ಕೊಡಗಿನೆಲ್ಲೆಡೆ ಶ್ರದ್ಧಾಭಕ್ತಿಯ ಶಿವಾರಾಧನೆ, ಶಿವನಾಮ ಸ್ಮರಣೆ

| Published : Feb 27 2025, 12:31 AM IST

ಸಾರಾಂಶ

ವಿವಿಧ ಶಿವನ ದೇಗುಲಗಳಲ್ಲಿ ವಿಶೇಷ ಆರಾಧನೆ, ಪೂಜೆ ಪುನಸ್ಕಾರಗಳು ನಡೆದವು. ಅಪಾರ ಜನಸ್ತೋಮ ಶಿವಭಕ್ತಿಯಲ್ಲಿ ಮಿಂದೆದ್ದಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕೊಡಗು ಜಿಲ್ಲೆಯ ಎಲ್ಲೆಡೆ ಬುಧವಾರ ಶಿವನಾಮ ಸ್ಮರಣೆ ನಡೆಯಿತು. ವಿವಿಧ ಶಿವನ ದೇಗುಲಗಳಲ್ಲಿ ವಿಶೇಷ ಆರಾಧನೆಗಳು, ಪೂಜೆ ಪುನಸ್ಕಾರಗಳು ದಿನವಿಡೀ ನಡೆದವು. ಹಲವೆಡೆ ರಾತ್ರಿ ಇಡೀ ಜಾಗರಣೆಗಳು ನಡೆದು, ಅಪಾರ ಜನಸ್ತೋಮ ಶಿವಭಕ್ತಿಯಲ್ಲಿ ಮಿಂದೆದ್ದಿತು.

ಮಡಿಕೇರಿಯ ಇತಿಹಾಸ ಪ್ರಸಿದ್ಧ ಶ್ರೀ ಓಂಕಾರೇಶ್ವರ ದೇವಾಲಯ, ಭಾಗಮಂಡಲದ ಶ್ರೀಭಗಂಡೇಶ್ವರ ದೇವಾಲಯ, ಅಗಸ್ತ್ಯೇಶ್ವರ ಕ್ಷೇತ್ರ ಸೇರಿದಂತೆ ವಿವಿಧ ಶಿವಾಲಯಗಳಲ್ಲಿ ಶಿವಾರಾಧನೆ ಶ್ರದ್ಧಾಭಕ್ತಿಯಿಂದ ನಡೆಯಿತು. ಹೋಮ ಹವನಾದಿ, ಅಭಿಷೇಕ, ಮಂತ್ರ ಪಠಣ, ಅಲಂಕಾರ ಪೂಜೆ, ಮಹಾಪೂಜೆ ಸೇರಿದಂತೆ ವಿಶೇಷ ಧಾರ್ಮಿಕ ಕೈಂಕರ್ಯಗಳೊಂದಿಗೆ ಪರಶಿವನನ್ನು ಪೂಜಿಸಲಾಯಿತು.

ಭಕ್ತರು ಉಪವಾಸ ವ್ರತದೊಂದಿಗೆ ಶಿವ ದೇವಾಲಯಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ವಿವಿಧ ದೇವಾಲಯಗಳಲ್ಲಿ ರಾತ್ರಿಯಿಡೀ ಜಾಗರಣೆ, ಭಜನೆ ಹಾಗೂ ಶಿವನಾಮ ಸ್ಮರಣೆ, ಭಕ್ತಿಪ್ರಧಾನ ಕಾರ್ಯಕ್ರಮಗಳು ಜರುಗಿದವು.

ಓಂಕಾರೇಶ್ವರ ದೇಗುಲದಲ್ಲಿ ಭಕ್ತ ಸಾಗರ:

ಮಂಜಿನ ನಗರಿ ಮಡಿಕೇರಿಯ ಸುಪ್ರಸಿದ್ಧ ಶಿವಭಕ್ತಿ ಕೇಂದ್ರವಾಗಿರುವ ಓಂಕಾರೇಶ್ವರ ದೇಗುಲದಲ್ಲೂ ಶಿವರಾತ್ರಿ ಅಂಗವಾಗಿ ಮಹಾದೇವನಿಗೆ ವಿಶೇಷ ಪೂಜೆಗಳು ನಡೆದವು. ರುದ್ರಹೋಮ, ಏಕಾದಶ ರುದ್ರಾಭಿಷೇಕ ಹಾಗೂ ಅಲಂಕಾರ ಪೂಜೆಗಳು ನಡೆಯಿತು. ಬೇಡಿದ ವರವ ನೀಡೋ ಕರುಣಾಳು ಜಗದೀಶ್ವರನಿಗೆ ಮನಸಾರೆ ಜನ ವಂದಿಸಿದರು.

