ತಾಲೂಕಿನ ರೇಕುಳಗಿಯ ಧಮ್ಮಾಂಕುರ ಮೌಂಟ್ನ ಅನಾಥ ಪಿಂಡಕ ಬುದ್ಧ ವಿಹಾರದಲ್ಲಿ ಅ. 20ರಂದು 70ನೇ ಧಮ್ಮಚಕ್ರ ಪ್ರವರ್ತನ ದಿನ ಹಾಗೂ ಅಶೋಕ ವಿಜಯದಶಮಿ ಮಹೋತ್ಸವವು ಅದ್ಧೂರಿಯಾಗಿ ಆಚರಿಸಲಾಗುವುದು ಎಂದು ಬುದ್ಧ ವಿಹಾರದ ಭಂತೆ ರೇವತ್ ತಿಳಿಸಿದರು.
ಕನ್ನಡಪ್ರಭ ವಾರ್ತೆ ಬೀದರ್
ತಾಲೂಕಿನ ರೇಕುಳಗಿಯ ಧಮ್ಮಾಂಕುರ ಮೌಂಟ್ನ ಅನಾಥ ಪಿಂಡಕ ಬುದ್ಧ ವಿಹಾರದಲ್ಲಿ ಅ. 20ರಂದು 70ನೇ ಧಮ್ಮಚಕ್ರ ಪ್ರವರ್ತನ ದಿನ ಹಾಗೂ ಅಶೋಕ ವಿಜಯದಶಮಿ ಮಹೋತ್ಸವವು ಅದ್ಧೂರಿಯಾಗಿ ಆಚರಿಸಲಾಗುವುದು ಎಂದು ಬುದ್ಧ ವಿಹಾರದ ಭಂತೆ ರೇವತ್ ತಿಳಿಸಿದರು.ಅವರು ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಭಿತ್ತಿಪತ್ರ ಬಿಡುಗಡೆಗೊಳಿಸಿ ಮಾತನಾಡಿ, ಮಹೋತ್ಸವದಲ್ಲಿ ದೇಶ ವಿದೇಶಗಳ ಬೌದ್ಧ ಭಿಕ್ಕುಗಳು, ಧಮ್ಮಗುರುಗಳು, ಚಿಂತಕರು ಹಾಗೂ ಸಾವಿರಾರು ಬೌದ್ಧ ಅನುಯಾಯಿಗಳು ಪಾಲ್ಗೊಳ್ಳಲಿದ್ದಾರೆ ಎಂದರು.
ವಿಯೆಟ್ನಾಂ ಬೌದ್ಧ ವಿಶ್ವವಿದ್ಯಾಲಯದ ಉಪಕುಲಪತಿ ಪರಮಪೂಜ್ಯ ಭಂತೆ ಥಿಚ್ ನ್ಯಾಟ್ ತು, ಜಪಾನ್ನ ಧ್ಯಾನಗುರು ಮಾಸ್ಟರ್ ಕಿಯಾಚಿ ತಾಡಾ, ಥೈಲ್ಯಾಂಡ್ನ ಭಂತೆ ಸೋಮಸಾಕ್ ಕೊವಿದೋ, ಗಗನ್ ಫೌಂಡೇಶನ್ ಮುಖ್ಯಸ್ಥ ಹಾಗೂ ಚಲನಚಿತ್ರ ನಟ ಗಗನ್ ಮಲಿಕ್ ಸೇರಿದಂತೆ ಜಪಾನ್, ಟಿಬೆಟ್, ವಿಯೆಟ್ನಾಂ, ಥೈಲ್ಯಾಂಡ್ನ ಬೌದ್ಧ ಧಮ್ಮಗುರುಗಳು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ, ಶಾಸಕ ರಹೀಮ್ ಖಾನ್, ಮಾಜಿ ಸಚಿವ ಬಂಡೆಪ್ಪ ಖಾಶೆಂಪೂರ್, ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಸೇರಿದಂತೆ ಜಿಲ್ಲೆಯ ಚುನಾಯಿತ ಜನಪ್ರತಿನಿಧಿಗಳು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
