ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಧರ್ಮಸ್ಥಳದಲ್ಲಿ ಅತ್ಯಾಚಾರ, ಕೊಲೆ ಮತ್ತು ಹೆಣಗಳನ್ನು ಹೂತಿರುವ ಆರೋಪ ಕೇಳಿ ಬಂದಿರುವ ಹಿನ್ನೆಲೆ ಧರ್ಮಾಧಿಕಾರಿ ರಾಜ್ಯಸಭಾ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿ ತನಿಖೆ ಸಹಕರಿಸಬೇಕು ಎಂದು ಎಪಿಸಿಆರ್ ರಾಜ್ಯ ಘಟಕದ ಅಧ್ಯಕ್ಷ ಎಂ.ಎಚ್.ಸುಧೀರ್ ಕುಮಾರ್ ಮುರೊಳ್ಳಿ ಹೇಳಿದರು.ಇಲ್ಲಿನ ಪತ್ರಿಕಾಭವನದಲ್ಲಿ ಭಾನುವಾರ ಅಸೋಸಿಯೇಷನ್ ಫಾರ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್ ಜಿಲ್ಲಾ ಸಮಿತಿಯಿಂದ ಆಯೋಜಿಸಿದ್ದ ಜಿಲ್ಲಾ ಸಮಿತಿಯ ಘೋಷಣಾ ಕಾರ್ಯಕ್ರಮದಲ್ಲಿ ಮಾತನಾಡಿ, ಧರ್ಮಸ್ಥಳದಲ್ಲಿ ಕೇಳಿ ಬಂದಿರುವ ಆರೋಪಗಳಿಗೆ ಕಾರಣ ಧರ್ಮಾಧಿಕಾರಿಯೇ ಎಂದು ನಾವು ಹೇಳುತ್ತಿಲ್ಲ. ಆದರೆ, ಈ ಪ್ರಕರಣ ಸಂಬಂಧ ಕೆಲವು ಮೃತ ದೇಹಗಳನ್ನು ಹೂತಿದ್ದೇನೆ ಎಂದು ವ್ಯಕ್ತಿಯೊಬ್ಬ ನ್ಯಾಯಾಧೀಶರ ಮುಂದೆ ಶರಣಾಗಿದ್ದಾನೆ. ಈ ಬಗ್ಗೆ ನಾವು ಧ್ವನಿ ಎತ್ತಿದ್ದೇವೆ ಎಂದು ತಿಳಿಸಿದರು.
ಜನಾಧಿಕಾರದ ವಿರುದ್ಧ ನಿಂತಿರುವ ಧರ್ಮಾಧಿಕಾರದ ವಿರುದ್ಧ ನಮ್ಮ ಧ್ವನಿ. ಕಾನೂನುಬದ್ಧ ಹೋರಾಟ, ಸಲಹೆ, ಅರಿವನ್ನು ಎಪಿಸಿಆರ್ ಮೂಡಿಸಲಿದೆ. ಸಾಮಾನ್ಯ ಜನರು ಪೊಲೀಸ್ ಠಾಣೆಗೆ ಹೋಗಲು ಭಯ ಪಡುತ್ತಾರೆ. ಹೆಣ್ಣುಮಕ್ಕಳು, ಚಿಕ್ಕಮಕ್ಕಳು, ಶೋಷಿತರು, ರೈತರು, ಅಲ್ಪಸಂಖ್ಯಾತರ ಪರ ಕೆಲಸ ಮಾಡಲಿದ್ದೇವೆ. ಸದ್ಯ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿರುವುದರಿಂದ ಧರ್ಮಾಧಿಕಾರಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಕ್ಲೀನ್ ಚಿಟ್ ಪಡೆದ ಬಳಿಕ ಪುನಃ ಅವರು ಅಧಿಕಾರ ಪಡೆದುಕೊಳ್ಳಲಿ ಎಂದು ಸಲಹೆ ನೀಡಿದರು.ವಕೀಲ ಕೆ.ಪಿ.ಶ್ರೀಪಾಲ್ ಮಾತನಾಡಿ, ಜನ ಸೇವೆಗೆ ಎಂದು ಹುಟ್ಟಿದ ಅನೇಕ ಸಂಘನೆಗಳು ನಂತರ ರಾಜಕೀಯಕ್ಕೆ ಹೋಗಿ, ಅಧಃಪತನಕ್ಕೆ ಹೋಗಿವೆ. ಆದರೆ, ಎಪಿಸಿಆರ್ ವಿಭಿನ್ನ. ಧರ್ಮಸ್ಥಳದ ವಿಷಯದಲ್ಲಿ ಇಡೀ ನಾಡು ಸಿಡಿದೆದ್ದರೆ ಮಾತ್ರ ಅನ್ಯಾಯಕ್ಕೊಳಗಾದ ಸಂತ್ರಸ್ತ ಕುಟುಂಬಗಳಿಗೆ ನ್ಯಾಯ ಒದಗಿಸಲು ಸಾಧ್ಯ ಎಂದರು.
ಎಪಿಸಿಆರ್ ರಾಜ್ಯ ಘಟಕ ಸಂಚಾಲಕಿ ಸರೋಜಾ ಪಿ.ಚಂಗೊಳ್ಳಿ ಮಾತನಾಡಿ, ಧ್ವನಿ ಇಲ್ಲದವರಿಗೆ ಧ್ವನಿ ನೀಡಲು ಎಪಿಸಿಆರ್ ಸಂಘಟನೆ ರಚಿಸಲಾಗಿದೆ. ಪ್ರಜೆಗಳೆ ಪ್ರಭುಗಳು ಎನ್ನುವುದು ಪುಸ್ತಕದಲ್ಲಿಯೆ ಉಳಿದಿದೆ. ಅನ್ಯಾಯದ ವಿರುದ್ಧ ಧ್ವನಿ ಎತ್ತಿದವರ ಮೇಲೆ ಪ್ರಕರಣ ದಾಖಲಾಗುತ್ತಿವೆ. ಹಣ ಬಲ, ತೋಳ್ಬಲ ಇಲ್ಲದವರಿಗೆ ಎಪಿಸಿಆರ್ ಶಕ್ತಿಯಾಗಿ ನಿಲ್ಲಲಿದೆ ಎಂದು ಹೇಳಿದರು.ಸಂಚಾಲಕ ಮುಸ್ತಫ ಬೇಗ್, ದಲಿತ ಸಂಘರ್ಷ ಸಮಿತಿಯ ಟಿ.ಎಚ್. ಹಾಲೇಶಪ್ಪ, ಜಮಾತೆ ಇಸ್ಲಾಮಿ ಹಿಂದ್‌ನ ವಹಾಬ್, ಷೆಹರಾಜ್ ಸಿದ್ಧಿಖಿ, ರಾಜಮ್ಮ, ಪ್ರೊ.ರಾಚಪ್ಪ ಇದ್ದರು.