ಪ್ರಮುಖ ಬೀದಿಗಳಲ್ಲಿ ಸಾಗಿದ ಗಣಪತಿ ಮೂರ್ತಿಯ ಮೆರವಣಿಗೆಯನ್ನು ವೀಕ್ಷಿಸಲು ಅಪಾರ ಸಂಖ್ಯೆಯಲ್ಲಿ ಸಾರ್ವಜನಿಕರು ಜಮಾಯಿಸಿದ್ದರು. ಭಕ್ತರು ಗಣಪತಿ ನಾಮಸ್ಮರಣೆ, ಜಯಘೋಷಗಳೊಂದಿಗೆ ಮೆರವಣಿಗೆಯಲ್ಲಿ ಸಾಗಿದರು.

ಮುಂಡಗೋಡ: ಪಟ್ಟಣದ ಹಿಂದೂ ಮಹಾಗಣಪತಿ ವಿಸರ್ಜನಾ ಮೆರವಣಿಗೆ ಶನಿವಾರ ಸಂಜೆ ಅತ್ಯಂತ ವಿಜೃಂಭಣೆಯಿಂದ ನಡೆಯಿತು. ವಿವಿಧ ಕಲಾ ತಂಡಗಳ ಆಕರ್ಷಕ ಪ್ರದರ್ಶನ, ವಾದ್ಯಗಳ ಮೊಳಗುವಿಕೆ ಹಾಗೂ ಸಾವಿರಾರು ಭಕ್ತರ ಉತ್ಸಾಹದಿಂದ ಪಟ್ಟಣದ ಪ್ರಮುಖ ಬೀದಿಗಳು ಹಬ್ಬದ ವಾತಾವರಣದಲ್ಲಿ ಕಂಗೊಳಿಸಿದವು.

ಮೆರವಣಿಗೆಯಲ್ಲಿ ಬೇಡರ ವೇಷ, ಗೊಂಬೆ ಕುಣಿತ, ಡೊಳ್ಳು ವಾದನ, ನಾಸಿಕ್ ಡೋಲ್, ಪಂಜಾಬ್ ತಾಷಾ ಸೇರಿದಂತೆ ವಿವಿಧ ಕಲಾ ತಂಡಗಳು ಪಾಲ್ಗೊಂಡು ನೋಡುಗರ ಕಣ್ಮನ ಸೆಳೆದವು.

ಪ್ರಮುಖ ಬೀದಿಗಳಲ್ಲಿ ಸಾಗಿದ ಗಣಪತಿ ಮೂರ್ತಿಯ ಮೆರವಣಿಗೆಯನ್ನು ವೀಕ್ಷಿಸಲು ಅಪಾರ ಸಂಖ್ಯೆಯಲ್ಲಿ ಸಾರ್ವಜನಿಕರು ಜಮಾಯಿಸಿದ್ದರು. ಭಕ್ತರು ಗಣಪತಿ ನಾಮಸ್ಮರಣೆ, ಜಯಘೋಷಗಳೊಂದಿಗೆ ಮೆರವಣಿಗೆಯಲ್ಲಿ ಸಾಗಿದರು. ಯುವಕರು ವಾದ್ಯಗಳ ನಾದಕ್ಕೆ ಹೆಜ್ಜೆ ಹಾಕಿ ಸಂಭ್ರಮಿಸಿದರು. ಮೆರವಣಿಗೆ ಸಾಗಿದ ಮಾರ್ಗದುದ್ದಕ್ಕೂ ಜನರು ಭಕ್ತಿಭಾವದಿಂದ ಗಣಪತಿಯನ್ನು ವೀಕ್ಷಿಸಿ ಪೂಜೆ ಸಲ್ಲಿಸಿದರು.

ಕಣ್ಮನ ಸೆಳೆದ ಕಲಾ ವೈಭವ: ಹಿಂದೂ ಮಹಾಗಣಪತಿ ವಿಸರ್ಜನಾ ಮೆರವಣಿಗೆಯಲ್ಲಿ ಬೇಡರ ವೇಷ ಗೊಂಬೆ ಕುಣಿತ, ಡೊಳ್ಳು ವಾದನ ಹಾಗೂ ನಾಸಿಕ್ ಡೋಲ್, ಪಂಜಾಬ್ ತಾಷಾ ಸೇರಿದಂತೆ ವಿವಿಧ ಕಲಾ ತಂಡಗಳ ಪ್ರದರ್ಶನ ಮೆರವಣಿಗೆಗೆ ವಿಶೇಷ ಮೆರುಗು ನೀಡಿತು. ಪ್ರಮುಖ ಬೀದಿಗಳಲ್ಲಿ ಸಾಗಿದ ಮೆರವಣಿಗೆಯನ್ನು ಕಣ್ತುಂಬಿಕೊಳ್ಳಲು ಸಾವಿರಾರು ಜನರು ನೆರೆದಿದ್ದರು.

ರಾತ್ರಿ ಸುಮಾರು ೧೧ ಗಂಟೆ ವೇಳೆಗೆ ಮೆರವಣಿಗೆ ಪಟ್ಟಣದ ಶಿವಾಜಿ ಸರ್ಕಲ್ ತಲುಪಿತು. ಬಳಿಕ ಗಣಪತಿ ಮೂರ್ತಿಯನ್ನು ಬಸವಣ್ಣ ದೇವಾಲಯದ ಆವರಣದಲ್ಲಿರುವ ಹೊಂಡಕ್ಕೆ ಕೊಂಡೊಯ್ದು ಸಾಂಪ್ರದಾಯಿಕ ವಿಧಿವಿಧಾನಗಳೊಂದಿಗೆ ವಿಸರ್ಜನೆ ನೆರವೇರಿಸಲಾಯಿತು.

ಬಿಗಿ ಪೊಲೀಸ್ ಬಂದೋಬಸ್ತ್: ಹಿಂದೂ ಮಹಾಗಣಪತಿ ವಿಸರ್ಜನಾ ಮೆರವಣಿಗೆಯ ಹಿನ್ನೆಲೆಯಲ್ಲಿ ಪಟ್ಟಣದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಮೆರವಣಿಗೆ ಸಾಗುವ ಪ್ರಮುಖ ಬೀದಿಗಳು, ಶಿವಾಜಿ ಸರ್ಕಲ್ ಸೇರಿದಂತೆ ಸೂಕ್ಷ್ಮ ಸ್ಥಳಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರು ನಿಯೋಜಿಸಲಾಗಿತ್ತು. ಮೆರವಣಿಗೆ ಶಾಂತಿಯುತವಾಗಿ ಸಾಗಲು ಪೊಲೀಸರು ಕಟ್ಟುನಿಟ್ಟಿನ ನಿಗಾ ವಹಿಸಿದ್ದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು.