ಧರ್ಮಸ್ಥಳ ಪ್ರಕರಣವೇ ಬುರುಡೆ: ಆಂದೋಲಾ ಶ್ರೀ

| Published : Sep 01 2025, 01:03 AM IST

ಸಾರಾಂಶ

ಧರ್ಮಸ್ಥಳ ಬುರುಡೆ ಪ್ರಕರಣದಲ್ಲಿ ಎಸ್‌ಐಟಿ ತನಿಖೆ ನಡೆಯುತ್ತಿದೆ. ಮುಸುಕುಧಾರಿ ತೋರಿಸಿದಂತೆ ಅಲ್ಲಿ ಯಾವುದೇ ಶವಗಳು ಹೂತಿರುವ ಸಾಕ್ಷಿಗಳು ಸಿಕ್ಕಿಲ್ಲ. ಇದು ಕರ್ನಾಟಕ ಸರ್ಕಾರದ ಆಡಳಿತಕ್ಕೆ ಮಂಕುಬೂದಿ ಎರಚುವ ಕೆಲಸ ಎಂದು ಶಿವಸೇನೆ ರಾಜ್ಯಾಧ್ಯಕ್ಷ ಆಂದೋಲಾ ಸಿದ್ದಲಿಂಗ ಸ್ವಾಮೀಜಿ ಹೇಳಿದರು.

ಕಲಬುರಗಿ: ಧರ್ಮಸ್ಥಳ ಬುರುಡೆ ಪ್ರಕರಣದಲ್ಲಿ ಎಸ್‌ಐಟಿ ತನಿಖೆ ನಡೆಯುತ್ತಿದೆ. ಮುಸುಕುಧಾರಿ ತೋರಿಸಿದಂತೆ ಅಲ್ಲಿ ಯಾವುದೇ ಶವಗಳು ಹೂತಿರುವ ಸಾಕ್ಷಿಗಳು ಸಿಕ್ಕಿಲ್ಲ. ಇದು ಕರ್ನಾಟಕ ಸರ್ಕಾರದ ಆಡಳಿತಕ್ಕೆ ಮಂಕುಬೂದಿ ಎರಚುವ ಕೆಲಸ ಎಂದು ಶಿವಸೇನೆ ರಾಜ್ಯಾಧ್ಯಕ್ಷ ಆಂದೋಲಾ ಸಿದ್ದಲಿಂಗ ಸ್ವಾಮೀಜಿ ಹೇಳಿದರು.

ಕಲಬುರಗಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ರೀತಿ ಸುಳ್ಳು ಹೇಳುವವರ, ಸುಳ್ಳು ಸುದ್ದಿ ಹಬ್ಬಿಸುವವರ ಹಿಂದೆ ಯಾರಿದ್ದಾರೆ ? ಈ ಬಗ್ಗೆಯೂ ತನಿಖೆ ಆಗಬೇಕು. ಹಿಂದೂ ಧಾರ್ಮಿಕತೆಗೆ ಧಕ್ಕೆ ತಂದವರಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿದರು.ಸರ್ಕಾರ, ಪೂರ್ವಾಪರ ವಿಚಾರ ಮಾಡದೇ ಎಸ್‌ಐಟಟಿ ರಚನೆ ಮಾಡಿ ಲಕ್ಷಾಂತರ ರುಪಾಯಿ ಖರ್ಚು ಮಾಡಿದೆ. ಅನಾಮಿಕ ಬಂದು ಹೇಳಿದನ್ನ ಕೇಳಿ ಮಂಕು ಬುದ್ಧಿಯ ಸರ್ಕಾರ ಲಕ್ಷಾಂತರ ರುಪಾಯಿ ಖರ್ಚು ಮಾಡ್ತಿದ್ದಾರೆ. ಈ ಖರ್ಚು ಮುಖ್ಯಮಂತ್ರಿ ಹಾಗೂ ಗೃಹ ಮಂತ್ರಿ ಅವರ ಸಂಬಳದಲ್ಲಿ ಕಡಿತ ಮಾಡಬೇಕು ಎಂದು ಆಗ್ರಹಿಸಿದ್ದಾರೆ.ಚಾಮುಂಡಿ ಬೆಟ್ಟ ಹಿಂದೂಗಳಿಗೆ ಸಂಬಂಧ ಇಲ್ಲ ಅಂತ ಡಿಕೆಶಿ ಅವರು ಹೇಳಿಕೆ ಕೊಟ್ಟಿದ್ದಾರೆ. ಚಾಮುಂಡಿ ಬೆಟ್ಟ ಮುಜರಾಯಿ ಇಲಾಖೆಗೆ ಸಂಬಂಧ ಪಟ್ಟಿದ್ದು. ಮುಜರಾಯಿ ಇಲಾಖೆಗೆ ಒಳಪಡುವ ದೇವಸ್ಥಾನಗಳಲ್ಲಿ ಮುಸ್ಲಿಂಮರು ವ್ಯಾಪಾರ ಮಾಡಬಾರದು ಅನ್ನೋ ನಿಯಮ ಇದೆ. ಹೀಗಿದ್ದಾಗ ಇದು ಹಿಂದೂಗಳ ಆಸ್ತಿ ಅಲ್ಲ ಅನ್ನೋ ಸುದ್ದಿ ಹಬ್ಬಿಸುವ ಕೆಲಸ ಡಿಸಿಎಂ ಮಾಡ್ತಿದ್ದಾರೆ. ದಸರಾ ಉದ್ಘಾಟನೆ ಮಾಡುವವರು ಸರ್ವ ಧರ್ಮ ಪ್ರೇಮಿ ಆಗಿರಬೇಕು. ಬಾನು‌ ಮುಸ್ತಾಕ್ ಅವರನ್ನು ಉದ್ಘಾಟನೆಯಿಂದ ಕೈ ಬಿಡಬೇಕು ಎಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಗುರುಶಾಂತ್ ಟೆಂಗಳಿ, ರಾಕೇಶ್ ಜಮಾದಾರ್, ಮಲಕಣ್ಣಗೌಡ ಹಿರೇಪೂಜಾರಿ, ಮಡಿವಾಳಪ್ಪ ಅಮರಾವತಿ, ರೋಹಿತ್, ಶ್ರೀಶೈಲ, ಮೋಹನ್ ಮತ್ತಿತರರಿದ್ದರು.

