ಭೂಗಳ್ಳರ ಒತ್ತುವರಿಗೆ ಬಲಿಯಾದ ಧರ್ಮಸಾಗರ ಕೆರೆ

| Published : Feb 08 2024, 01:34 AM IST

ಸಾರಾಂಶ

ಧರ್ಮಸಾಗರ ಕೆರೆಗೆ ಅನುದಾನ ಬರುತ್ತೇ ಆದರೆ ಅಭಿವೃದ್ಧಿ ಮಾತ್ರ ಆಗೋದಿಲ್ಲ. ಸಾಮಾಜಿಕ ಅರಣ್ಯದ ೧೫೦೦ಕ್ಕೂ ಗಿಡ ಭೂಗಳ್ಳರ ಹಾವಳಿಗೆ ರಾತ್ರೋರಾತ್ರಿ ಕಾಣೆ. ೨೫೦ಎಕರೆ ಕೆರೆಯಲ್ಲಿ ಸೀಮೆ ಗಿಡಗಳು ಬೆಳೆದು ಕೆರೆಯೇ ಮಾಯ. ೫೦ಎಕರೆಗೂ ಅಧಿಕ ಭೂಮಿ ಬೆಂಗಳೂರಿನ ಭೂಗಳ್ಳರ ಪಾಲು. ಸರ್ಕಾರಿ ಅಧಿಕಾರಿಗಳ ಮೌನವೇ ಭೂಮಾಫಿಯಾ ನಡೆಸಲು ಶ್ರೀರಕ್ಷೆ.

ಕನ್ನಡಪ್ರಭ ವಾರ್ತೆ ಹೊಳವನಹಳ್ಳಿ

ಧರ್ಮಸಾಗರ ಕೆರೆಗೆ ಅನುದಾನ ಬರುತ್ತೇ ಆದರೆ ಅಭಿವೃದ್ಧಿ ಮಾತ್ರ ಆಗೋದಿಲ್ಲ. ಸಾಮಾಜಿಕ ಅರಣ್ಯದ ೧೫೦೦ಕ್ಕೂ ಗಿಡ ಭೂಗಳ್ಳರ ಹಾವಳಿಗೆ ರಾತ್ರೋರಾತ್ರಿ ಕಾಣೆ. ೨೫೦ಎಕರೆ ಕೆರೆಯಲ್ಲಿ ಸೀಮೆ ಗಿಡಗಳು ಬೆಳೆದು ಕೆರೆಯೇ ಮಾಯ. ೫೦ಎಕರೆಗೂ ಅಧಿಕ ಭೂಮಿ ಬೆಂಗಳೂರಿನ ಭೂಗಳ್ಳರ ಪಾಲು. ಸರ್ಕಾರಿ ಅಧಿಕಾರಿಗಳ ಮೌನವೇ ಭೂಮಾಫಿಯಾ ನಡೆಸಲು ಶ್ರೀರಕ್ಷೆ.

ಕೊರಟಗೆರೆ ತಾಲೂಕಿನ ಹೊಳವನಹಳ್ಳಿ ಹೋಬಳಿಯ ಚಿಕ್ಕಾವಳ್ಳಿ ಧರ್ಮಸಾಗರ ಕೆರೆ ಸುಮಾರು ೨೫೦ವರ್ಷಗಳ ಇತಿಹಾಸ ಹೊಂದಿದ್ದು, ೪೨೬ಎಕರೆ ಭೂ ವಿಸ್ತೀರ್ಣವಿದೆ. ಕೆರೆಯ ಪುನಶ್ಚೇತನ ಮತ್ತು ಅಭಿವೃದ್ಧಿ ಮಾಡಬೇಕಾದ ಸಣ್ಣ ನೀರಾವರಿ ಇಲಾಖೆಯೇ ಕೊರಟಗೆರೆಯಲ್ಲಿ ಇಲ್ಲ. ಸ್ಥಳೀಯ ಕ್ಯಾಮೇನಹಳ್ಳಿ ಗ್ರಾಪಂಗೆ ಕೆರೆಯ ರಕ್ಷಣೆ ಮತ್ತು ಅಭಿವೃದ್ಧಿಯ ಕಾಳಜಿಯು ಇಲ್ಲದೇ ಭೂಗಳ್ಳರ ಹಾವಳಿಗೆ ಕೆರೆಯು ಬಲಿಯಾಗಿ ಅಂತರ್ಜಲ ಮಟ್ಟವು ಮತ್ತೇ ಪಾತಾಳಕ್ಕೆ ಕುಸಿದಿದೆ.

