ಮಠಕ್ಕೆ ಭಕ್ತರೇ ಆಸ್ತಿ, ಚ್ಯುತಿ ಬಾರದಂತೆ ಕೆಲಸ ಮಾಡುವೆ

| Published : Nov 13 2024, 12:49 AM IST

ಮಠಕ್ಕೆ ಭಕ್ತರೇ ಆಸ್ತಿ, ಚ್ಯುತಿ ಬಾರದಂತೆ ಕೆಲಸ ಮಾಡುವೆ
Share this Article
  • FB
  • TW
  • Linkdin
  • Email

ಸಾರಾಂಶ

ಮಠಕ್ಕೆ ಭಕ್ತರೆ ನಿಜವಾದ ಆಸ್ತಿ, ಅವರ ಆಶಯಗಳಿಗೆ ಚ್ಯುತಿ ಬಾರದಂತೆ ನಾನು ಕಾರ್ಯನಿರ್ವಹಿಸುವೆ, 2015ರಲ್ಲಿ ಚಿನ್ನದ ಪದಕ ದೊರೆತ ವೇಳೆ ನನ್ನನ್ನು ಯಾರು ಗುರುತಿಸಲಿಲ್ಲ, ಇಂದು ಪಿ.ಎಚ್‌ಡಿ ಪದವಿ ಬಂದ ವೇಳೆ ಭಕ್ತ ಸಮೂಹ ತೋರಿದ ಪ್ರೀತಿಗೆ ನಾನು ಧನ್ಯನಾಗಿದ್ದೇನೆ. ಇಂತಹ ಸಮಾರಂಭಗಳು ನಮ್ಮ ಜವಾಬ್ದಾರಿ ಹೆಚ್ಚಿಸುವಲ್ಲಿ ಮಹತ್ತರ ಪಾತ್ರ ವಹಿಸಲಿದೆ ಎಂದು ಸಾಲೂರು ಮಠಾಧ್ಯಕ್ಷ ಡಾ.ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ಮಠಕ್ಕೆ ಭಕ್ತರೆ ನಿಜವಾದ ಆಸ್ತಿ, ಅವರ ಆಶಯಗಳಿಗೆ ಚ್ಯುತಿ ಬಾರದಂತೆ ನಾನು ಕಾರ್ಯನಿರ್ವಹಿಸುವೆ, 2015ರಲ್ಲಿ ಚಿನ್ನದ ಪದಕ ದೊರೆತ ವೇಳೆ ನನ್ನನ್ನು ಯಾರು ಗುರುತಿಸಲಿಲ್ಲ, ಇಂದು ಪಿ.ಎಚ್‌ಡಿ ಪದವಿ ಬಂದ ವೇಳೆ ಭಕ್ತ ಸಮೂಹ ತೋರಿದ ಪ್ರೀತಿಗೆ ನಾನು ಧನ್ಯನಾಗಿದ್ದೇನೆ. ಇಂತಹ ಸಮಾರಂಭಗಳು ನಮ್ಮ ಜವಾಬ್ದಾರಿ ಹೆಚ್ಚಿಸುವಲ್ಲಿ ಮಹತ್ತರ ಪಾತ್ರ ವಹಿಸಲಿದೆ ಎಂದು ಸಾಲೂರು ಮಠಾಧ್ಯಕ್ಷ ಡಾ.ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು. ಪಟ್ಟಣದ ವೆಂಕಟೇಶ್ವರ ಮಹಲ್‌ನಲ್ಲಿ ಭಕ್ತ ಸಮೂಹ ಆಯೋಜಿಸಿದ್ದ ಗೌರವ ಸಮರ್ಪಣಾ ಕಾರ್ಯಕ್ರಮದಲ್ಲಿ ಮಾತನಾಡಿ, ನನ್ನ ಶಕ್ತಿ ಇರುವತನಕ ಶ್ರೀಮಠದ ಗೌರವ ಹೆಚ್ಚಿಸುವ ಕೆಲಸ ಮಾಡುವ ಜೊತೆಗೆ ಭಕ್ತ ಸಮೂಹದ ಪ್ರೀತಿ ವಿಶ್ವಾಸಗಳಿದೆ ಮಠದ ಉನ್ನತಿಗಾಗಿ ಪ್ರಾಮಾಣಿಕವಾಗಿ ಶ್ರಮಿಸುವೆ ಎಂದರು. ಹನೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ನಾಯಕ ನಿಶಾಂತ್ ಮಾತನಾಡಿ, ಶ್ರೀಗಳು ಸಾಧನೆ ಮೂಲಕ ಪಿ.ಎಚ್‌ಡಿ ಪದವಿಗಳಿಸಿದ್ದಾರೆ. ಆಗಮ ಶಾಸ್ತ್ರದಲ್ಲಿ ಪದವಿಗಳಿಸುವುದು ಸುಲಭದ ವಿಚಾರವಲ್ಲ, ಅವರ ಸತತ ಪರಿಶ್ರಮದಿಂದಾಗಿ ಇದು ಸಾಧ್ಯವಾಗಿದೆ. ಅವರೊಡನೆ 4 ವರ್ಷಗಳ ಒಡನಾಟ ಇರಿಸಿಕೊಂಡಿರುವೆ, ಸಾಲೂರು ಮಠವನ್ನು ಉನ್ನತಿಯತ್ತ ಕೊಂಡೊಯ್ಯುವ ಶಕ್ತಿ ಅವರಿಗಿದೆ ಎಂದರು. ಗುಂಡೇಗಾಲ ಮಠಾಧ್ಯಕ್ಷ ಶ್ರೀ ಮಲ್ಲಿಕಾರ್ಜುನಸ್ವಾಮಿಜಿ ಮಾತನಾಡಿ, ಸಾಲೂರು ಶ್ರೀಗಳು ಸಹೃದಯಿ. ಅವರಿಗೆ ಪದವಿ ದೊರತದ್ದಕ್ಕಾಗಿ ಈ ಕಾರ್ಯಕ್ರಮವನ್ನು ಭಕ್ತ ಸಮೂಹ ಆಯೋಜಿಸಿದ್ದು ಇಂತಹ ಕಾರ್ಯಕ್ರಮಗಳ ಮೂಲಕ ಅನೇಕರಿಗೆ ನಾವು ಸಾಧಿಸಬೇಕೆಂಬ ಪ್ರೇರಣೆ ದೊರಕುವಂತಾಗಬೇಕು ಎಂದರು. ಮುಡುಕನಪುರ ಮಠಾಧ್ಯಕ್ಷ ಷಡಕ್ಷರದೇಶಿ ಕೇಂದ್ರಸ್ವಾಮಿಜಿ ಮಾತನಾಡಿ, ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಮನಸ್ಸು ನಿಷ್ಕಲ್ಮಷವಾಗಿದ್ದು ಅವರ ಮನದಲ್ಲಿ ಮಹದೇಶ್ವರರೇ ನೆಲೆಯೂರಿದ್ದಾರೆ. ಅವರಿಗೆ ಸದಾಕಾಲ ಮಹದೇಶ್ವರರ ಅನುಗ್ರಹ ದೊರೆತು ಇನ್ನಷ್ಟು ಸಾಧನೆ ಮಾಡುವ ಜೊತೆಗೆ ಭಕ್ತಾಧಿಗಳ ಸೇವೆಗೆ ಹೆಚ್ಚಿನ ಅವಕಾಶ ದೊರಕುವಂತಾಗಲಿ ಎಂದರು.