1956ರ ಅಕ್ಟೋಬರ್ 14ರಂದು ಸಂವಿಧಾನ ಶಿಲ್ಪಿ ಡಾ. ಬಿಆರ್ ಅಂಬೇಡ್ಕರ್ ಅವರು ನಾಗಪುರದಲ್ಲಿ ಲಕ್ಷಾಂತರ ಅನುಯಾಯಿಗಳೊಂದಿಗೆ ಬೌದ್ಧ ಧಮ್ಮ ಸ್ವೀಕರಿಸಿದ ಐತಿಹಾಸಿಕ ದಿನದ ಸ್ಮರಣಾರ್ಥ ಪ್ರತಿವರ್ಷ ಧಮ್ಮಚಕ್ರ ಪ್ರವರ್ತನ ದಿನ ಆಚರಿಸಲಾಗುತ್ತಿದೆ. ಅದರ ಅಂಗವಾಗಿ ರೇಕುಳಗಿಯಲ್ಲಿಯೂ ಹಲವು ವರ್ಷಗಳಿಂದ ಮಹೋತ್ಸವ ಆಯೋಜಿಸಲಾಗುತ್ತಿದೆ ಎಂದು ವಿವರಿಸಿದರು.ಅಮೇರಿಕದಲ್ಲಿ ವಿಶ್ವಶಾಂತಿಗಾಗಿ ನಡೆದ 5 ಸಾವಿರ ಕಿ.ಮೀ. ಧಮ್ಮಯಾತ್ರೆ ಹಾಗೂ ಕಲಬುರಗಿಯ ಸಿದ್ಧಾರ್ಥ ವಿಹಾರದಿಂದ ನಾಗಾರ್ಜುನ ಸಾಗರದ ಬುದ್ಧವನಂವರೆಗೆ ನಡೆದ 500 ಕಿ.ಮೀ. ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದ ಬೌದ್ಧ ಭಿಕ್ಕುಗಳು ಈ ಬಾರಿಯ ಮಹೋತ್ಸವದಲ್ಲಿ ಭಾಗವಹಿಸಲಿರುವುದು ವಿಶೇಷವಾಗಿದೆ ಎಂದರು.
ಅಕ್ಟೋಬರ್ 20ರಂದು ಬೆಳಿಗ್ಗೆ 10.30ಕ್ಕೆ ಧ್ವಜಾರೋಹಣ ಹಾಗೂ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಗಲಿದೆ. ಮಧ್ಯಾಹ್ನ 12ಕ್ಕೆ ಸಾಮೂಹಿಕ ಬುದ್ಧ ವಂದನೆ ಮತ್ತು ವೇದಿಕೆ ಕಾರ್ಯಕ್ರಮ ನಡೆಯಲಿದೆ. ಬೀದರ್ ಜಿಲ್ಲೆ ಸೇರಿದಂತೆ ನೆರೆಯ ತೆಲಂಗಾಣ, ಮಹಾರಾಷ್ಟ್ರ ಹಾಗೂ ರಾಜ್ಯದ ವಿವಿಧ ಜಿಲ್ಲೆಗಳಿಂದ ಸಾವಿರಾರು ಉಪಾಸಕರು ಆಗಮಿಸುವ ನಿರೀಕ್ಷೆಯಿದೆ ಎಂದು ಹೇಳಿದರು.ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಮಾರುತಿ ಬೌದ್ಧೆ ಹಾಗೂ ಮುಖಂಡ ಅನೀಲಕುಮಾರ ಬೆಲ್ದಾರ್ ಮಾತನಾಡಿದರು. ಹಿರಿಯ ಹೋರಾಟಗಾರ ಶಿವಮೂರ್ತಿ ಸುಬ್ಬಾನೆ, ಬಾಬುರಾವ್ ಪಾಸ್ವಾನ್, ಶ್ರೀಪತರಾವ್ ದೀನೆ, ಶಿವಕುಮಾರ ನೀಲಿಕಟ್ಟಿ, ವಕೀಲ ವಿನೋದಕುಮಾರ, ಪ್ರಸನ್ನ ಡಾಂಗೆ, ಮನ್ನಾಎಖೆಳ್ಳಿ ಅನಾಥ ಪಿಂಡಕ ಬುದ್ಧ ವಿಹಾರದ ಪ್ರಮುಖರು ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.