ವಿಜೃಂಭಣೆಯ ಗುಂಜಾನರಸಿಂಹ ಸ್ವಾಮಿ ದಿವ್ಯ ಬ್ರಹ್ಮರಥೋತ್ಸವ

| Published : Mar 27 2024, 01:10 AM IST

ವಿಜೃಂಭಣೆಯ ಗುಂಜಾನರಸಿಂಹ ಸ್ವಾಮಿ ದಿವ್ಯ ಬ್ರಹ್ಮರಥೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ರಥೋತ್ಸವಕ್ಕೆ ಚಾಲನೆ ನೀಡುವ ವೇಳೆ ಚಾಮರಾಜನಗರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್. ಬಾಲರಾಜ್ ಹಾಗೂ ಕಾಂಗ್ರೆಸ್ ಸಂಭಾವ್ಯ ಅಭ್ಯರ್ಥಿ ಸುನಿಲ್ ಬೋಸ್ ಮುಖಾಮುಖಿಭೇಟಿಯಾದರು. ಆದರೆ ಒಬ್ಬರ ಮುಖ ಒಬ್ಬರು ನೋಡಲಿಲ್ಲ, ಮಾತನಾಡಲಿಲ್ಲ. ಬಿಜೆಪಿ ಕಾರ್ಯಕರ್ತರೊಂದಿಗೆ ಬಾಲರಾಜ್, ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಸುನಿಲ್ ಬೋಸ್ ಪೋಟೋಗೆ ಪೋಸ್ ಕೊಟ್ಟು ರಥಕ್ಕೆ ಪೂಜೆ ಸಲ್ಲಿಸಿ ಅಲ್ಲಿಂದ ತೆರಳಿದರು. ಚುನಾವಣೆ ಕಣ ಇನ್ನೂ ರಂಗೇರಿಲ್ಲವಾದರೂ ಇಬ್ಬರ ನಡೆ ತೀವ್ರ ಕುತೂಹಲ ಕೆರಳಿಸಿತು.

ಕನ್ನಡಪ್ರಭ ವಾರ್ತೆ ಟಿ. ನರಸೀಪುರ

ತ್ರಿವೇಣಿ ಸಂಗಮ ಕ್ಷೇತ್ರ ಹಾಗೂ ದಕ್ಷಿಣ ಕಾಶಿ ಖ್ಯಾತಿಯ ತಿರುಮಕೂಡಲು ನರಸೀಪುರದ ಪ್ರಸಿದ್ಧ ಶ್ರೀ ಗುಂಜಾನರಸಿಂಹ ಸ್ವಾಮಿಯವರ ದಿವ್ಯ ಬ್ರಹ್ಮರಥೋತ್ಸವ ಸಹಸ್ರಾರು ಭಕ್ತಾದಿಗಳ ಹರ್ಷೋದ್ಗಾರದ ನಡುವೆ ಮಂಗಳವಾರ ವಿಜೃಂಭಣೆಯಿಂದ ನೆರವೇರಿತು.

ತಹಸೀಲ್ದಾರ್ ಟಿ.ಜೆ. ಸುರೇಶ್ ಆಚಾರ್ ಅವರ ಗೈರಿನಲ್ಲಿ ಆರ್ಐ ಮಹೇಂದ್ರ ದೇವಸ್ಥಾನದ ಮುಂಭಾಗ ಅಲಂಕೃತಗೊಂಡು ಕಂಗೊಳಿಸುತ್ತಿದ್ದ ರಥಕ್ಕೆ ಪೂಜೆ ಸಲ್ಲಿಸುವ ಮೂಲಕ ದಿವ್ಯೋತ್ಸವಕ್ಕೆ ಚಾಲನೆ ನೀಡಿದರು.

