ಸಾರಾಂಶ
- ಬಿಜೆಪಿ ರೈತ ಮೋರ್ಚಾದಿಂದ ಪ್ರತಿಭಟನೆ: ಚಿಕ್ಕಮಗಳೂರಿನ ಡಿಎಫ್‌ಓ ಕಚೇರಿ
--- ರೈತ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್.ಸಿ. ಕಲ್ಮರುಡಪ್ಪ ನೇತೃತ್ವ
- ಎಐಟಿ ವೃತ್ತದಿಂದ ಮೆರವಣಿಗೆಯಲ್ಲಿ ಬಂದು ಮುತ್ತಿಗೆ- ಆನೆಗಳಿಗೆ ಅಗತ್ಯವಾದ ಹಣ್ಣಿನ ಗಿಡಗಳನ್ನು ಬೆಳೆಸಬೇಕು.
- ಕಾಡಾನೆಗಳು ಸತ್ತರೆ ಜನರಿಗೆ ತೊಂದರೆ ಕೊಡ್ತಾರೆ- ಆನೆಗಳ ಉಪಟಳದಿಂದ ಅಪಾರ ಹಾನಿಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು
ಕಾಡಾನೆಗಳ ಹಾವಳಿಯಿಂದ ಮಲೆನಾಡು ತತ್ತರಿಸಿದೆ. ಜಿಲ್ಲೆಯಲ್ಲಿ ಬೆಳೆ ಮತ್ತು ಪ್ರಾಣ ಹಾನಿ ಸಂಭವಿಸಿದೆ. ಈ ಆತಂಕ ಎಲ್ಲೆಡೆ ಮನೆ ಮಾಡಿದ್ದು ಅರಣ್ಯ ಇಲಾಖೆಯವರು ಆನೆಗಳನ್ನು ಸ್ಥಳಾಂತರ ಮಾಡಬೇಕೆಂದು ಆಗ್ರಹಿಸಿ ಬಿಜೆಪಿ ರೈತ ಮೋರ್ಚಾದ ನೇತೃತ್ವದಲ್ಲಿ ಸೋಮವಾರ ಚಿಕ್ಕಮಗಳೂರಿನಲ್ಲಿ ಪ್ರತಿಭಟನೆ ನಡೆಯಿತು.ಬಿಜೆಪಿ ರೈತ ಮೋರ್ಚಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್.ಸಿ. ಕಲ್ಮರುಡಪ್ಪ ನೇತೃತ್ವದಲ್ಲಿ ಇಲ್ಲಿನ ಎಐಟಿ ವೃತ್ತದಿಂದ ಮೆರವಣಿಗೆಯಲ್ಲಿ ತೆರಳಿದ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಚಿಕ್ಕಮಗಳೂರು ಡಿಎಫ್‌ಒ ಕಚೇರಿಗೆ ಮುತ್ತಿಗೆ ಹಾಕಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಎಚ್.ಸಿ. ಕಲ್ಮರಡಪ್ಪ, ಈ ಹಿಂದೆ ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದ ಬಳಲಿದ್ದ ರೈತ ಈಗ ಆನೆಗಳ ಹಾವಳಿಯಿಂದ ಬಳಲುತ್ತಿದ್ದಾನೆ. ಆನೆಗಳು ಸಕಲೇಶಪುರದಿಂದ ಬಂದು 2-3 ತಿಂಗಳಾದರೂ ನಮ್ಮ ಜಿಲ್ಲೆಯ ಉಸ್ತುವಾರಿ ಸಚಿವರು, ಶಾಸಕರು ಗಮನ ಹರಿಸಿಲ್ಲ. ನೀವು ಯಾರ ಪರ ಕೆಲಸ ಮಾಡ್ತಾ ಇದೀರಾ ಎಂಬ ಪ್ರಶ್ನೆ ಸಾರ್ವಜನಿಕವಾಗಿ ಮೂಡಿದೆ ಎಂದರು.