ಸಾರಾಂಶ
ಸವಣೂರು: ಪಂಡರಾಪೂರ ಪಾದಯಾತ್ರೆ ಕೈಗೊಂಡಿರುವ ಭಕ್ತರು ವಿಶ್ರಾಂತಿ ಪಡೆಯಲು ತಂಗಿದ್ದ ಮಠದ ಸುತ್ತಲೂ ನಿರಂತರ ಮಳೆಗೆ ನೀರು ತುಂಬಿ ಭಕ್ತರು ಪ್ರಾಣಾಪಾಯದಿಂದ ಪಾರಾದ ಘಟನೆ ಸೋಮವಾರ ತಾಲೂಕಿನ ಬರದೂರ ಗ್ರಾಮದ ಹೊರವಲಯದಲ್ಲಿ ಸಂಭವಿಸಿದೆ. ಭಾನುವಾರ ಸಂಜೆ ಹಾವೇರಿ ತಾಲೂಕು ತೋಟದಯಲ್ಲಾಪೂರದಿಂದ ತಾಲೂಕಿಗೆ ಆಗಮಿಸಿದ ಪಾದಯಾತ್ರಿಕರ ತಂಡದ ೨೮ ಭಕ್ತರು ಬರದೂರ ಗ್ರಾಮದ ಹೊರ ವಲಯದಲ್ಲಿರುವ ರಾಮಲೀಂಗೇಶ್ವರ ಮಠದಲ್ಲಿ ರಾತ್ರಿ ವಾಸ್ತವ್ಯ ಹೂಡಿದ್ದರು. ಈ ಸಂದರ್ಭದಲ್ಲಿ ರಾತ್ರಿಯಿಡಿ ಮಳೆ ಸುರಿದು ಬಾಜಿರಾಯನಹಳ್ಳ ತುಂಬಿ ಹರಿದು, ಮಠದ ಸೂತ್ತಲಿನ ಹೊಲಗಳಿಗೆ ನೀರು ನುಗ್ಗಿ ಶ್ರೀಮಠದ ರಸ್ತೆ ಸಂಪರ್ಕ ಕಡಿತಗೊಂಡು ಭಾರಿ ಪ್ರಮಾಣದ ನೀರು ಹರಿಯುತ್ತಿದ್ದ ಕಾರಣ ಭಕ್ತರಿಗೆ ಜಲದಿಗ್ಬಂಧನವಾಗಿತ್ತು. ಪ್ರಾಥ:ಕಾಲ ಪಾದಯಾತ್ರಿಕರು ಮಠದ ಸುತ್ತಲೂ ನೀರು ತುಂಬಿಕೊಂಡಿರುವುದನ್ನು ಗಮನಿಸಿ ಗಾಬರಿಗೊಂಡು ಕಿರುಚಾಟ ಆರಂಭಿಸಿದ್ದಾರೆ. ಸುದ್ದಿ ತಿಳಿದ ಸ್ಥಳೀಯರು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಹಾಗೂ ತಹಸೀಲ್ದಾರ್ ಭರತರಾಜ್ ಕೆ.ಎನ್., ಅವರಿಗೆ ವಿಷಯ ತಿಳಿಸಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಅಧಿಕಾರಿಗಳು ಹಾವೇರಿ ಅಗ್ನಿ ಶಾಮಕ ಹಾಗೂ ತುರ್ತು ನಿರ್ವಹಣಾ ಸಮಿತಿ ಸಿಬ್ಬಂದಿ ಸಹಾಯದಿಂದ ೨೪ ಪಂಡರಪೂರ ಪಾದಯಾತ್ರೆ ಭಕ್ತರು ಹಾಗೂ ೪ ಶ್ರೀಮಠದ ಸಹಾಯಕರು ಸೇರಿ ಒಟ್ಟು ೨೮ ಜನರನ್ನು ಎನ್‌ಡಿಆರ್‌ಎಫ್ ರಕ್ಷಣಾ ತಂಡದವರು ರಕ್ಷಣಾ ಹಡಗಿನಲ್ಲಿ ಕಾಪಾಡಿದರು. ಸ್ಥಳಕ್ಕೆ ಜಿಲ್ಲಾಧಿಕಾರಿ ಡಾ. ವಿಜಯಮಾಂತೇಶ ದಾನಮ್ಮನವರ, ತಹಸೀಲ್ದಾರ್ ಭರತರಾಜ್ ಕೆ.ಎನ್., ತಾಪಂ ಇಒ ನವೀನಪ್ರಸಾಧ ಕಟ್ಟಿಮನಿ, ಅಗ್ನಿಶಾಮಕದಳದ ಜಿಲ್ಲಾ ಮಟ್ಟದ ಅಧಿಕಾರಿ ವಿನಯ ಹಾಗೂ ಇತರರು ಭೇಟಿ ನೀಡಿ ಪಾದಯಾತ್ರೆ ಕೈಗೊಂಡ ಭಕ್ತರಿಗೆ ಧೈರ್ಯ ಹೇಳಿ, ಮುಂದಿನ ಪಾದಯಾತ್ರೆಗೆ ಬೀಳ್ಕೊಟ್ಟರು.ನಿರಂತರ ಮಳೆಗೆ ಅಪಾರ ಬೆಳೆ-ಮನೆ ಹಾನಿ: ನಿರಂತರ ಸುರಿಯುತ್ತಿರುವ ಮಳೆಗೆ ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ.ತಾಲೂಕಿನ ಚಿಕ್ಕಬೂದಿಹಾಳ, ಬರದೂರ, ಸವೂರ, ಕುರಬರಮಲ್ಲೂರ, ಹುರಳೀಕುಪ್ಪಿ, ನಂದಿಹಳ್ಳಿ, ತೆಗ್ಗಿಹಳ್ಳಿ, ಮಣ್ಣೂರ, ಗೂಂಡೂರ, ಮಂತ್ರೋಡಿ, ಕಾರಡಗಿ, ಜೇಕೀನಕಟ್ಟಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಹಾಯ್ದಿರುವ ಭಾಜೀರಾಯನಹಳ್ಳ ತುಂಬಿ ಹರಿಯುತ್ತಿರುವ ಕಾರಣ ಸಾವಿರಾರು ಹೆಕ್ಟೇರ್ ಕೃಷಿ ಭೂಮಿಯಲ್ಲಿ ಬೆಳೆ ಸಂಪೂರ್ಣ ನಾಶವಾಗಿದೆ. ಸವಣೂರನಿಂದ ಬಂಕಾಪೂರ ಕ್ರಾಸ್ ಸಂಪರ್ಕಿಸುವ ರಾಜ್ಯ ಹೆದ್ದಾರಿ ಮಧ್ಯದಲ್ಲಿ ಮಣ್ಣೂರ ಹತ್ತಿರದಲ್ಲಿ ಹರಿದಿರುವ ಭಾಜೀರಾಯನಹಳ್ಳ ತುಂಬಿ ರಸ್ತೆ ಮೇಲೆ ನೀರು ಹರಿಯುತ್ತಿದ್ದ ಕಾರಣ ಸುಮಾರು ೪ ಗಂಟೆಗಳ ಕಾಲ ರಸ್ತೆ ಸಂಪೂರ್ಣ ಬಂದ್ ಆಗಿತ್ತು. ಚಿಕ್ಕಬೂದಿಹಾಳ, ಬರದೂರ, ಸವೂರ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಮನೆಗೆ ನೀರು ನುಗ್ಗಿದ ಹಿನ್ನೆಲೆಯಲ್ಲಿ ಸಾರ್ವಜನಿಕರ ಜೀವನ ತೀರ್ವ ಅಸ್ತವ್ಯಸ್ತಗೊಂಡಿದೆ. ರಾಜ್ಯ ಸರ್ಕಾರ ಕೂಡಲೇ ಪರಿಹಾರ ಘೋಷಣೆ ಮಾಡಬೇಕು ಹಾಗೂ ಶಾಸ್ವತ ಪರಿಹಾರ ನೀಡಬೇಕು ಎಂದು ಸ್ಥಳೀಯರು ಆಕ್ರೋಶ ವ್ಯಕ್ತ ಪಡಿಸಿದರು.