ಸಾರಾಂಶ
ಪುರಾಣ ಸಾಹಿತ್ಯದಿಂದ ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ದ್ಯಾಂಪೂರು ಗ್ರಾಮ ಸಮಾಜಕ್ಕೆ ಅಪಾರ ಕೊಡುಗೆ ನೀಡಿದೆ.
ಪುರಾಣ ಆರಂಭಕ್ಕೆ ಚಾಲನೆ
ಕನ್ನಡಪ್ರಭ ವಾರ್ತೆ ಕುಕನೂರುಪುರಾಣ ಸಾಹಿತ್ಯದಿಂದ ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ದ್ಯಾಂಪೂರು ಗ್ರಾಮ ಸಮಾಜಕ್ಕೆ ಅಪಾರ ಕೊಡುಗೆ ನೀಡಿದೆ ಎಂದು ಚಳಗೇರಿಯ ಶ್ರೀ ವೀರಸಂಗಮೇಶ್ವರ ಶಿವಾಚಾರ್ಯರು ಅಭಿಮತ ವ್ಯಕ್ತಪಡಿಸಿದರು.
ತಾಲೂಕಿನ ದ್ಯಾಂಪೂರು ಗ್ರಾಮದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಆರಂಭವಾದ ಪುರಾಣ ಪಠಣಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪುರಾಣ ಉದಾಸೀನ ಮಾಡುವ ಕಾಲಘಟ್ಟ ಇದೆ. ಪುರಾಣದಲ್ಲಿ ಬರುವ ಸನ್ನಿವೇಶ, ಕಥೆಗಳು ಜನರ ಬದುಕಿಗೆ ತಿರುಳು ನೀಡುತ್ತವೆ. ಅಂತಹ ಮಹತ್ತರವಾದ ಪುರಾಣಗಳನ್ನು ದ್ಯಾಂಪೂರು ಗ್ರಾಮದ ಕವಿಗಳು ರಚನೆ ಮಾಡಿದ್ದಾರೆ. ದ್ಯಾಂಪೂರು ಗ್ರಾಮದ ಪುರಾಣ ಸಾಹಿತ್ಯದ ತವರು ಆಗಿದೆ ಎಂದರು.ಮನುಷ್ಯ ತಂದೆ-ತಾಯಿಗೆ, ಗುರು-ಹಿರಿಯರಿಗೆ ತಲೆ ಬಾಗಿ ನಡೆದರೇ ಅವರ ಮಕ್ಕಳು ಸಹ ಉತ್ತಮ ಹಾದಿಯಲ್ಲಿ ಸಾಗುತ್ತಾರೆ.
ಲಕ್ಷ ಲಕ್ಷ ಹಣ ಕೊಟ್ಟು ದೊಡ್ಡ ದೊಡ್ಡ ಶಾಲೆಗೆ ಮಗು ಸೇರಿಸಿದರೂ ಕುಟುಂಬಸ್ಥರ ಅನುಕರಣೆ ಮಕ್ಕಳಿಗೆ ಅವಶ್ಯ. ಮಕ್ಕಳಿಗೆ ಪಾಲಕರಾದವರು ಜ್ಙಾನದ ಜ್ಯೋತಿ ನೀಡಬೇಕು ಎಂದರು.ಕುಕನೂರಿನ ಶ್ರೀ ಮಹಾದೇವ ಸ್ವಾಮೀಜಿ ಮಾತನಾಡಿ, ಗ್ರಾಮದಲ್ಲಿ ಲಘು ರಥೋತ್ಸವ ಆರಂಭ ಮಾಡಬೇಕು. ಕುಕನೂರಿನ ಅನ್ನದಾನೀಶ್ವರ ಶಾಖಾ ಮಠದಿಂದ ನಾನು ಸಹ ₹ 50 ಸಾವಿರ ನೀಡುತ್ತೇನೆ. ಉಳಿದ ಹಣವನ್ನು ಗ್ರಾಮಸ್ಥರು ಹಾಕಬೇಕು. ದ್ಯಾಂಪೂರು ಗ್ರಾಮದಲ್ಲಿ ಈ ವರ್ಷ ಲಘು ರಥೋತ್ಸವ ಆರಂಭ ಮಾಡಬೇಕು ಎಂದು ತಿಳಿಸಿದರು.
ಮುಖಂಡ ಈಶಯ್ಯ ಶಿರೂರಮಠ ಮಾತನಾಡಿ, ದ್ಯಾಂಪೂರು ಗ್ರಾಮದಲ್ಲಿ ಸತತವಾಗಿ ಪುರಾಣ ಪ್ರವಚನ ಜರುಗುತ್ತಾ ಬಂದಿದೆ. ಪುರಾಣ ಕಾರ್ಯದಿಂದ ಪುಣ್ಯ ಪ್ರಾಪ್ತಿ ಆಗುತ್ತದೆ. ಇಡೀ ಗ್ರಾಮಸ್ಥರು ಪುರಾಣ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕು ಎಂದರು.ಪ್ರಮುಖರಾದ ಜಗದೀಶ ಹಿರೇಮಠ, ವಿರುಪಾಕ್ಷಪ್ಪ ಗುರುವಿನಮಠ, ಶಿವಯ್ಯ ಸಸಿ, ರಾಜಶೇಖರಯ್ಯ ಶಿರೂರಮಠ, ಶಿವಾಜಪ್ಪ ಆರೇರ, ಯಮನಪ್ಪ ಆರೇರ, ಶರಣಪ್ಪ ಬಡಿಗೇರ, ಪುರಾಣಿಕರಾದ ಕುಮಾರಸ್ವಾಮಿ, ಗವಾಯಿಗಳು, ತಬಲ ವಾದಕ ಹಾಗೂ ಗ್ರಾಮಸ್ಥರಿದ್ದರು.