ಹಾವೇರಿ ನಗರದ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ 315ನೇ ಆರಾಧನಾ ಮಹೋತ್ಸವದ ಅಂಗವಾಗಿ ಭಾನುವಾರ ಮಧ್ಯಾರಾಧನೆ ಕಾರ್ಯಕ್ರಮವು ವಿವಿಧ ಧಾರ್ಮಿಕ ವಿಧಿವಿಧಾನಗಳೊಂದಿಗೆ ಭಕ್ತಿಭಾವದಿಂದ ನೆರವೇರಿತು.

ಹಾವೇರಿ: ನಗರದ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ 315ನೇ ಆರಾಧನಾ ಮಹೋತ್ಸವದ ಅಂಗವಾಗಿ ಭಾನುವಾರ ಮಧ್ಯಾರಾಧನೆ ಕಾರ್ಯಕ್ರಮವು ವಿವಿಧ ಧಾರ್ಮಿಕ ವಿಧಿವಿಧಾನಗಳೊಂದಿಗೆ ಭಕ್ತಿಭಾವದಿಂದ ನೆರವೇರಿತು.

ವೈದ್ಯ ಫ್ಯಾಮಿಲಿ ಟ್ರಸ್ಟ್ ಧರ್ಮದರ್ಶಿ ಹರಿಕೃಷ್ಣ ಭಟ್ ಅವರ ನೇತೃತ್ವದಲ್ಲಿ ಆರಾಧನಾ ಮಹೋತ್ಸವದ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿವೆ. ಭಾನುವಾರ ಬೆಳಗ್ಗೆಯಿಂದಲೇ ಮಠದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು.

ಬೆಳಗ್ಗೆ ಪಂಚಾಮೃತ ಅಭಿಷೇಕ, ಅಷ್ಟೋತ್ತರ ಪಾರಾಯಣ ಹಾಗೂ ಶ್ರೀಕೃಷ್ಣ ಮಂತ್ರ ಹೋಮ ನೆರವೇರಿತು. ಬಳಿಕ ತೇರು ಬೀದಿಯ ಹನುಮಂತ ದೇವರ ದರ್ಶನ ಹಾಗೂ ಶ್ರೀ ರಾಘವೇಂದ್ರ ಸ್ವಾಮಿಗಳ ಪಾದಪೂಜೆ ನಡೆಯಿತು. ಬೆಳಗ್ಗೆ 8.30ಕ್ಕೆ ಅಲಂಕಾರ ಪೂಜೆ ಹಾಗೂ ಅಲಂಕಾರ ಬ್ರಾಹ್ಮಣರ ಆರಾಧನೆ ಆರಂಭಗೊಂಡು, ನಂತರ ಮಹಾಪೂಜೆ ನೆರವೇರಿಸಲಾಯಿತು.

ಮಧ್ಯಾಹ್ನ 12ಕ್ಕೆ ಬೆಳ್ಳಿ ರಥೋತ್ಸವ ವೈಭವದಿಂದ ನಡೆಯಿತು. ಇದೇ ವೇಳೆ ಅನ್ನಪೂರ್ಣೇಶ್ವರಿ ಪೂಜೆ ನೆರವೇರಿಸಿ ಭಕ್ತರಿಗೆ ತೀರ್ಥ ಪ್ರಸಾದ ವಿತರಿಸಲಾಯಿತು. ರಥೋತ್ಸವದ ಸಂದರ್ಭದಲ್ಲಿ ಭಕ್ತರು ಭಜನೆ ಹಾಗೂ ದೇವರ ನಾಮಸ್ಮರಣೆಯಲ್ಲಿ ತೊಡಗಿಕೊಂಡು ಧಾರ್ಮಿಕ ವಾತಾವರಣವನ್ನು ಮತ್ತಷ್ಟು ಭಕ್ತಿಮಯಗೊಳಿಸಿದರು.

ಸಂಜೆ ಸರ್ವತೋಭದ್ರ ಮಂಡಲ ಪೂಜೆ ಹಾಗೂ ಹೂವಿನ ರಥೋತ್ಸವ ನಡೆಯಿತು. ವಿವಿಧ ಪುಷ್ಪಗಳಿಂದ ಅಲಂಕರಿಸಲ್ಪಟ್ಟ ರಥೋತ್ಸವ ಭಕ್ತರ ಗಮನ ಸೆಳೆಯಿತು. ರಾತ್ರಿ 8ಕ್ಕೆ ಅಷ್ಟಾವಧಾನ ಹಾಗೂ ಮಹಾ ಮಂಗಳಾರತಿ ಕಾರ್ಯಕ್ರಮದೊಂದಿಗೆ ದಿನದ ಧಾರ್ಮಿಕ ಕಾರ್ಯಕ್ರಮಗಳು ಸಮಾಪ್ತಿಗೊಂಡವು. 315ನೇ ಆರಾಧನಾ ಮಹೋತ್ಸವದ ಅಂಗವಾಗಿ ನಡೆದ ವಿವಿಧ ಕಾರ್ಯಕ್ರಮಗಳಲ್ಲಿ ರಾಯರ ಮಠದ ಅನೇಕ ಭಕ್ತರು ಪಾಲ್ಗೊಂಡು ಶ್ರೀ ರಾಘವೇಂದ್ರ ಸ್ವಾಮಿಗಳ ದರ್ಶನ ಪಡೆದು ಪುನೀತರಾದರು. ಮಠದ ಆವರಣದಲ್ಲಿ ದಿನವಿಡೀ ಭಕ್ತರ ಸಂಚಾರದಿಂದ ಹಬ್ಬದ ವಾತಾವರಣ ನಿರ್ಮಾಣವಾಗಿದೆ.