ಮಹಾಶಿವರಾತ್ರಿ ದಿನವಾದ್ದರಿಂದ ಬೆಳಗ್ಗೆಯಿಂದಲೂ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಜನ ಮುಕ್ಕಣ್ಣನನ್ನು ಕಣ್ತುಂಬಿಕೊಂಡರು. ರಾತ್ರಿ ಪೂರ್ತಿ ದೇಗುಲದಲ್ಲಿ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ವಿಶೇಷ ದೀಪಾಲಂಕಾರದ ಬೆಳಕಿನಲ್ಲಿ ದೇಗುಲ ಕಣ್ಮನ ಸೆಳೆಯಿತು.

ಮತ್ತೊಂದು ಪ್ರಮುಖ ಕ್ಷೇತ್ರ ಎನಿಸಿದ ಕರ್ಣಂಗೇರಿಯ ರಾಜರಾಜೇಶ್ವರಿ ದೇಗುಲದಲ್ಲಿರುವ ಬೃಹತ್ ಶಿವನ ಮೂರ್ತಿಯನ್ನು ಕಣ್ತುಂಬಿಕೊಳ್ಳಲು ನೂರಾರು ಸಂಖ್ಯೆಯಲ್ಲಿ ಜನರು ದೇಗುಲಕ್ಕೆ ಆಗಮಿಸಿದರು. ದಿನವಿಡೀ ವಿಶೇಷ ಪೂಜಾ ಕೈಂಕರ್ಯಗಳು ಇಲ್ಲಿ ನೆರವೇರಿದರೆ, ರಾತ್ರಿ ದೀಪೋತ್ಸವ ನಡೆದು, ಇಡೀ ದೇಗುಲವೇ ದೀಪದ ಬೆಳಕಿನಲ್ಲಿ ಸೂಜಿಗಲ್ಲಿನಂತೆ ಸೆಳೆಯಿತು.

ಇನ್ನು ಮಹದೇವಪೇಟೆಯಲ್ಲಿರುವ ಬಸವೇಶ್ವರ ದೇಗುಲದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಜನರು ಸೇರಿದ್ದರು. ಕನ್ಯಕಾಪರಮೇಶ್ವರಿ ದೇಗುಲದಲ್ಲಿರುವ ನಗರೇಶ್ವರ ಸ್ವಾಮಿ ಮೂರ್ತಿಗೆ ಕ್ಷೀರ ಅಭಿಷೇಕ, ಪಂಚಾಮೃತ ಅಭಿಷೇಕ, ರುದ್ರಾಭಿಷೇಕಗಳು ನಡೆದವು. ಜೊತೆಗೆ, ರುದ್ರ ಪಾರಾಯಣವು ಜರುಗಿತು.

ಇಲ್ಲಿನ ದಾಸವಾಳ ಬಡಾವಣೆಯಲ್ಲಿರುವ ವೀರಭದ್ರ ಮುನೇಶ್ವರ ದೇವಾಲಯದಲ್ಲಿ ನೂರಾರು ಸಂಖ್ಯೆಯಲ್ಲಿ ಭಕ್ತರು ಬೆಳಗ್ಗೆಯಿಂದ ತಡರಾತ್ರಿಯವರೆಗೂ ಸೇರಿದ್ದರು. ವಿವಿಧ ವಿಶೇಷ ಪೂಜಾ ಕೈಂಕರ್ಯಗಳ ನಂತರ ಮಧ್ಯಾಹ್ನ ಅನ್ನದಾನ ನಡೆಯಿತು.

ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ‘ಲೈಟ್‌ ಹೌಸ್‌’ನಲ್ಲಿ ಧ್ಯಾನ ಮೊದಲಾದ ವಿಶೇಷ ಕಾರ್ಯಕ್ರಮಗಳು ಬೆಳಗ್ಗೆ ಮತ್ತು ಸಂಜೆ ನಡೆದವು. ನೂರಾರು ಮಂದಿ ಭಾಗವಹಿಸಿದ್ದರು.

ಮೇಕೇರಿ ಗೌರಿ ಶಂಕರನಿಗೆ ವಿಶೇಷ ಪೂಜೆ

ಮಡಿಕೇರಿ ಸಮೀಪದ ಮೇಕೇರಿಯ ಶ್ರೀ ಗೌರಿಶಂಕರ ದೇವಾಲಯದಲ್ಲಿ ಮಹಾ ಶಿವರಾತ್ರಿ ಆಚರಣೆ ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು. ಶಿವರಾತ್ರಿ ಹಿನ್ನೆಲೆ ದೇವಾಲಯದಲ್ಲಿ ಬೆಳಗ್ಗಿನಿಂದಲೇ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿತು.

ದೇವಾಲಯಲ್ಲಿ ಬೆಳಗ್ಗಿನಿಂದಲೇ ಗಣಪತಿ ಹೋಮ, ಈಶ್ವರನಿಗೆ ರುದ್ರಾಭಿಷೇಕ, ಮಹಾ ಮೃತ್ಯುಂಜಯ ಹೋಮ ನಡೆಯಿತು. ಮಧ್ಯಾಹ್ನ ಮಹಾಪೂಜೆಯ ನಂತರ ನೆರೆದಿದ್ದ ಸಹಸ್ರಾರು ಭಕ್ತರಿಗೆ ಅನ್ನದಾನ ನೆರವೇರಿತು.