ಪಾಲಿಕೊಪ್ಪದ ಶಿವಶಕ್ತಿಧಾಮದಲ್ಲಿ ಭಕ್ತಿ ಸಂಭ್ರಮ

| Published : Feb 12 2025, 12:33 AM IST

ಸಾರಾಂಶ

ಹಿಂದೂ ಸಂಸ್ಕೃತಿಯ ಪ್ರಸಾರಕ್ಕಾಗಿ ​ಉದ್ಯಮಿ ಡಾ. ವಿಜಯ ಸಂಕೇಶ್ವರ ಹಾಗೂ ಡಾ. ಆನಂದ ಸಂಕೇಶ್ವರ ಅವರು ಪಾಲಿಕೊಪ್ಪದ ಹೆದ್ದಾರಿ ಪಕ್ಕದಲ್ಲಿ ನಿರ್ಮಿಸಿದ್ದ ಶ್ರೀಶಿವಶಕ್ತಿ ಧಾಮವನ್ನು ಧಾರ್ಮಿಕ ನಿರ್ವಹಣೆಗಾಗಿ ಶೃಂಗೇರಿ ಶಾರದಾ ಪೀಠಕ್ಕೆ ವಹಿಸಿಕೊಟ್ಟಿದ್ದು, ಇದೀಗ ಒಂದು ವರ್ಷ ಪೂರ್ಣಗೊಂಡಿದೆ.

ಹುಬ್ಬಳ್ಳಿ:

ತಾಲೂಕಿನ ಪಾಲಿಕೊಪ್ಪದ ಶ್ರೀಶಿವಶಕ್ತಿಧಾಮದ ಪ್ರಥಮ ವಾರ್ಷಿಕೋತ್ಸವ ಸೋಮವಾರ ಅಪಾರ ಭಕ್ತಸಮೂಹದ ಮಧ್ಯೆ ಸಂಭ್ರಮ, ಸಡಗರದಿಂದ ನಡೆಯಿತು.

ಶೃಂಗೇರಿ ಜ. ಶಂಕಾರಾಚಾರ್ಯ ಭಾರತಿತೀರ್ಥ ಶ್ರೀಗಳ ಕೃಪಾಶೀರ್ವಾದ ಹಾಗೂ ವಿಧುಶೇಖರ ಭಾರತಿ ಶ್ರೀಗಳ ಆಶೀರ್ವಾದದೊಂದಿಗೆ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಅದ್ಧೂರಿಯಾಗಿ ನಡೆದವು. ಬೆಳಗ್ಗೆಯಿಂದ ವಿವಿಧ ಧಾರ್ಮಿಕ ಪೂಜಾ ವಿಧಿ-ವಿಧಾನಗಳು ಶೃಂಗೇರಿ ಪೀಠದ ಅರ್ಚಕರು, ಆಚಾರ್ಯರ ನೇತೃತ್ವದಲ್ಲಿ ನಡೆದವು.

ಪ್ರಧಾನ ದೈವವಾಗಿರುವ ಆನಂದೇಶ್ವರ ಶಿವಲಿಂಗಕ್ಕೆ ಏಕವಾರ ರುದ್ರಾಭಿಷೇಕ, ಶನೈಶ್ಚರ ಸ್ವಾಮಿಗೆ ತೈಲಾಭಿಷೇಕ ಹಾಗೂ ಇತರ ಎಲ್ಲ ದೇವರಿಗೆ ಪಂಚಾಮೃತ ಅಭಿಷೇಕಗಳು ಸಾಂಗವಾಗಿ ನೆರವೇರಿದವು ಎಂದು ದೇವಸ್ಥಾನದ ಪ್ರಧಾನ ಅರ್ಚಕ ವೇಣುಗೋಪಾಲ ಭಟ್ಟ ತಿಳಿಸಿದರು. ರುದ್ರಹೋಮ, ನವಗ್ರಹ ಹೋಮ, ಗಣಪತಿ ಹೋಮಗಳು, ಪೂರ್ಣಾಹುತಿ ಜರುಗಿದವು. ಮಧ್ಯಾಹ್ನ ಮಹಾಮಂಗಳಾರತಿ ನಂತರ ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು. ಬೆಳಗ್ಗೆಯಿಂದ ನಡೆದ ಧಾರ್ಮಿಕ ಕೈಂಕರ್ಯ ಹಾಗೂ ಸೇವಾ ಕಾರ್ಯಗಳಲ್ಲಿ ವಿಆರ್‌ಎಲ್​ ಸಮೂಹ ಸಂಸ್ಥೆಗಳ ಚೇರ್‌ಮನ್​ ಡಾ. ವಿಜಯ ಸಂಕೇಶ್ವರ ಹಾಗೂ ಲಲಿತಾ ಸಂಕೇಶ್ವರ ಪಾಲ್ಗೊಂಡಿದ್ದರು. ಭಕ್ತರು ದೇವಸ್ಥಾನಕ್ಕೆ ಆಗಮಿಸಿ ವಿವಿಧ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿ ಪ್ರಾರ್ಥಿಸಿದರು.

ಪ್ರಥಮ ವಾರ್ಷಿಕೋತ್ಸವದ ಅಂಗವಾಗಿ ತಮಿಳುನಾಡಿನ ಖ್ಯಾತ ಕಲಾವಿದ ಡಾ. ಶ್ಯಾಮಸುಂದರ್​ ಭಾಗವತ ಮತ್ತು ತಂಡದವರು ರಾಧಾ ಕಲ್ಯಾಣ ಭಜನ್​ ಕಾರ್ಯಕ್ರಮ ನಡೆಸಿಕೊಟ್ಟರು. ವಾರ್ಷಿಕೋತ್ಸವ ಸಂಭ್ರಮಕ್ಕೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪೂಜೆ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು. ಬೆಳಗ್ಗೆಯಿಂದ ಇಡೀ ದಿನ ದೇವಸ್ಥಾನದಲ್ಲಿ ಭಕ್ತರು ಸೇವಾ ಕಾರ್ಯದಲ್ಲಿ ತೊಡಗಿದ್ದರು ಎಂದು ಶ್ರೀಕ್ಷೇತ್ರದ ವ್ಯವಸ್ಥಾಪಕ ಆರ್​. ರಾಮಚಂದ್ರನ್​ ತಿಳಿಸಿದರು.

ಹಿಂದೂ ಸಂಸ್ಕೃತಿಯ ಪ್ರಸಾರಕ್ಕಾಗಿ ​ ಡಾ. ವಿಜಯ ಸಂಕೇಶ್ವರ ಹಾಗೂ ಡಾ. ಆನಂದ ಸಂಕೇಶ್ವರ ಅವರು ಪಾಲಿಕೊಪ್ಪದ ಹೆದ್ದಾರಿ ಪಕ್ಕದಲ್ಲಿ ನಿರ್ಮಿಸಿದ್ದ ಶ್ರೀಶಿವಶಕ್ತಿ ಧಾಮವನ್ನು ಧಾರ್ಮಿಕ ನಿರ್ವಹಣೆಗಾಗಿ ಶೃಂಗೇರಿ ಶಾರದಾ ಪೀಠಕ್ಕೆ ವಹಿಸಿಕೊಟ್ಟಿದ್ದು, ಇದೀಗ ಒಂದು ವರ್ಷ ಪೂರ್ಣಗೊಂಡಿದೆ.