ಮುಳ್ಳಿನ ರಾಶಿ ಮೇಲೆ ಜಿಗಿದು ಭಕ್ತಿ ಸಮರ್ಪಣೆ

| Published : Dec 17 2023, 01:45 AM IST

ಸಾರಾಂಶ

ಕೊಪ್ಪಳ ತಾಲೂಕಿನ ಲೇಬಗೇರಿ ಗ್ರಾಮದಲ್ಲಿ ಪ್ರತಿವರ್ಷ ಕಾರ್ತೀಕ ಮಾಸದ ವೇಳೆಯಲ್ಲಿ ನಡೆಯುವ ಮಾರುತೇಶ್ವರನ ಕಾರ್ತೀಕೋತ್ಸವದಲ್ಲಿ ಮುಳ್ಳಿನಲ್ಲಿ ಜಿಗಿಯುವ ಕಾರ್ಯಕ್ರಮ ನಡೆಯುತ್ತದೆ. ಈ ಸಂಪ್ರದಾಯವು ತಲೆತಲಾಂತರದಿಂದ ಆಚರಿಸುತ್ತಾ ಬರಲಾಗುತ್ತಿದೆ. ಇಂದಿಗೂ ಅದನ್ನು ಮುಂದುವರಿಸಿಕೊಂಡು ಬರಲಾಗಿದೆ.

ಕೊಪ್ಪಳ: ಮಾರುತೇಶ್ವರ ಕಾರ್ತೀಕೋತ್ಸವ ಅಂಗವಾಗಿ ಈ ಗ್ರಾಮದಲ್ಲಿ ಭಕ್ತರು ಮುಳ್ಳಿನ ಮೇಲೆ ಜಿಗಿಯುವ ಮೂಲಕ ಭಕ್ತಿಯ ಹರಕೆ ಸಮರ್ಪಿಸುವ ಪದ್ಧತಿಯನ್ನು ಮುಂದುವರಿಸಿಕೊಂಡು ಬಂದಿದ್ದಾರೆ.

ಹೌದು! ಇದು ಕೊಪ್ಪಳ ತಾಲೂಕಿನ ಲೇಬಗೇರಿ ಗ್ರಾಮದಲ್ಲಿ ಪ್ರತಿವರ್ಷ ಕಾರ್ತೀಕ ಮಾಸದ ವೇಳೆಯಲ್ಲಿ ನಡೆಯುವ ಮಾರುತೇಶ್ವರನ ಕಾರ್ತೀಕೋತ್ಸವದಲ್ಲಿ ಮುಳ್ಳಿನಲ್ಲಿ ಜಿಗಿಯುವ ಕಾರ್ಯಕ್ರಮ ನಡೆಯುತ್ತದೆ. ಈ ಸಂಪ್ರದಾಯವು ತಲೆತಲಾಂತರದಿಂದ ಆಚರಿಸುತ್ತಾ ಬರಲಾಗುತ್ತಿದೆ. ಇಂದಿಗೂ ಅದನ್ನು ಮುಂದುವರಿಸಿಕೊಂಡು ಬರಲಾಗಿದೆ.

ಶನಿವಾರ ಕಾರ್ತೀಕೋತ್ಸವ ನಿಮಿತ್ತ ಈ ಗ್ರಾಮದಲ್ಲಿ ನಡೆದ ಜಾತ್ರೆಯಲ್ಲಿ ಮುಳ್ಳಿನ ರಾಶಿಯಲ್ಲಿ ಭಕ್ತರು ಜಿಗಿದು ದೇಹ ದಂಡನೆ ಮಾಡಿಕೊಳ್ಳುವ ಮೂಲಕ ಭಕ್ತಿಯ ಪರಾಕಾಷ್ಠೆ ಮೆರೆದರು. ಇಷ್ಟಾರ್ಥಗಳನ್ನು ನೆರವೇರಿಸಿದರೆ ಮುಳ್ಳಿನ ಬೇಲಿಯಲ್ಲಿ ಜಿಗಿಯುವುದಾಗಿ ಭಕ್ತರು ಹರಕೆ ಹೊತ್ತಿರುತ್ತಾರೆ. ಆನಂತರ ಹರಕೆ ಈಡೇರಿದ ಬಳಿಕ ಭಕ್ತರು ಮುಳ್ಳಿನ ಬೇಲಿಯಲ್ಲಿ ಜಿಗಿದು ಭಕ್ತಿ ಸಮರ್ಪಿಸುತ್ತಾರೆ.

ಇಲ್ಲಿ ಮುಳ್ಳುಗಳ ರಾಶಿ ಮೇಲೆ ಭಕ್ತರು ಕುಣಿದಾಡಿ ತಮ್ಮ ಭಕ್ತಿ ಪ್ರದರ್ಶಿಸುತ್ತಾರೆ. ಮುಳ್ಳುಗಳನ್ನೇ ಹಾಸಿಗೆ ಮಾಡಿಕೊಂಡು ಮಲಗುತ್ತಾರೆ. ಆದರೆ ಅಚ್ಚರಿಯೆಂದರೆ ಮುಳ್ಳುಗಳ ಮೇಲೆ ಎಷ್ಟೇ ಕುಣಿದಾಡಿದರೂ ಭಕ್ತರಿಗೆ ಮಾತ್ರ ಸ್ವಲ್ಪವೂ ನೋವು ಆಗುವುದಿಲ್ಲ. ಇದು ದೇವರ ಮಹಿಮೆ ಎಂದು ನಂಬಿಕೊಂಡ ಗ್ರಾಮಸ್ಥರು ಈ ಆಚರಣೆಯನ್ನು ಇಂದಿಗೂ ಮುಂದುವರಿಸಿಕೊಂಡು ಬಂದಿದ್ದಾರೆ. ಈ ಗ್ರಾಮದಲ್ಲಿ ಮುಳ್ಳುಗಳ ರಾಶಿಯಲ್ಲಿ ಕಾರ್ಯಕ್ರಮ ನಡೆಯುತ್ತದೆ. ಇದನ್ನು ನೋಡಿದರೆ ಎಂಥವರ ಮೈ ಕೂಡ ಜುಮ್ಮೆನ್ನುತ್ತೆ. ಮುಳ್ಳಿನ ಮೇಲೆ ಹಾರಿದವರು, ಹಾಸಿಗೆಯಂತೆ ಮಲಗುವುದು ನಿಜಕ್ಕೂ ಆಶ್ಚರ್ಯದ ಸಂಗತಿಯಾಗಿದೆ.