ಧರ್ಮಸ್ಥಳ: ಪ್ರಾಚೀನ ಭಾರತ ನಾಣ್ಯ, ಅಂಚೆಚೀಟಿ ಪ್ರದರ್ಶನ ಚಾಲನೆ

| Published : Feb 19 2025, 12:45 AM IST

ಸಾರಾಂಶ

ಮೂಡಿಗೆರೆಯ ಎಂ. ಎಲ್. ಅಶೋಕ್ ಸಂಗ್ರಹಿಸಿದ ಪ್ರಾಚೀನ ಕಾಲದ ನಾಣ್ಯ ಹಾಗೂ ಅಂಚೆಚೀಟಿಗಳ ವಿಶೇಷ ಪ್ರದರ್ಶನವನ್ನು ಧರ್ಮಸ್ಥಳದ ಮಂಜೂಷಾ ಮ್ಯೂಸಿಯಂನಲ್ಲಿ ಮಾ. ೧ರವರೆಗೆ ಆಯೋಜಿಸಲಾಗಿದ್ದು, ಸೋಮವಾರ ಪ್ರದರ್ಶನ ಆರಂಭವಾಯಿತು.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ಪ್ರಾಚೀನ ಕಾಲದ ನಾಣ್ಯಗಳು ನೋಡಲು ಸಿಗುವುದು ಅಪರೂಪ. ಅಂತಹ ನಾಣ್ಯಗಳನ್ನು ನೋಡುವುದರ ಜೊತೆಗೆ ಅವುಗಳ ಬಗ್ಗೆ ಮಾಹಿತಿ ಪಡೆಯುವ ವ್ಯವಸ್ಥೆಯನ್ನು ಧರ್ಮಸ್ಥಳದ ಮಂಜೂಷಾ ಮ್ಯೂಸಿಯಂನಲ್ಲಿ ಅಚ್ಚುಕಟ್ಟಾಗಿ ಮಾಡಲಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ದೇವಳದ ಪಾರುಪತ್ಯಗಾರ ಲಕ್ಷ್ಮೀನಾರಾಯಣ ಹೇಳಿದ್ದಾರೆ.

ಮೂಡಿಗೆರೆಯ ಎಂ. ಎಲ್. ಅಶೋಕ್ ಸಂಗ್ರಹಿಸಿದ ಪ್ರಾಚೀನ ಕಾಲದ ನಾಣ್ಯ ಹಾಗೂ ಅಂಚೆಚೀಟಿಗಳ ವಿಶೇಷ ಪ್ರದರ್ಶನವನ್ನು ಧರ್ಮಸ್ಥಳದ ಮಂಜೂಷಾ ಮ್ಯೂಸಿಯಂನಲ್ಲಿ ಮಾ. ೧ರವರೆಗೆ ಆಯೋಜಿಸಲಾಗಿದ್ದು, ಸೋಮವಾರ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.

ನಾಣ್ಯಗಳ ಸಂಗ್ರಹಕಾರ ಎಂ. ಎಲ್. ಅಶೋಕ್ ಮಾತನಾಡಿ, ಪ್ರಾಚೀನ ಭಾರತದಿಂದ ಆರಂಭಗೊಂಡು ಮೊನ್ನೆ ಮೊನ್ನೆಯಷ್ಟೇ ಬಿಡುಗಡೆಗೊಂಡ ನಾಣ್ಯಗಳವರೆಗೆ ಸಂಗ್ರಹಿಸಲಾದ ೧೦೦೦ಕ್ಕೂ ಹೆಚ್ಚಿನ ನಾಣ್ಯಗಳನ್ನು ಇಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ. ವಿವಿಧ ರಾಜ-ಮಹಾರಾಜರ ಕಾಲ, ಸ್ವಾತಂತ್ರ್ಯ ಪೂರ್ವ, ಸ್ವತಂತ್ರ ಭಾರತದ ಕಾಲದಿಂದ ಹಿಡಿದು ವಿಶೇಷ ಸಂದರ್ಭಗಳಲ್ಲಿ ಸರ್ಕಾರ ಬಿಡುಗಡೆಗೊಳಿಸಿದ ನಾಣ್ಯಗಳು, ಅಂಚೆ ಚೀಟಿಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ ಎಂದರು.

ವಸ್ತು ಸಂಗ್ರಹಾಲಯ ಜ್ಞಾನ ಹೆಚ್ಚಿಸುವುದರ ಜೊತೆಗೆ ಪ್ರಾಚೀನ ವಸ್ತುಗಳ ಬಗ್ಗೆ ಅರಿವು ಮೂಡಿಸಿ, ಇನ್ನಷ್ಟು ಆಸಕ್ತಿ, ಕುತೂಹಲ ಹೆಚ್ಚಲು ಪ್ರೇರಣೆಯಾಗಿವೆ ಎಂದು ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಆಪ್ತ ಕಾರ್ಯದರ್ಶಿ ಎ. ವೀರು ಶೆಟ್ಟಿ ಹೇಳಿದ್ದಾರೆ.

ಮಂಜೂಷಾ ವಸ್ತು ಸಂಗ್ರಹಾಲಯದ ಉಪ ನಿರ್ದೇಶಕ ರಿತೇಶ್ ಶರ್ಮಾ, ಎಸ್‌ಡಿಎಂ ಸಂಸ್ಕೃತಿ ಮತ್ತು ಸಂಶೋಧನಾ ಪ್ರತಿಷ್ಠಾನದ ಡಾ. ಪವನ್ ಕುಮಾರ್ ಹಾಗೂ ಸಿಬ್ಬಂದಿ ಇದ್ದರು.