ಸಾರಾಂಶ
ರಾಣಿಬೆನ್ನೂರು: ಮಕ್ಕಳಲ್ಲಿ ಜಂತುಹುಳ ನಿವಾರಣೆ ಮಾಡವುದು ಅತ್ಯಗತ್ಯವಾಗಿದೆ ಎಂದು ಪ್ರಾ ಪಿ. ಮನಿಯಪ್ಪ ಹೇಳಿದರು. ತಾಲೂಕಿನ ಸುಣಕಲ್ಲಬಿದರಿ ಗ್ರಾಮದ ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಶ್ರೀ ಸದ್ಗುರು ಶಿವಾನಂದ ಸಂಯುಕ್ತ ಪ. ಪೂ. ಕಾಲೇಜಿನಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ, ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ ಜಂತು ಹುಳು ನಿವಾರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಜಂತುಹುಳು ಸೋಂಕಿನಿಂದಾಗಿ ಮಕ್ಕಳಲ್ಲಿ ರಕ್ತ ಹೀನತೆ, ಪೌಷ್ಟಿಕಾಂಶ ಕೊರತೆ, ನಿಶಕ್ತಿ ಹಸಿವು ಆಗದಿರುವುದು, ಹೊಟ್ಟೆ ನೋವು ಕಂಡು ಬರುತ್ತದೆ. ಇದರ ತಡೆಗಾಗಿ 1ರಿಂದ 19 ವರ್ಷದ ಎಲ್ಲಾ ಮಕ್ಕಳಿಗೂ ಶಾಲೆಗಳಲ್ಲಿ ಅಲ್ಬೆಂಡಝೋಲ್ ಮಾತ್ರೆಗಳನ್ನು ಉಚಿತವಾಗಿ ನೀಡಲಾಗುತ್ತದೆ. ವಿದ್ಯಾರ್ಥಿಗಳು ಇದರ ಸದುಪಯೋಗ ಮಾಡಿಕೊಂಡು ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದರು.ಎನ್ನೆಸ್ಸೆಸ್ ಜಿಲ್ಲಾ ನೋಡಲ್ ಅಧಿಕಾರಿ ಎಚ್. ಶಿವಾನಂದ ಮಾತನಾಡಿದರು. ಉಪನ್ಯಾಸಕರುಗಳಾದ ರೇವಣ್ಣ ನಾಯಕ, ಕರಿಬಸಪ್ಪ ಗುಗ್ಗರಿ, ಮಲ್ಲಿಕಾರ್ಜುನ ಮುರನಾಳ, ಸಂತೋಷ ಅಂಗಡಿ, ಪೂರ್ಣಿಮಾ ಮಾಗನೂರ, ಆರೋಗ್ಯ ನಿರೀಕ್ಷಾಧಿಕಾರಿ ರಾಧಿಕಾ ಕೆ.ಎನ್., ಆಶಾ ಕಾರ್ಯಕರ್ತರುಗಳಾದ ಗಂಗಮಾಳವ್ವ ಕುಸಗೂರ, ಸುನಂದ ಕುಸಗೂರ, ಅಕ್ಕಮ್ಮ ಇಮ್ಮಡಿ, ದ್ರಾಕ್ಷಾಯಿಣಿ ಕಮ್ಮಾರ ಮತ್ತಿತರರು ಉಪಸ್ಥಿತರಿದ್ದರು.