ನಂತರ ದೇವಸ್ಥಾನದ ಮುಂಭಾಗ ವಿವಿಧ ಜಿಲ್ಲೆ ಮತ್ತು ತಾಲೂಕಿನಿಂದ ಆಗಮಿಸಿ ಜಮಾವಣೆಗೊಂಡಿದ್ದ ಸಹಸ್ರಾರು ಭಕ್ತಾದಿಗಳು ಭಕ್ತಿ ಭಾವದಿಂದ ರಥವನ್ನು ಎಳೆದರು. ದೇವಾಲಯದ ಮುಂಭಾಗದಿಂದ ಆರಂಭಗೊಂಡ ರಥೋತ್ಸವ ವಿಶ್ವ ಕರ್ಮ ರಸ್ತೆ, ಪ್ರಾಥಮಿಕ ಶಾಲೆ ರಸ್ತೆ ಮೂಲಕ ಸಂಚರಿಸಿದ ನಂತರ ತೇರಿನ ಬೀದಿಗೆ ಆಗಮಿಸಿ ಯಾವುದೇ ಅಡೆತಡೆ ಇಲ್ಲದೇ ಸ್ವಸ್ಥಾನ ತಲುಪಿತು.

ಅಲಂಕೃತ ಗೊಂಡಿದ್ದ ರಥದಲ್ಲಿ ವೀರಾಜಮಾನರಾಗಿದ್ದ ಮಹಾಲಕ್ಷ್ಮಿ ಸಮೇತ ಶ್ರೀ ಗುಂಜಾನರಸಿಂಹ ಸ್ವಾಮಿ ಉತ್ಸವ ಮೂರ್ತಿಗಳನ್ನು ಕಂಡು ಪುಳಕಿತರಾದ ಭಕ್ತರು ರಥೋತ್ಸವದ ವೈಭವವನ್ನು ಕಣ್ತುಂಬಿಕೊಂಡರು. ಚಲಿಸುತ್ತಿದ್ದ ರಥಕ್ಕೆ ಹಣ್ಣು ಜವನ ಎಸೆದು ಧನ್ಯತೆ ಮೆರೆದರು.

ರಥೋತ್ಸವದ ಹಿನ್ನೆಲೆ ಪಟ್ಟಣ ಸೇರಿದಂತೆ ಗುಂಜಾನರಸಿಂಹ ಸ್ವಾಮಿ ದೇವಸ್ಥಾನ ಜನ ಸಾಗರದಿಂದ ತುಂಬಿಹೋಗಿತ್ತು. ಈ ಬಾರಿ ಯುವಕರ ಬಣ್ಣದೋಕುಳಿಗೆ ನಿಷೇಧ ಹೇರಲಾಗಿತ್ತು. ನೆತ್ತಿ ಸುಡುವ ಸುಡು ಬಿಸಿಲಿನ ನಡುವೆಯೂ ಸಹಸ್ರಾರು ಮಂದಿಭಕ್ತಾದಿಗಳು ಉತ್ಸವದಲ್ಲಿ ಪಾಲ್ಗೊಂಡು ಭಕ್ತಿ ಭಾವ ಮೆರೆದರು.

ರಥೋತ್ಸವದ ಅಂಗವಾಗಿ ದೇವಾಲಯಗಳಲ್ಲಿ ಬೆಳಗ್ಗೆಯಿಂದಲೇ ಪ್ರಧಾನ ಅರ್ಚಕ ಸಂಪತ್ ಕುಮಾರ್, ಆಗಮಿಕ ರಾಜೀವ್ ನೇತೃತ್ವದಲ್ಲಿ ಧಾರ್ಮಿಕ ಕೈಂಕರ್ಯಗಳು,ಅಭಿಷೇಕ ಉತವಗಳು ಸಾಂಗವಾಗಿ ನೆರವೇರಿದವು.

