ಸಾರಾಂಶ
ಶಿರಸಿ: ಜೀವನದಲ್ಲಿ ದೇವರ ಭಕ್ತಿ ಮುಖ್ಯವಾದ ಧರ್ಮ. ಧರ್ಮಕ್ಕೆ ಅನೇಕ ವಿವರಗಳು ಇದ್ದಾವೆ. ಅದರಲ್ಲಿ ದೇವರ ಭಕ್ತಿ ಶ್ರೇಷ್ಠವಾದ್ದು ಎಂದು ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಮಠಾಧೀಶ ಗಂಗಾಧರೇಂದ್ರ ಸರಸ್ವತೀ ಶ್ರೀ ನುಡಿದರು.ಅವರು ಚಾತುರ್ಮಾಸ ವ್ರತಾಚರಣೆಯಲ್ಲಿ ಶ್ರದ್ಧೆಯಿಂದ ಸೇವೆ ಮಾಡುತ್ತಿರುವ ಭಂಡಾರಿ ಸಮಾಜದ ಶಿಷ್ಯರ ಸೇವೆ ಸ್ವೀಕರಿಸಿ ಆಶೀರ್ವಚನ ನುಡಿದರು.
ಶ್ರೀಮದ್ಭಾಗವತದ ಆರಂಭದಲ್ಲಿ ಒಂದು ಮಾತು ಬರುತ್ತದೆ. ಪರಮಾತ್ಮನಲ್ಲಿ ಭಕ್ತಿಯು ಯಾವ ನಿಮತ್ತಗಳೂ ಇಲ್ಲದೇ ಯಾವುದೇ ಪ್ರಶ್ನೆಗಳು ಬಾರದೇ ಯಾವುದೇ ಚರ್ಚೆಗಳು ಇಲ್ಲದೇ ಇರುವ, ತಡೆಗಳು ಇಲ್ಲದೇ ಇರುವ ಭಕ್ತಿ ಅತ್ಯಂತ ಶ್ರೇಷ್ಠವಾದ ಧರ್ಮ ಎಂದು. ನಿಮಿತ್ತಗಳು ಬಂದಾಗ ಭಕ್ತಿ ಅನೇಕರಿಗೆ ಬರುತ್ತದೆ. ಯಾವುದಾದರೂ ಸಮಸ್ಯೆ ಬಂದಾಗ, ಕಷ್ಟಗಳು ಎದುರಿಗೆ ಬಂದಾಗ ದೇವರು ನೆನಪಾಗುವುದು ಇದೆ. ಇಲ್ಲಿ ದೇವರ ಸ್ಮರಣೆಗೆ ಕಷ್ಟವೇ ನಿಮಿತ್ತ ಆಯಿತು. ಹೀಗೆ ಯಾವ ನಿಮಿತ್ತಗಳು ಇಲ್ಲದೇ ಇರುವಾಗ ಸಹಜವಾಗಿ, ಯಾವಾಗಲೂ ಪರಮಾತ್ಮನಲ್ಲಿ ಭಕ್ತಿ ಇರಬೇಕು. ನಿಮಿತ್ತಗಳಿಂದ ಬಂದ ಭಕ್ತಿ ಅಷ್ಟೊಂದು ಶ್ರೇಷ್ಠ ಅಲ್ಲ ಎಂದರು.ಮಹಾಭಾರತದಲ್ಲಿ ಭೀಷ್ಮಾಚಾರ್ಯರು ಯುಧಿಷ್ಠಿರನಿಗೆ ಹೇಳುವ ಒಂದು ಭಗವಂತನನ್ನು ನಾಮಸ್ಮರಣೆಗಳ, ಸ್ತೋತ್ರಗಳ ಮೂಲಕ ಯಾರು ನಿತ್ಯವೂ ಭಜಿಸುತ್ತಾನೆಯೋ ಅದೇ ಶ್ರೇಷ್ಠವಾದ ಧರ್ಮ. ಭಗವಂತನನ್ನು ಸ್ತುತಿಯ ಮೂಲಕ ಭಕ್ತಿ ಮಾಡುವುದೇ ಅತ್ಯಂತ ಶ್ರೇಷ್ಠವಾದ ಧರ್ಮ ಎಂಬ ಮಾತು ಮಹಾಭಾರತದಲ್ಲಿ ಬಂದಿದೆ ಎಂದರು.