ಗುಂಡ್ಲುಪೇಟೆ ಶಾಸಕ ಗಣೇಶ್ ಪ್ರಸಾದ್ ಮಾತನಾಡಿ, ಶಿಕ್ಷಣವಿದ್ದರೆ ಜಯಿಸಲು ಸಾಧ್ಯ, ಯಾವುದೇ ಪದವಿ ಪಡೆಯಬೇಕಾದರೂ ಕಠಿಣ ಶ್ರಮ ಅಗತ್ಯ, ಈ ನಿಟ್ಟಿನಲ್ಲಿ ಶಾಂತ ಮಲ್ಲಿಕಾರ್ಜುನ ಶ್ರೀ ಪಿ.ಎಚ್‌ಡಿ ಪದವಿ ಸಂಪಾದಿಸಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಚಾರ ಎಂದರು. ಮಾಜಿ ಸಚಿವ ಎನ್.ಮಹೇಶ್ ಮಾತನಾಡಿ, ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಸಾರಸತ್ವ ಲೋಕದ ಹೆಮ್ಮೆ, ಅವರು ಇನ್ನಷ್ಟು ಹೆಚ್ಚಿನ ಸಾಧನೆಗೈಯುವಂತಾಗಲಿ, ಅವರಿಗೆ ಪದವಿ ದೊರೆತಿರುವುದು ಚಾಮರಾಜನಗರ ಜಿಲ್ಲೆಯ ಭಕ್ತ ಸಮೂಹಕ್ಕೆ ಹೆಮ್ಮೆ ಪಡುವ ಸಂಗತಿ ಎಂದರು.ಮಾಜಿ ಶಾಸಕ ಜಿಎನ್ ನಂಜುಂಡಸ್ವಾಮಿ ಮಾತನಾಡಿ, ಬಡಕುಟುಂಬಗಳ ಪೋಷಣೆಯಲ್ಲಿ ಅಂದಿನಿಂದಲೂ ಸಾಲೂರು ಮಠ ಶ್ರಮಿಸುತ್ತಿದೆ. ನೂತನ ಶ್ರೀಗಳು ಹೆಸರಿಗೆ ತಕ್ಕಂತೆ ಶಾಂತಿ ಪ್ರಿಯರು. ಅವರಿಗೆ ಪದವಿ ಸಂದಿರುವುದು ಉತ್ತಮ ಬೆಳವಣಿಗೆ ಎಂದರು.ಈ ವೇಳೆ ವಾಟಾಳು ಮಠಾಧ್ಯಕ್ಷ ಸಿದ್ದಲಿಂಗ ಶಿವಾಚಾರ್ಯ ಶ್ರೀ, ಉಗ್ರಾಣ ನಿಗಮದ ಅಧ್ಯಕ್ಷ ಜಯಣ್ಣ, ಕಾಡಾ ಅಧ್ಯಕ್ಷ ಮರಿಸ್ವಾಮಿ, ಮಾನಸ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಕಾರ್ಯದರ್ಶಿ ಡಾ.ದತ್ತೇಶ್ ಕುಮಾರ್, ನಗರಸಭಾಧ್ಯಕ್ಷೆ ರೇಖಾ ರಮೇಶ್, ಉಪಾಧ್ಯಕ್ಷ ಎಪಿ ಶಂಕರ್, ಚಾಮುಲ್ ಅಧ್ಯಕ್ಷ ನಾಗೇಂದ್ರಸ್ವಾಮಿ, ತಿಮ್ಮರಾಜಿಪುರ ರಾಜು, ಕೆಂಪನ ಪಾಳ್ಯ ಮಹದೇವಸ್ವಾಮಿ, ದೊಡ್ಡಿಂದುವಾಡಿ ವೀರಭದ್ರಸ್ವಾಮಿ, ಗುರುಮಲ್ಲೇಶ್ವರ ಸಂಸ್ಥೆಯ ವೃಷಬೇಂದ್ರ, ಶಿವಕುಮಾರ್, ಬೃಂಗೇಶ್, ಉತ್ತಂಬಳ್ಳಿ ಗಣೇಶ, ಮುಡಿಗುಂಡ ರಾಜೇಶ, ಪ್ರಭು, ಕಿರಣ್, ಮಹೇಶ , ತಿಮ್ಮರಾಜಿಪುರ ಮಹದೇವಸ್ವಾಮಿ, ಮಹದೇವಪ್ಪ, ಮಹದೇವಸ್ವಾಮಿ, ಶಿವಪುರ ಲೋಕೇಶ್ ಇನ್ನಿತರರಿದ್ದರು.