ಪಟ್ಟಣದ ರಥದ ಬೀದಿಗಳಲ್ಲಿ ಉತ್ಸವ ಮೂರ್ತಿಗಳ ಮೆರವಣಿಗೆಯ ಮಂಟಪೋತ್ಸವ ನಡೆಯಿತು. ಮಧುವಣಗಿತ್ತಿಯಂತೆ ಸಿಂಗಾರಗೊಂಡಿದ್ದ ರಥದ ಬಳಿಗೆ ಉತ್ಸವ ಮೂರ್ತಿಗಳನ್ನು ಹೊತ್ತು ತಂದು ವೇದ ಮಂತ್ರ ಪಠಿಸಿ ರಥದಲ್ಲಿ ಪ್ರತಿಷ್ಠಾಪಿಸಲಾಯಿತು.

ಸಂಪ್ರದಾಯ ಪಾಲನೆ!

ಅನೇಕ ವರ್ಷಗಳಿಂದಲೂ ನಡೆದು ಬಂದ ಸಂಪ್ರದಾಯದಂತೆ ವ್ಯಾಸರಾಜಪುರ ಗ್ರಾಮದ ಯಜಮಾನರು ಆಲಗೂಡು ಗ್ರಾಮಕ್ಕೆ ತೆರಳಿ ಅಲ್ಲಿನ ಯಜಮಾನರನ್ನು ರಥೋತ್ಸವದಲ್ಲಿ ಭಾಗವಹಿಸುವಂತೆ ಆಹ್ವಾನ ನೀಡಿ ಅವರನ್ನು ಕರೆತಂದು ಪಟ್ಟಣದ ಯಜಮಾನರ ಜೊತೆಗೂಡಿ ಮಹಾ ಮಂಗಳಾರತಿ ನೆರವೇರಿಸಿ ಪ್ರದಕ್ಷಿಣೆ ಹಾಕಿದರು. ಉತ್ಸವ ಮೂರ್ತಿಗಳಿಗೆ ಮಹಾಮಂಗಳಾರತಿ ನೆರವೇರಿದ ನಂತರ ಬ್ರಹ್ಮ ರಥೋತ್ಸವ ವಿದ್ಯುಕ್ತವಾಗಿ ಆರಂಭವಾಯಿತು.

ರಥೋತ್ಸವದ ಹಿನ್ನೆಲೆ ಮಾಜಿ ಶಾಸಕ ಹಾಗೂ ಚಾಮರಾಜನಗರ ಮೀಸಲು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್. ಬಾಲರಾಜ್ ಹಾಗೂ ಕಾಂಗ್ರೆಸ್ ಸಂಭಾವ್ಯ ಅಭ್ಯರ್ಥಿ ಸುನಿಲ್ ಬೋಸ್ ಭೇಟಿ ನೀಡಿ ದೇವರ ದರ್ಶನ ಪಡೆದರು.

ನೀರು ಮಜ್ಜಿಗೆ ಪಾನಕ ವಿತರಣೆ..!

ರಥೋತ್ಸವದ ಹಿನ್ನೆಲೆ ಪಟ್ಟಣದಾದ್ಯಂತ ವರ್ತಕರು, ವಿವಿಧ ಸಂಘಟನೆಗಳ ಮುಖ್ಯಸ್ಥರು, ಜವಳಿ ಅಂಗಡಿ ಮಾಲೀಕರು, ಆಟೋ ಸಂಘದ ಮಾಲೀಕರು, ಶಾಮೀಯಾನ ಅಂಗಡಿಯವರು, ಹೋಟೇಲ್ ಮಾಲೀಕರ ಸಂಘದವರು ಭಕ್ತಾದಿಗಳಿಗೆ ನೀರು ಮಜ್ಹಿಗೆ ಪಾನಕ ನೀಡುವ ಮೂಲಕ ಬಿಸಿಲಿನ ಝಳದಿಂದ ನಲುಗಿದ್ದ ದೇಹಕ್ಕೆ ತಂಪೆರೆಯುವಂತೆ ಮಾಡಿದರು.ಪಟ್ಟಣದ ಬಹುತೇಕ ಎಲ್ಲ ಭಾಗದಲ್ಲಿಯೂ ಬಗೆ ಬಗೆಯ ಪ್ರಸಾದ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಯುವಕರ ಬಣ್ಣದೋಕುಳಿ ಪೊಲೀಸರ ಲಾಠಿ ರುಚಿ!