ಭಾಗವತ ಹಾಗೂ ಮಹಾಭಾರತದಲ್ಲಿ ಭಕ್ತಿಯ ಮಹತ್ವವನ್ನು ಕೊಂಡಾಡಿದ್ದಾರೆ. ಆದ್ದರಿಂದ ದಿನಾಲೂ ಮನೆಯಲ್ಲಿ ಭಜನೆ ಮಾಡಬೇಕು. ಪ್ರತಿಯೊಂದು ಮನೆಯಲ್ಲಿ ಭಜನೆ ಮಾಡಬೇಕು. ಶ್ರೇಷ್ಠವಾದ ಒಂದು ಧರ್ಮವನ್ನು ಆಚರಣೆ ಮಾಡಿದ ಹಾಗೆ ಆಗುತ್ತದೆ. ಮನೆಮಂದಿಗಳಲ್ಲಿ ಒಂದು ಪ್ರೀತಿ ವಿಶ್ವಾಸವೂ ಬರುತ್ತದೆ ಎಂದರು.ಮನಸ್ಸಿನಲ್ಲಿ ಭಗವಂತನ ಮೇಲೆ ಹಾರ್ದಿಕವಾದ ಪ್ರೀತಿ ಬರುವಂತೆ ಇಂತಹ ಭಜನೆಗಳು ಮಾಡುತ್ತವೆ. ದೇವರ ಮೇಲೆ ಈ ರೀತಿಯಾದ ಭಕ್ತಿ, ಪ್ರೀತಿಗಳು ಬರುವ ಹಾಗೆ ಸಂಗೀತಗಳು ಮಾಡುತ್ತವೆ. ಸಂಗೀತದ ಅನೇಕ ರಾಗಗಳಿಗೆ ಈ ರೀತಿಯಾದ ಸಾಮರ್ಥ್ಯವಿದೆ. ಅಂತಹ ಸಂಗೀತದ ಸೇವೆಯನ್ನು ಅನೇಕ ವರ್ಷಗಳಿಂದ ಮಾಡಿಕೊಂಡು ಬರುತ್ತಿರುವ ಭಂಡಾರಿ ಸಮಾಜದ ಸಮಸ್ತ ಭಕ್ತರನ್ನು ಉದ್ದೇಶಿಸಿ ಆಶೀರ್ವದಿಸಿದರು.
ಸಂಗೀತದ ಇನ್ನೊಂದು ಮುಖವಾಗಿರುವ ಪಂಚ ವಾದ್ಯಗಳ ಸೇವೆಯನ್ನು ದೇವರ ಮುಂದೆ ಮಾಡುತ್ತಾ ಬಂದವರು ಭಂಡಾರಿ ಸಮಾಜದವರು. ಪಂಚವಾದ್ಯದ ಸೇವೆಯಲ್ಲಿ ಹಳೆ ಪದ್ಧತಿಗಳು ಬಿಟ್ಟುಹೋಗುತ್ತಿವೆ. ಈ ಹಳೆ ಪದ್ಧತಿಯ ಪಂಚವಾದ್ಯಗಳ ಸೇವೆಯನ್ನು ಮುಂದುವರಿಸಿಕೊಂಡು ಹೋಗಬೇಕು. ಇದನ್ನು ಇಟ್ಟುಕೊಂಡು ಹೋಗುವುದು ಕರ್ತವ್ಯ ಎಂದರು.ಮುಂದಿನ ಪೀಳಿಗೆಯು ಇದನ್ನು ಕಲಿಯುವುದರಲ್ಲಿ ಮುಂದೆ ಬರಬೇಕು. ಈ ಮನೆತನದ ಒಳ್ಳೆಯ ಕಸುಬನ್ನು ಬಿಡಬಾರದು. ಈ ಪಂಚವಾದ್ಯದ ಸೇವೆಯನ್ನು ಭಂಡಾರಿ ಸಮಾಜದವರು ನಡೆಸಿಕೊಂಡು ಬಂದಿರುವುದು ನಮಗೆ ಸಂತೋಷವನ್ನು ಉಂಟುಮಾಡಿದೆ ಎಂದೂ ಹೇಳಿದರು.
ಶ್ರೀಮಠದ, ಮಂಜಗುಣಿ ಭಂಡಾರಿ ಸಮಾಜದವರು, ಇತರೆ ಭಂಡಾರಿ ಸಮಾಜದ ಪ್ರಮುಖರು, ಶಿಷ್ಯರು ಭಕ್ತರು ಇದ್ದರು.ಸಂಗೀತದ ರಾಗಗಳಿಗೆ ಭಕ್ತಿಯನ್ನು ಹೆಚ್ಚಿಸುವ ಸಾಮರ್ಥ್ಯ ಇದೆ. ತಲೆ ತಲಾಂತರಗಳಿಂದ ಮಠದಲ್ಲಿ ಸಂಗೀತದ ವಾದ್ಯಗಳ ಸೇವೆಯನ್ನು ಮಾಡುತ್ತಾ ಬಂದವರು ಭಂಡಾರಿ ಸಮಾಜದವರು. ಪಂಚ ವಾದ್ಯಗಳ ಸಂಪ್ರದಾಯ ಕಡಿಮೆಯಾಗಿದೆ. ಇದನ್ನು ಬೆಳಸಬೇಕು.
ಸ್ವರ್ಣವಲ್ಲೀ ಶ್ರೀಸ್ವರ್ಣವಲ್ಲೀ ಶ್ರೀ