ಮಠಗಳು ಚಲಿಸುವ ಜ್ಞಾನ ಭಂಡಾರ: ಸಿದ್ದಗಂಗಾಶ್ರೀಮಠಗಳು ಚಲಿಸುವ ಜ್ಞಾನ ಭಂಡಾರವಿದ್ದಂತೆ. ಸಮಾಜದಲ್ಲಿ ಮಠ ಮಾನ್ಯಗಳು ನೀಡುತ್ತಿರುವ ಸೇವೆ ಸ್ಮರಣೀಯ ಎಂದು ಸಿದ್ಧಗಂಗಾ ಮಠದ ಕಿರಿಯ ಶ್ರೀ ಶಿವಸಿದ್ದೇಶ್ವರ ಸ್ವಾಮೀಜಿ ಹೇಳಿದರು. ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಗೌರವ ಸಮರ್ಪಣಾ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿ, ಡಾ.ಶಾಂತಮಲ್ಲಿಕಾರ್ಜುನ ಸ್ವಾಮೀಜಿಯವರಿಗೆ ಭಕ್ತ ಸಮೂಹವೇ ದೊಡ್ಡ ಆಸ್ತಿ. ಭಕ್ತ ಸಮೂಹ ಹಮ್ಮಿಕೊಂಡಿರುವ ಈ ಕಾರ್ಯಕ್ರಮ ಅತ್ಯಂತ ಪವಿತ್ರ ಕಾರ್ಯಕ್ರಮ. ಮಠ, ಮಾನ್ಯಗಳು ಸಮಾಜದಲ್ಲಿ ಶ್ರದ್ಧಾ, ನೆಮ್ಮದಿಯ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತಿವೆ, ಅವುಗಳು ಸಮಾಜದ ಜೀವನಾಡಿಗಳು, ಮಠಗಳು ಮಮಕಾರ ತೋರಿಸುವ ಭಕ್ತಿಯ ತಾಣ, ನಾಡಿನ ಜನರ ಶ್ರೇಯೋಭಿವೃದ್ಧಿಯಲ್ಲಿ ಮಠ, ಮಾನ್ಯಗಳ ಪಾತ್ರ ಮಹತ್ವವಾದುದು , ಜೀವನಕ್ಕೆ ಬೇಕಾದ ಸಂಸ್ಕಾರ ಕಲಿಸುವಲ್ಲಿ, ಮಾನವ, ಮಾನವರ ನಡುವೆ ಬೆಸುಗೆ ಬೆಸೆಯುವಲ್ಲಿ, ಸಮಾಜದ ಓರೆ, ಕೊರೆ ತಿದ್ದುವಲ್ಲಿಯೂ ಆಧ್ಯಾತ್ಮದ ಗುರುಗಳು ಅತ್ಯಗತ್ಯ ಎಂದರು.