ಜಯಮಂಗಲಿ ನದಿಪಾತ್ರದ ತೀತಾ ಜಲಾಶಯವು ಕಳೆದ ವರ್ಷ ಕೋಡಿಬಿದ್ದು ಧರ್ಮಸಾಗರ ಕೆರೆಯು ತುಂಬಿದ ವರ್ಷವೇ ಖಾಲಿ. ಕೆರೆಯ ಹಿಂಭಾಗದ ೯೫ಗ್ರಾಮದ ಅಂತರ್ಜಲ ಮಟ್ಟ ಸುಧಾರಣೆಗೆ ಮತ್ತೇ ಪೆಟ್ಟುಬಿದ್ದಿದೆ. ತೀತಾ ಜಲಾಶಯದ ಬಲದಂಡೆ ನಾಲೆಯಿಂದ ವೆಂಕಟಾಪುರ, ಕಂಬದಹಳ್ಳಿ, ಕೋಡ್ಲಹಳ್ಳಿ ಮಾರ್ಗದ ಕಾಲುವೆಗೆ ಕಲ್ಲು-ಮಣ್ಣು ಹಾಕಿ ಮುಚ್ಚಿರುವ ಹಿನ್ನೆಲೆ ನೂರಾರು ರೈತರಿಗೆ ಸಂಕಷ್ಟ. ಮೀನುಗಾರಿಕೆ ಇಲಾಖೆಯು ಲಾಭಕ್ಕೆ ಮಾತ್ರ ಸೀಮಿತವಾಗಿದ್ದು ಕೆರೆಯ ಪುನಶ್ಚೇತನ ಮತ್ತು ಅಭಿವೃದ್ಧಿಗೆ ಸರ್ಕಾರ ಪ್ರಮುಖ ಆದ್ಯತೆ ನೀಡಬೇಕಿದೆ.

೧೩೮ಎಕರೇಯ ದಾಖಲೆಯೇ ಇಲ್ಲ: ಧರ್ಮಸಾಗರ ಕೆರೆಯು ಮಾಳೇನಹಳ್ಳಿ ಸರ್ವೆ.೧೫ರಲ್ಲಿ ೩೧ಎಕರೆ, ಟಿ. ವೆಂಕಟಾಪುರ ಸರ್ವೆ ನಂ.೨೫ರಲ್ಲಿ ೧೦೮ಎಕರೆ, ಕೆ.ಜಿ. ಕಂಬದಹಳ್ಳಿ ಸರ್ವೆ ನಂ.೬ರಲ್ಲಿ ೨೯ಎಕರೆ, ತುಂಬುಗಾನಹಳ್ಳಿ ಸರ್ವೆ ನಂ.೧೩ರಲ್ಲಿ ೮೯ಎಕರೆ, ಚಿಕ್ಕಾವಳ್ಳಿ ಸರ್ವೆ ನಂ.೮೪ರಲ್ಲಿ ೨೮ಎಕರೆ ಸೇರಿ ೬ಗ್ರಾಮದ ೨೮೮ಎಕರೆಯ ದಾಖಲೆ ಕಂದಾಯ ಬಳಿಯಿದೆ. ಧರ್ಮಸಾಗರ ಕೆರೆಯ ಇನ್ನೂಳಿದ ೧೩೮ಎಕರೆ ಭೂ ವಿಸ್ತೀರ್ಣದ ದಾಖಲೆಯು ಕಂದಾಯ, ಗ್ರಾಪಂ, ಹೇಮಾವತಿ ಮತ್ತು ಸಣ್ಣ ನೀರಾವರಿ ಇಲಾಖೆಯ ಬಳಿಯು ಲಭ್ಯವಿಲ್ಲ. ಸರ್ವೆಗೆ ತಹಸೀಲ್ದಾರ್‌ ಖಡಕ್ ಆದೇಶ; ರೈತಸಂಘ ಕಳೆದ ೧೦ವರ್ಷದಿಂದ ಧರ್ಮಸಾಗರ ಕೆರೆಯ ಸರ್ವೆಗೆ ಮನವಿ ಮಾಡಿದ್ರು ಪ್ರಯೋಜನಾ ಆಗಿರಲಿಲ್ಲ. ರೈತಸಂಘದ ದೂರಿನ ಅನ್ವಯ ಕೊರಟಗೆರೆ ತಹಸೀಲ್ದಾರ್‌ ಮಂಜುನಾಥ .ಕೆ ರೈತರ ಜೊತೆಗೂಡಿ ಕೆರೆಯ ನಾಲ್ಕುದಿಕ್ಕಿನ ಮಾಹಿತಿ ಕಲೆಹಾಕಿದ್ದಾರೆ. ಕೆರೆಯ ಭೂಮಿ ಯಾರೇ ಒತ್ತುವರಿ ಮಾಡಿದ್ದರೂ ಮುಲಾಜಿಲ್ಲದೇ ತೆರವು ಮಾಡಿಸ್ತೇನೆ. ಕಂದಾಯ ಮತ್ತು ಸರ್ವೆ ಇಲಾಖೆ ಜಂಟಿಯಾಗಿ ಸರ್ವೆ ನಡೆಸುವಂತೆ ಕೆರೆಯಲ್ಲಿಯೇ ಅಧಿಕಾರಿಗಳಿಗೆ ಖಡಕ್ ಆದೇಶ ಮಾಡಿರುವ ಘಟನೆ ನಡೆದಿದೆ.