ಮಳೆಯಿಂದ ನೊಂದವರಿಗೆ ಪರಿಹಾರ ನೀಡಿ

ಕಲಬುರಗಿ: ಜಿಲ್ಲೆಯ ಜೇವರ್ಗಿ ತಾಲೂಕಿನಾದ್ಯಂತ ಕಳೆದ ಎರಡು ದಿನಗಳಲ್ಲಿ 149 ಮೀ.ಮೀ.ಮಳೆಯಾಗಿದ್ದರಿಂದ ಜೋಪಡಪಟ್ಟಿ ಹಾಗೂ ಬುಗ್ಗಿ ಪ್ರದೇಶದ ವಿದ್ಯಾನಗರದಲ್ಲಿ ಸಾಕಷ್ಟು ಹಾನಿಯಾಗಿದ್ದು, ಕೂಡಲೇ ಸೂಕ್ತ ಪರಿಹಾರ ನೀಡುವಂತೆ ಶಿವಸೇನೆಯ ರಾಜ್ಯಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ ಎರಡು ದಿನಗಳಿಂದ ಸುರಿದ ಮಳೆಯಿಂದಾಗಿ ೧೫೦ಕ್ಕೂ ಅಧಿಕ ಮನೆಗಳಿಗೆ ಹಾನಿಯಾಗಿದೆ. ಒಂದು ವರ್ಷದ ದವಸ ಧಾನ್ಯ ನೀರು ಪಾಲಾಗಿದ್ದು, ಕೂಡಲೇ ಜೋಪಡ ಪಟ್ಟಿಯ ಪ್ರತಿ ಮನೆಗೆ 20 ಸಾವಿರ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.

ಶಾಸಕರು ಬೆಳೆ ಸಮೀಕ್ಷೆ ನಡೆಸಿ ಪ್ರತಿ ಎಕರೆಗೆ 25 ಸಾವಿರ ರು. ಪರಿಹಾರ, ತೋಟಗಾರಿಕೆ ಬೆಳೆಗೆ 50 ಸಾವಿರ ರು. ಪರಿಹಾರ ನೀಡಬೇಕೆಂದು ಆಗ್ರಹಿಸಿದರು.

ಇಂದು ಪ್ರತಿಭಟನೆ:

ಜಿಲ್ಲೆಯಾದ್ಯಂತ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದನ್ನು ಖಂಡಿಸಿ ಸೆ.1ರಂದು ಬೀದರ್, ಬೆಂಗಳೂರು ರಾಜ್ಯ ಹೆದ್ದಾರಿಯ ರಸ್ತೆ ತಡೆದು ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.