ಆನೆಗಳು ಜನ ವಸತಿ ಪ್ರದೇಶಕ್ಕೆ ಬರಬಾರದು. ಈ ನಿಟ್ಟಿನಲ್ಲಿ ಕಾಡಿನಲ್ಲಿ ಆನೆಗಳಿಗೆ ಅಗತ್ಯವಾಗಿ ಬೇಕಾಗಿರುವ ಹಣ್ಣಿನ ಗಿಡ ಗಳನ್ನು ಬೆಳೆಸಬೇಕು. ಕಾಡಂಚಿನಲ್ಲಿ ಬೇಲಿ ನಿರ್ಮಾಣ ಮಾಡಬೇಕು ಎಂದು ಹೇಳಿದ ಅವರು, ಅರಣ್ಯ ಇಲಾಖೆ ಗುಪ್ತ ಗಾಮಿನಿಯಂತೆ ಕೆಲಸ ಮಾಡುತ್ತಿದೆ. ಪ್ರತಿ ವರ್ಷ ಸಾವಿರಾರು ಸಸಿಗಳನ್ನು ನೆಟ್ಟಿರುವ ಲೆಕ್ಕ ನೀಡುತ್ತಿದೆ. ಇದನ್ನು ಜಿಲ್ಲಾಧಿಕಾರಿಗಳು ಗಮನಿಸುತ್ತಿಲ್ಲ ಎಂದು ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವರು ನಾಡ ಹಬ್ಬಗಳು ಹಾಗೂ ಜಯಂತಿಗಳ ಸಂದರ್ಭದಲ್ಲಿ ಬಂದು ಹೋಗುವುದಲ್ಲ, ಆನೆಗಳ ಹಾವಳಿಯಿಂದ ಆಗಿರುವ ಬೆಳೆ ಹಾನಿ ಪ್ರದೇಶಕ್ಕೆ ಭೇಟಿ ನೀಡಬೇಕಾಗಿತ್ತು. ತೋಟಗಾರಿಕೆ ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ಸಹ ಬೆಳೆ ಹಾನಿ ಬಗ್ಗೆ ಪರಿಶೀಲನೆ ನಡೆಸಬೇಕಾಗಿತ್ತು. ಆದರೆ, ಈ ಯಾವುದೇ ಕೆಲಸ ಆಗಿಲ್ಲ ಎಂದರು.ಬಿಜೆಪಿ ರೈತ ಮೋರ್ಚಾದ ಜಿಲ್ಲಾಧ್ಯಕ್ಷ ಶಂಭೈನೂರು ಆನಂದಪ್ಪ ಮಾತನಾಡಿ, ಕಾಡಾನೆಗಳು ಸತ್ತರೆ ಜನರಿಗೆ ತೊಂದರೆ ಕೊಡ್ತಾರೆ. ಅರಣ್ಯ ಒತ್ತುವರಿಯಾಗಿದ್ದರೆ ಅದನ್ನು ಬಿಡಿಸಲು ನೂರಾರು ಸಿಬ್ಬಂದಿ ಬರುತ್ತಾರೆ. ಆದರೆ, ಬೆಳೆಹಾನಿಯಾಗಿದ್ದರೆ ಯಾಕೆ ಬರುವುದಿಲ್ಲ ಎಂದು ಪ್ರಶ್ನಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ರೈತ ಮೋರ್ಚಾದ ಪ್ರಭಾರಿ ರಾಮಸ್ವಾಮಿ, ಪ್ರಧಾನ ಕಾರ್ಯದರ್ಶಿ ದಿನೇಶ್ ಮುಗುಳವಳ್ಳಿ, ಉಪಾಧ್ಯಕ್ಷ ನಾಗರಾಜ್, ನಗರ ಮಂಡಲ ಅಧ್ಯಕ್ಷ ನಿಶಾಂತ್, ಉಮೇಶ್ ಕೇತುಮಾರನಹಳ್ಳಿ, ಮುಖಂಡರಾದ ಬಿ. ರಾಜಪ್ಪ, ಸೋಮಶೇಖರ್, ಮಧುಕುಮಾರ್ ರಾಜ್ ಅರಸ್, ಶಶಿ ಆಲ್ದೂರು ಹಾಗೂ ಕಾರ್ಯಕರ್ತರು ಇದ್ದರು.2 ಕೆಸಿಕೆಎಂ 1ಮಲೆನಾಡಿನಲ್ಲಿ ಉಪಟಳ ನೀಡುತ್ತಿರುವ ಕಾಡಾನೆಗಳನ್ನು ಸ್ಥಳಾಂತರ ಮಾಡುವಂತೆ ಆಗ್ರಹಿಸಿ ಬಿಜೆಪಿ ರೈತ ಮೋರ್ಚಾದ ನೇತೃತ್ವದಲ್ಲಿ ಕಾರ್ಯಕರ್ತರು ಚಿಕ್ಕಮಗಳೂರಿನ ಡಿಎಫ್‌ಒ ಕಚೇರಿಗೆ ಸೋಮವಾರ ಮುತ್ತಿಗೆ ಹಾಕಿದರು.