ಸಾರಾಂಶ
ಹಾನಗಲ್ಲ: ಒಂದು ಧಾರ್ಮಿಕ ಸಂಸ್ಥೆಯ ಮೂಲಕ ವಿಶ್ವಕ್ಕೆ ಮಾದರಿಯಾಗುವ ಸ್ತ್ರೀಸಬಲೀಕರಣ, ಆರ್ಥಿಕ ಶಿಸ್ತಿಗೆ ಮುನ್ನುಡಿ ಬರೆದಿರುವ ಧರ್ಮಸ್ಥಳ ಡಾ. ವೀರೇಂದ್ರ ಹೆಗ್ಗಡೆ ಅವರು ಮಠ-ಮಾನ್ಯಗಳಿಗೆ ಮಾದರಿಯಾಗಿದ್ದಾರೆ ಎಂದು ಹುಬ್ಬಳ್ಳಿ ಮೂರುಸಾವಿರಮಠದ ಜಗದ್ಗುರು ಡಾ. ಗುರುಸಿದ್ಧರಾಜಯೋಗೀಂದ್ರ ಮಹಾಸ್ವಾಮಿಗಳು ಹೇಳಿದರು.
ತಾಲೂಕಿನ ಅರಳೇಶ್ವರದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಟ್ರಸ್ಟ್, ಕರಗುದರಿ ವಲಯ ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ ಬುಧವಾರ ಆಯೋಜಿಸಿದ್ದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಣ ಆರೋಗ್ಯ ಕ್ಷೇತ್ರದಲ್ಲಿ ