ಸಾರಾಂಶ
ಪರಸ್ಪರ ತಬ್ಬಿಕೊಂಡು, ಸಿಹಿ ಹಂಚಿ ಹಬ್ಬದ ಶುಭಾಶಯ ವಿನಿಮಯ । ವಿವಿಧೆಡೆ ಸಾಮೂಹಿಕ ಪ್ರಾರ್ಥನೆ
ಕನ್ನಡಪ್ರಭ ವಾರ್ತೆ ಕೊಪ್ಪಳಜಿಲ್ಲಾದ್ಯಂತ ಗುರುವಾರ ಶ್ರದ್ಧಾಭಕ್ತಿ, ದಾನ, ಧರ್ಮದ ಪ್ರತೀಕ ಆಗಿರುವ ರಂಜಾನ್ ಹಬ್ಬ ಸಡಗರ, ಸಂಭ್ರಮದಿಂದ ಜರುಗಿತು.
ನಗರದ ಈದ್ಗಾ ಮೈದಾನದಲ್ಲಿ ಅಪಾರ ಸಂಖ್ಯೆಯ ಮುಸ್ಲಿಂ ಬಾಂಧವರು ಒಂದೆಡೆ ಸೇರಿ ಪ್ರಾರ್ಥನೆ ಸಲ್ಲಿಸಿದರು. ರಾಜಕೀಯ ಮುಖಂಡರು, ಗಣ್ಯರು, ಹಿರಿಯರು ಭಾಗಿಯಾಗಿದ್ದರು.ತಿಂಗಳಿನಿಂದ ಕಠಿಣ ಉಪವಾಸ, ಧ್ಯಾನದಿಂದ ವ್ರತ ಆಚರಣೆ ಮಾಡಿದ ಮುಸ್ಲಿಂ ಬಾಂಧವರು ಗುರುವಾರ ಸಂಭ್ರಮದಿಂದ ರಂಜಾನ್ ಆಚರಿಸಿದರು. ಬೆಳಗ್ಗೆ ಈದ್ಗಾ ಮೈದಾನಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದರು. ಪರಸ್ಪರ ಒಬ್ಬರನ್ನೊಬ್ಬರು ತಬ್ಬಿಕೊಂಡು ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು. ಸಿಹಿ ತಿನಿಸಿ ಹಬ್ಬದ ಸಂತಸ ಕೋರಿದರು. ತಿಂಗಳಿನಿಂದ ತೊಟ್ಟು ನೀರು ಸೇವಿಸದೆ ಮುಂಜಾವಿನಿಂದ ಸಂಜೆವರೆಗೂ ಉಪವಾಸ ವ್ರತ ಕೈಗೊಂಡಿದ್ದರು. ಸಂಪ್ರದಾಯದಂತೆ ಕಟ್ಟುನಿಟ್ಟಿನ ವ್ರತ ಆಚರಿಸಿ ನಿತ್ಯ ಪ್ರಾರ್ಥನೆಯಲ್ಲಿ ಭಾಗಿಯಾಗಿದ್ದರು.ಗುರುವಾರ ರಂಜಾನ್ ಹಬ್ಬದ ಪ್ರಯುಕ್ತ ಎಲ್ಲರಲ್ಲಿ ಸಂಭ್ರಮ ಇಮ್ಮಡಿಯಾಗಿತ್ತು. ತಂಡೋಪಂಡವಾಗಿ ಮುಸ್ಲಿಂ ಬಾಂಧವರು ಈದ್ಗಾ ಮೈದಾನಗಳಲ್ಲಿ ಸೇರಿ ಪ್ರಾರ್ಥನೆಯಲ್ಲಿ ಭಾಗಿಯಾದರು. ಹಬ್ಬದ ಸಂದೇಶ ಸಾರಿದರು. ಆತ್ಮ ಶುದ್ಧಿ, ದೈಹಿಕ ಶುದ್ಧಿ, ದಾನ, ಧರ್ಮದ ಪ್ರತಿಕ ಆಗಿರುವ ರಂಜಾನ್ ಹಬ್ಬ ಸಡಗರದ ಪ್ರತೀಕ ಆಗಿತ್ತು. ಮುಸ್ಲಿಂ ಬಾಂಧವರೊಡನೆ ಹಿಂದೂ ಬಾಂಧವರು ಜತೆಗೂಡಿ ಮುಸ್ಲಿಂ ಬಾಂಧವರಿಗೆ ಹಬ್ಬದ ಶುಭಾಶಯ ಕೋರಿದರು.
ಮಕ್ಕಳ ಸಂಭ್ರಮ:ರಂಜಾನ್ ಹಬ್ಬದಲ್ಲಿ ಹಿರಿಯರು ಮಾತ್ರವಲ್ಲದೆ ಮಕ್ಕಳು ಸಹ ಭಾಗಿಯಾಗಿ ಹಬ್ಬದ ಕ್ಷಣದಲ್ಲಿ ಪಾಲುದಾರರಾದರು. ಮಕ್ಕಳು ಸಹ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ಮಕ್ಕಳ ಶುಭಾಶಯ ಕೋರುವುದು ನೆರೆದಿದ್ದವರ ಮನದಲ್ಲಿ ಮುದದ ಭಾವ ಮೂಡಿಸುವಂತಿತ್ತು.
ಉರಿ ಬಿಸಿಲು:ರಂಜಾನ್ ಹಬ್ಬದ ಪ್ರಯುಕ್ತ ಪ್ರಾರ್ಥನೆಗೆ ಆಗಮಿಸಿದ ಮುಸ್ಲಿಂ ಬಾಂಧವರಿಗೆ ಉರಿ ಬಿಸಿಲು ಕಾಡಿತು. ಬಿಸಿಲ ಝಳಕ್ಕೆ ಬೇಸತ್ತು ಛತ್ರಿ ಹಿಡಿದು ಮುಸ್ಲಿಂ ಬಾಂಧವರು ಪ್ರಾರ್ಥನೆ ಸಲ್ಲಿಸಿ ಭಕ್ತಿ ಮೆರೆದರು.