು, ಅವರೆಲ್ಲರ ಅಪೇಕ್ಷೆ, ಇಚ್ಛೆಯಂತೆ ಶ್ರೀ ಮಠವು ಗ್ರಾಮೀಣ ಭಾಗದ ಮಕ್ಕಳಿಗೆ ಒಂದನೇ ತರಗತಿಯಿಂದ ಪ್ರೌಢಶಾಲೆ, ಪಿಯುಸಿ, ಐಟಿಐ ಸೇರಿ ಡಿಪ್ಲೊಮೋ ಶಿಕ್ಷಣವನ್ನು ವಸತಿ ಸಹಿತ ಉಚಿತ ಹಾಗೂ ತಾಂತ್ರಿಕ ಶಿಕ್ಷಣವನ್ನು ಅತ್ಯಂತ ಕಡಿಮೆ ಖರ್ಚಿನಲ್ಲಿ ನೀಡಲಾಗುತ್ತಿದೆ. ಪ್ರತಿಯೊಬ್ಬರೂ ವಿದ್ಯಾವಂತರಾದಾಗ ಮಾತ್ರ ಕುಟುಂಬ ಹಾಗೂ ದೇಶ ಅಭಿವೃದ್ಧಿಯಾಗಲು ಸಾಧ್ಯವಿದ್ದು, ಈ ನಿಟ್ಟಿನಲ್ಲಿ ನಾವು ಹೆಚ್ಚು ತೊಡಗಿಸಿಕೊಂಡಿದ್ದು ಇದಕ್ಕೆಲ್ಲ ಭಕ್ತರು ನೀಡುವ ಬಿಕ್ಷಯೇ ಆಧಾರವಾಗಿದೆ. ನಮ್ಮ ಶ್ರೀಮಠದಿಂದ ಶಿಕ್ಷಣ ಪಡೆದು ಬೆಂಗಳೂರು ಸೇರಿ ರಾಜ್ಯ, ಹೊರರಾಜ್ಯಗಳಲ್ಲಿ ಸೇವೆ ಸಲ್ಲಿಸುತ್ತ ನಮ್ಮ ಮೇಲೆ ಹಿರಿಯ ವಿದ್ಯಾರ್ಥಿಗಳು ಇಟ್ಟಿರುವ ಗೌರವ, ಪ್ರೀತಿ, ನಂಬಿಕೆ ಹಾಗೂ ಭಕ್ತರ ಭಕ್ತಿಯೇ ಇಂದಿನ ಗುರುವಂದನೆಗೆ ಹಾಗೂ ಭಕ್ತಿ ಸಮರ್ಪಣೆಗೆ ಕಾರಣವಾಗಿದೆ. ಶ್ರೀ ಮಠದ ಎಲ್ಲ ಕಾರ್ಯಕ್ರಮಗಳಲ್ಲೂ ಹಿರಿಯ ವಿದ್ಯಾರ್ಥಿಗಳು ಅಧ್ಯಕ್ಷ ಶಿವಪ್ಪನವರ ನೇತೃತ್ವದಲ್ಲಿ ತೊಡಗಿಸಿಕೊಂಡಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ಒಗ್ಗಟ್ಟಿನಿಂದ ಶ್ರೀಮಠದ ಅಬೀವೃದ್ಧಿಗೆ ಕೈಜೋಡಿಸಿ ಶ್ರಮಿಸಬೇಕಾಗಿದೆ. ಶ್ರೀಮಠದ ಭಕ್ತರಾದಿಯಾಗಿ ಎಲ್ಲರೂ ತಮ್ಮ ಮಕ್ಕಳಿಗೆ ಉತ್ತಮ ವಿದ್ಯೆ, ಸಂಸ್ಕಾರ, ಆಚಾರ ವಿಚಾರಗಳನ್ನು ನೀಡಿ ಉತ್ತಮ ವ್ಯಕ್ತಿಗಳನ್ನಾಗಿಸುವತ್ತ ಹೆಚ್ಚಿನ ಒತ್ತು ನೀಡಬೇಕು. ರಾಜ್ಯದಲ್ಲಿ ಉತ್ತಮ ಮಳೆಯಾಗಿ ಸಂಕಷ್ಟದಲ್ಲಿರುವ ಅನ್ನದಾತರ ಕೃಷಿಗೆ ಬಲ ನೀಡಿ ಅವರ ಜೀವನ ನೆಮ್ಮದಿಯಾಗಿರಲೆಂದು ಹಾರೈಸಿದರು.

ಕಾರ್ಯಕ್ರಮದಲ್ಲಿ ಗೋಡೆಕೆರೆ ಭೂ ಸುಕ್ಷೇತ್ರದ ಚರಪಟ್ಟಾಧ್ಯಕ್ಷ ಶ್ರೀಮೃತ್ಯುಂಜಯ ದೇಶೀಕೇಂದ್ರ ಸ್ವಾಮೀಜಿ ದಿವ್ಯ ನೇತೃತ್ವ ವಹಿಸಿದ್ದರು. ಮಾಡಾಳು ನಿರಂಜನ ಪೀಠಾಧ್ಯಕ್ಷ ಶ್ರೀ ರುದ್ರಮುನಿ ಮಹಾಸ್ವಾಮೀಜಿ, ಗೊಲ್ಲಹಳ್ಳಿ ಶ್ರೀ ಸಿದ್ಧಲಿಂಗೇಶ್ವರ ಮಹಾ ಸಂಸ್ಥಾನ ಮಠಾಧ್ಯಕ್ಷ ಶ್ರೀ ವಿಭವ ವಿದ್ಯಾಶಂಕರ ದೇಶೀಕೇಂದ್ರದ ಮಹಾಸ್ವಾಮೀಜಿಯವರು ಭಾಗವಹಿಸಿ ಆಶೀರ್ವಚನ ನೀಡಿದರು.

ಸಭೆಯಲ್ಲಿ ರಾಜ್ಯ ಚಲನಚಿತ್ರ ಮಂಡಳಿ ಅಧ್ಯಕ್ಷ ಉಮೇಶ್ ಬಣಕಾರ್, ಹಿರಿಯ ವಿದ್ಯಾರ್ಥಿಗಳ ಹಾಗೂ ಶ್ರೀ ಕ್ಷೇತ್ರಾಭಿಮಾನಿಗಳ ಸಂಘದ ಅಧ್ಯಕ್ಷ ಯು.ಕೆ. ಶಿವಪ್ಪ, ಜೇನುಗೂಡು ಬಳಗದ ಅಧ್ಯಕ್ಷ ಚಿಕ್ಕೂರು ರಾಜಣ್ಣ, ಹಿರಿಯ ವಿದ್ಯಾರ್ಥಿ ಹಾಗೂ ಕ್ಷೇತ್ರಾಭಿಮಾನಿ ಸಂಘದ ಅಧ್ಯಕ್ಷ ಸತೀಶ್‌ಕುಮಾರ್, ಸಂಘದ ಕಾರ್ಯದರ್ಶಿ ರಾಜಾನಾಯ್ಕ, ಆಡಿಟರ್ ರಮೇಶ್, ಸೇರಿ ಮಧುಸೂದನ್, ಶ್ರೀಮಠದ ಹಳೆಯ ವಿದ್ಯಾರ್ಥಿಗಳು, ಭಕ್ತರು, ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀಗಳಿಂದ ಆಶೀರ್ವಾದ ಪಡೆದುಕೊಂಡರು.