ಉಡುಪಿ ಜಿಲ್ಲೆಯಾದ್ಯಂತ ಶ್ರದ್ಧಾ ಭಕ್ತಿಯ ಈಸ್ಟರ್‌ ಜಾಗರಣೆ

| Published : Mar 31 2024, 02:04 AM IST

ಸಾರಾಂಶ

ಜಿಲ್ಲೆಯ ಎಲ್ಲ ಚರ್ಚ್‌ಗಳಲ್ಲಿ ಪಾಸ್ಕ ಜಾಗರಣೆಯ ಧಾರ್ಮಿಕ ವಿಧಿವಿಧಾನಗಳು ಧರ್ಮಗುರುಗಳು ಹೊಸ ಬೆಂಕಿಯನ್ನು ಆಶೀರ್ವದಿಸುವುದರ ಮೂಲಕ ಆರಂಭಗೊಂಡವು. ಆಶೀರ್ವದಿಸಿದ ಹೊಸ ಬೆಂಕಿಯಿಂದ ಬೃಹತ್‌ ಗಾತ್ರದ ಈಸ್ಟರ್‌ ಕ್ಯಾಂಡಲ್‌ ಹಚ್ಚಿ ಮೆರವಣಿಗೆಯಲ್ಲಿ ಸಾಗಿ ಬಂದು ಚರ್ಚ್‌ನ ಪ್ರಧಾನ ಸ್ಥಳದಲ್ಲಿ ಪ್ರತಿಷ್ಠಾಪಿಸಿದ ಬಳಿಕ ಹಳೆ ಹಾಗೂ ಹೊಸ ಒಡಂಬಡಿಕೆಯ ಆಯ್ದ ಭಾಗಗಳ ವಾಚನ ಮಾಡಲಾಯಿತು

ಕನ್ನಡಪ್ರಭ ವಾರ್ತೆ ಉಡುಪಿ

ಯೇಸು ಕ್ರಿಸ್ತರು ಶಿಲುಬೆಗೇರಿ ಪುನರುತ್ಥಾನರಾದ ಈಸ್ಟರ್‌ ಜಾಗರಣೆಯನ್ನು ಶನಿವಾರ ರಾತ್ರಿ ಜಿಲ್ಲಾದ್ಯಂತ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಜೆರಾಲ್ಡ್‌ ಐಸಾಕ್‌ ಲೋಬೊ ನೇತೃತ್ವದಲ್ಲಿ ಕಲ್ಯಾಣಪುರ ಮಿಲಾಗ್ರಿಸ್‌ ಕ್ಯಾಥೆಡ್ರಲ್‌ನಲ್ಲಿ ಸಂಭ್ರಮದಿಂದ ಈಸ್ಟರ್ ಆಚರಣೆ ನಡೆಯಿತು.

ಈ ವೇಳೆ ಕ್ಯಾಥೆಡ್ರಲ್‌ನ ಪ್ರಧಾನ ಧರ್ಮಗುರು ವಲೇರಿಯನ್ ಮೆಂಡೊನ್ಸಾ, ಸಹಾಯಕ ಧರ್ಮಗುರು ಜೋಯ್ ಅಂದ್ರಾದೆ, ಪಿಲಾರ್ ಸಭೆಯ ಅರ್ವಿನ್ ಡಿಕುನ್ನಾ, ನಿತೇಶ್ ಡಿಸೋಜ, ಹೊಲಿಕ್ರಾಸ್ ಹೋಮ್ ಕಟಪಾಡಿ ಇದರ ರೋನ್ಸನ್ ಡಿಸೋಜ, ನಿವೃತ್ತ ಧರ್ಮಗುರುಗಳಾದ ಲೊರೇನ್ಸ್ ಮಾರ್ಟಿಸ್ ಮತ್ತು ಲೋರೆನ್ಸ್ ರೊಡ್ರಿಗಸ್ ಉಪಸ್ಥಿತರಿದ್ದರು.

ಜಿಲ್ಲೆಯ ಎಲ್ಲ ಚರ್ಚ್‌ಗಳಲ್ಲಿ ಪಾಸ್ಕ ಜಾಗರಣೆಯ ಧಾರ್ಮಿಕ ವಿಧಿವಿಧಾನಗಳು ಧರ್ಮಗುರುಗಳು ಹೊಸ ಬೆಂಕಿಯನ್ನು ಆಶೀರ್ವದಿಸುವುದರ ಮೂಲಕ ಆರಂಭಗೊಂಡವು. ಆಶೀರ್ವದಿಸಿದ ಹೊಸ ಬೆಂಕಿಯಿಂದ ಬೃಹತ್‌ ಗಾತ್ರದ ಈಸ್ಟರ್‌ ಕ್ಯಾಂಡಲ್‌ ಹಚ್ಚಿ ಮೆರವಣಿಗೆಯಲ್ಲಿ ಸಾಗಿ ಬಂದು ಚರ್ಚ್‌ನ ಪ್ರಧಾನ ಸ್ಥಳದಲ್ಲಿ ಪ್ರತಿಷ್ಠಾಪಿಸಿದ ಬಳಿಕ ಹಳೆ ಹಾಗೂ ಹೊಸ ಒಡಂಬಡಿಕೆಯ ಆಯ್ದ ಭಾಗಗಳ ವಾಚನ ಮಾಡಲಾಯಿತು.

ಧರ್ಮಾಧ್ಯಕ್ಷರು ಮತ್ತು ಎಲ್ಲ ಚರ್ಚ್‌ಗಳ ಧರ್ಮಗುರುಗಳು ಹೊಸ ನೀರಿನ ಆಶೀರ್ವಚನ ನೆರವೇರಿಸಿ ನೆರೆದ ಭಕ್ತಾದಿಗಳ ಮೇಲೆ ಹೊಸ ನೀರನ್ನು ಪ್ರೋಕ್ಷಿಸಿ ಆಶೀರ್ವದಿಸಿದರು.

ಬಳಿಕ ನಡೆದ ಬಲಿಪೂಜೆಯಲ್ಲಿ ಯೇಸುವಿನ ಕಷ್ಟಗಳು, ಪುನರುತ್ಥಾನದ ಸಂದೇಶವನ್ನು ವಿವರಿಸಿದ ಧರ್ಮಗುರುಗಳು, ಕ್ರೈಸ್ತರ ವಿಶ್ವಾಸ, ಸತ್ಯದ ಮರು ದೃಡೀಕರಣ ನಡೆಸಿದರು. ಬಲಿಪೂಜೆಯ ಬಳಿಕ ಭಾಗವಹಿಸಿದ ಕ್ರೈಸ್ತ ಬಾಂಧವರು ಈಸ್ಟರ್‌ ಹಬ್ಬದ ಶುಭಾಶಯ ವಿನಿಮಯ ಮಾಡಿ ಸಂಭ್ರಮಿಸಿದರು.