ಕೊಳ್ಳೇಗಾಲ ಶಾಸಕ ಎ.ಆರ್.ಕೃಷ್ಣಮೂರ್ತಿ ಮಾತನಾಡಿ, ಅಧ್ಯಯನಕ್ಕೆ ವಯಸ್ಸಿಲ್ಲ, ಮಿತಿ ಇಲ್ಲ ಎಂಬುದನ್ನು ಪದವಿ ಪಡೆಯುವ ಮೂಲಕ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಸಾಧಿಸಿದ್ದಾರೆ, ಶ್ರೀಮಠ ಅಭಿವೃದ್ಧಿಗೆ ಅವರು ಶ್ರಮಿಸುತ್ತಿದ್ದಾರೆ. ಅವರೊಬ್ಬ ಶಿಕ್ಷಣ ಪ್ರೇಮಿ, ಅಪಾರ ಭಕ್ತ ಸಮೂಹ ಪ್ರೀತಿಸುವ ಶರಣ, ಅವರ ಮಠದ ಜವಾಬ್ದಾರಿ ಜೊತೆ ಪದವಿಗಳಿಸಿರುವುದು ಜಿಲ್ಲೆಯ ಜನತೆ ಹೆಮ್ಮೆ ತರುವಂತಹ ವಿಚಾರ ಎಂದರು.

ಶಾಂತಮಲ್ಲಿಕಾರ್ಜುನ ಶ್ರೀಗಳಿಗೆ ಸಾಲೂರು ಮಠದ ಅಧಿಕಾರ ಕೊಡಿಸಿದ್ದು ಶ್ರೀಮಹದೇಶ್ವರರೇ, ಅವರ ಸೇವೆ ಮಾಡಿಸಿಕೊಳ್ಳಲು ಅವರಿಗೆ ಸಾಕ್ಷಾತ್ ಮಹದೇಶ್ವರರೆ ಪೀಠಾಧಿಪತಿ ಸ್ಥಾನ ಕೊಡಿಸಿದ್ದಾರೆ. ಮಠಾಧಿಪತಿ ಸ್ಥಾನ ಮುಳ್ಳಿನ ಹಾಸಿಗೆ ಇದ್ದಂತೆ. ಈ ಸ್ಥಾನ ಅತ್ಯಂತ ಜವಾಬ್ದಾರಿಯುತವಾದುದು, ಹಾಗಾಗಿ ಇಂತಹ ಸ್ಥಾನಕ್ಕೆ ಯೋಗ್ಯರನ್ನು ಕೂರಿಸುವಂತಾಗಬೇಕು.-ಶರತ್‌ಚಂದ್ರ ಸ್ವಾಮೀಜಿ, ಮೈಸೂರು ಕುಂದೂರು ಮಠಾಧ್ಯಕ್ಷ