ಗೊಲ್ಲರಹಳ್ಳಿಯಿಂದ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಹೊರಟ ಭಕ್ತರು

| Published : Feb 24 2025, 12:35 AM IST

ಸಾರಾಂಶ

ಹಲಗೂರು ಗ್ರಾಮದ ಶ್ರೀಕಾಳಿಕಾಂಬ ದೇವಸ್ಥಾನದ ಆವರಣದಲ್ಲಿ ಗೊಲ್ಲರಹಳ್ಳಿ, ನಂಜಾಪುರ, ಮಡಳ್ಳಿ, ಮರಿಗೌಡನ ದೊಡ್ಡಿ, ಗಾಣಾಳು ಮತ್ತು ಹಲಗೂರು ಸೇರಿದಂತೆ ವಿವಿಧ ಗ್ರಾಮಗಳ ಮಾದಪ್ಪನ ಸಾವಿರಾರು ಭಕ್ತಾದಿಗಳು ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ನಂತರ ಉಘೇ ಮಾದಪ್ಪ ಉಘೇ ಮಾದಪ್ಪ ಎಂಬ ಘೋಷಣೆಗಳನ್ನು ಕೂಗುತ್ತಾ ಬೆಳಗ್ಗೆ ಪಾದಯಾತ್ರೆ ಮೂಲಕ ತೆರಳಿದರು.

ಕನ್ನಡಪ್ರಭ ವಾರ್ತೆ ಹಲಗೂರು

ಸಮೀಪದ ಗೊಲ್ಲರಹಳ್ಳಿಯಿಂದ ವಿವಿಧ ಗ್ರಾಮಗಳ ಗ್ರಾಮಸ್ಥರು ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಹೊರಟರು.

ಗ್ರಾಮದ ಶ್ರೀಕಾಳಿಕಾಂಬ ದೇವಸ್ಥಾನದ ಆವರಣದಲ್ಲಿ ಗೊಲ್ಲರಹಳ್ಳಿ, ನಂಜಾಪುರ, ಮಡಳ್ಳಿ, ಮರಿಗೌಡನ ದೊಡ್ಡಿ, ಗಾಣಾಳು ಮತ್ತು ಹಲಗೂರು ಸೇರಿದಂತೆ ವಿವಿಧ ಗ್ರಾಮಗಳ ಮಾದಪ್ಪನ ಸಾವಿರಾರು ಭಕ್ತಾದಿಗಳು ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ನಂತರ ಉಘೇ ಮಾದಪ್ಪ ಉಘೇ ಮಾದಪ್ಪ ಎಂಬ ಘೋಷಣೆಗಳನ್ನು ಕೂಗುತ್ತಾ ಬೆಳಗ್ಗೆ ಪಾದಯಾತ್ರೆ ಮೂಲಕ ತೆರಳಿದರು.

ಈ ವೇಳೆ ಗೊಲ್ಲರಹಳ್ಳಿ ಜಿ.ಎಂ.ಮಹದೇವು ಮಾತನಾಡಿ, ಪುರಾತನ ಕಾಲದಿಂದಲೂ ನಮ್ಮ ಗ್ರಾಮಸ್ಥರು, ಊರಿನ ಯಜಮಾನರು, ಮುಖಂಡರು ಹಾಗೂ ಅಕ್ಕ ಪಕ್ಕದ ಗ್ರಾಮದವರೆಲ್ಲರೂ ಸೇರಿ ಪ್ರತಿ ವರ್ಷವೂ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆಯಲ್ಲಿ ಹೋಗುತ್ತಿದ್ದೇವೆ ಎಂದರು.

ಸಕಾಲಕ್ಕೆ ಮಳೆಯಾಗಿ ರೈತರು ಸಮೃದ್ಧಿಯಿಂದ ಜೀವನ ನಡೆಸಲಿ ಎಂಬ ಧ್ಯೇಯ ಉದ್ದೇಶ ಇಟ್ಟುಕೊಂಡು ನಾವು ಮಾದಪ್ಪನ ದರ್ಶನ ಪಡೆಯಲು ಪಾದಯಾತ್ರೆ ಮಾಡಿ ಕೊಂಡು ಬರುತ್ತಿದ್ದೇವೆ. ಇದರಲ್ಲಿ ವೃದ್ಧರು, ಯುವಕರು ಯುವತಿಯರು, ಮಹಿಳೆಯರು ಹಾಗೂ ಮಕ್ಕಳು ಎಲ್ಲರೂ ಸೇರಿ ಈ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುತ್ತೇವೆ ಎಂದರು.

ಪಾದಯಾತ್ರೆಯಲ್ಲಿ ಹೊರಟ ಭಕ್ತಾದಿಗಳು ಕಂಸಾಳೆ ಬಾರಿಸುತ್ತಾ ಮಹದೇಶ್ವರ ಸ್ವಾಮಿಯದೇವರ ಸತ್ತಿಗೆ ಹೊತ್ತು ಹೋಗುತ್ತಿದ್ದಾಗ ಮಾರ್ಗ ಮಧ್ಯೆ ಸಿಗುವ ಗ್ರಾಮದವರು ತಮ್ಮ ಕಾಣಿಕೆಗಳನ್ನು ನೀಡಿ ಕೈಮುಗಿದು ಅವರನ್ನು ಬೀಳ್ಕೊಡುತ್ತಿದ್ದರು. ಭಕ್ತಾದಿಗಳು ಮಾದಪ್ಪನ ಬಗ್ಗೆ ಹಾಡುಗಳನ್ನು ಹಾಡುತ್ತಾ ತಮ್ಮ ಆಯಾಸವನ್ನು ಮರೆಯುವುದಕ್ಕಾಗಿ ಉಘೇ ಮಾದಪ್ಪ ಎಂಬ ಘೋಷಗಳನ್ನು ಕೂಗುತ್ತಿದ್ದರು.