ರಥೋತ್ಸವದ ವೇಳೆ ಬಣ್ಣದೋಕುಳಿಗೆ ತಾಲೂಕು ಆಡಳಿತ ನಿಷೇಧ ಹೇರಿತ್ತು. ಆದರೂ ಕಲ ಯುವಕರು ಪರಸ್ಪರ ಬಣ್ಣ ಎರಚಿ ಕಿಚ್ಚ ಸುದೀಪ್ ಭಾವಚಿತ್ರ ಇರುವ ಬಾವುಟವನ್ನು ಉತ್ಸವದ ವೇಳೆ ಪ್ರದರ್ಶಿಸಲು ಮುಂದಾದರು. ಆದರೆ ಇದಕ್ಕೆ ಅವಕಾಶ ಕೊಡದ ಪೊಲೀಸರು ಅವರಿಗೆ ಲಾಠಿ ರುಚಿ ತೋರಿಸಿ ಅಲ್ಲಿಂದ ಚದುರಿಸಿದರು.

ಮುಖಾ ಮುಖಿಯಾದರೂ ಮಾತಿಲ್ಲ..!

ರಥೋತ್ಸವಕ್ಕೆ ಚಾಲನೆ ನೀಡುವ ವೇಳೆ ಚಾಮರಾಜನಗರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್. ಬಾಲರಾಜ್ ಹಾಗೂ ಕಾಂಗ್ರೆಸ್ ಸಂಭಾವ್ಯ ಅಭ್ಯರ್ಥಿ ಸುನಿಲ್ ಬೋಸ್ ಮುಖಾಮುಖಿಭೇಟಿಯಾದರು. ಆದರೆ ಒಬ್ಬರ ಮುಖ ಒಬ್ಬರು ನೋಡಲಿಲ್ಲ, ಮಾತನಾಡಲಿಲ್ಲ. ಬಿಜೆಪಿ ಕಾರ್ಯಕರ್ತರೊಂದಿಗೆ ಬಾಲರಾಜ್, ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಸುನಿಲ್ ಬೋಸ್ ಪೋಟೋಗೆ ಪೋಸ್ ಕೊಟ್ಟು ರಥಕ್ಕೆ ಪೂಜೆ ಸಲ್ಲಿಸಿ ಅಲ್ಲಿಂದ ತೆರಳಿದರು. ಚುನಾವಣೆ ಕಣ ಇನ್ನೂ ರಂಗೇರಿಲ್ಲವಾದರೂ ಇಬ್ಬರ ನಡೆ ತೀವ್ರ ಕುತೂಹಲ ಕೆರಳಿಸಿತು.

ದೇವಸ್ಥಾನ ಪಾರುಪತ್ತೆದಾರ್ ಪ್ರದೀಪ್, ಪುಳ್ಳಾರಿಗೌಡ, ನಾಯಕ ಸಮಾಜದ ಯಜಮಾನ ಮಹದೇವಪ್ಪ, ಪುರಸಭೆ ಸದಸ್ಯ ಎಸ್.ಕೆ. ಕಿರಣ್, ನಾಗರಾಜು, ಬಾದಾಮಿಮಂಜು, ಹುಣಸೂರು ಬಸವಣ್ಣ, ಟಿ.ಎಂ. ನಂಜುಂಡಸ್ವಾಮಿ, ಮಾಜಿ ಅಧ್ಯಕ್ಷ ಮಹದೇವಸ್ವಾಮಿ, ಬಸವಣ್ಣ, ಬಿಜೆಪಿ ಅಧ್ಯಕ್ಷ ಶಿವಕುಮಾರ್ ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.