ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ಕೊಡಗು ಜಿಲ್ಲಾದ್ಯಂತ ಗೌರಿ ಗಣೇಶ ಹಬ್ಬವನ್ನು ಬುಧವಾರ ಶ್ರದ್ಧಾಭಕ್ತಿಯಿಂದ ಆಚರಣೆ ಮಾಡಲಾಯಿತು.ಜಿಲ್ಲಾಕೇಂದ್ರ ಮಡಿಕೇರಿ, ವಿರಾಜಪೇಟೆ ಕುಶಾಲನಗರ, ಸಿದ್ದಾಪುರ, ಗೋಣಿಕೊಪ್ಪ ಸೇರಿದಂತೆ ಜಿಲ್ಲಾದ್ಯಂತ 500ಕ್ಕೂ ಹೆಚ್ಚು ಕಡೆಗಳಲ್ಲಿ ವಿವಿಧ ಸಂಘ ಸಮಿತಿಗಳಿಂದ ಗೌರಿ, ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗಿದೆ.
ಕೆಲವು ಕಡೆ ಸುರಿಯುವ ಮಳೆಯನ್ನು ಲೆಕ್ಕಿಸದೆ ಗಣೇಶೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.ಮಡಿಕೇರಿಯ ಕೋಟೆ ಮಹಾಗಣಪತಿ ದೇವಾಲಯ, ಕುಶಾಲನಗರದ ಗಣಪತಿ ದೇವಾಲಯ, ವಿರಾಜಪೇಟೆ ಗಣಪತಿ ದೇವಾಲಯ ಸೇರಿದಂತೆ ಜಿಲ್ಲೆಯಲ್ಲಿರುವ ವಿವಿಧ ಗಣಪತಿ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಯಿತು. ಬೆಳಗ್ಗೆಯಿಂದಲೇ ನಡೆದ ಪೂಜೆಯಲ್ಲಿ ಮಹಿಳೆಯರು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ವಿಘ್ನ ನಿವಾರಕನಿಗೆ ಪೂಜೆ ಸಲ್ಲಿಸಿದರು. ಇನ್ನೂ ಕೆಲವರು ಮನೆಗಳಲ್ಲಿ ಗೌರಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಗಣೇಶನಿಗೆ ಪ್ರಿಯವಾದ ವಿವಿಧ ತಿನಿಸುಗಳನ್ನು ಅರ್ಪಣೆ ಮಾಡಿ ಪೂಜೆ ನೆರವೇರಿಸಿದರು.
ಜಿಲ್ಲೆಯಾದ್ಯಂತ ವಿವಿಧ ಕಡೆಗಳಲ್ಲಿ ಗೌರಿ ಗಣೇಶೋತ್ಸವ ಸಮಿತಿಗಳಿಂದ ಭಕ್ತರಿಗೆ ಅನ್ನಸಂತರ್ಪಣೆ ಕಾರ್ಯಕ್ರಮ ಕೂಡ ನಡೆಯಿತು.ಮಡಿಕೇರಿಯಲ್ಲಿ ಶಾಂತಿನಿಕೇತನ ಯುವಕ ಸಂಘ, ಗಣಪತಿ ಯುವಕ ಸಂಘ ಗಣಪತಿ ಬೀದಿ, ಧಾರ್ಮಿಕ್ ಯುವ ವೇದಿಕೆ, ತ್ಯಾಗರಾಜ ಕಾಲೋನಿಯ ಅಭಿಷ್ಟಪ್ರದ ಗಣಪತಿ ಸಮಿತಿ, ದೃಷ್ಟಿ ಗಣಪತಿ ಯುವಕ ಸಂಘ ಕನ್ನಂಡಬಾಣೆ, ಮಲ್ಲಿಕಾರ್ಜುನ ನಗರ, ಕೆಎಸ್‌ಆರ್‌ಟಿಸಿ ಗಣಪತಿ ಸೇವಾ ಸಮಿತಿ, ಓಂಕಾರ್ ಯುವ ವೇದಿಕೆ, ಸಂಪಿಗೆ ಕಟ್ಟೆ ಯುವಕ ಸಂಘ, ಮಂಗಳಾದೇವಿ ನಗರದ ಶ್ರೀ ಆದಿಪರಾಶಕ್ತಿ ಯುವ ಸಂಘ, ವಿದ್ಯಾನಗರ ಸಮಿತಿ, ಜ್ಯೋತಿ ನಗರ ಶಿವಶಕ್ತಿ ಯುವಕ ಸಂಘ, ಮುನೀಶ್ವರ ಯುವಕ ಸಂಘ, ಕಾನ್ವೆಂಟ್ ಜಂಕ್ಷನ್‌ನ ಶ್ರೀ ಮಹಾಗಣಪತಿ ಸೇವಾ ಸಮಿತಿ ಮತ್ತು ನಾನಾ ಸಮಿತಿಗಳು ಗೌರಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಿದ್ದು ನಗರದ ಇತಿಹಾಸ ಪ್ರಸಿದ್ಧ ಗೌರಿ ಕೆರೆಯಲ್ಲಿ ವಿಸರ್ಜನೆಗೊಳ್ಳಲಿದೆ.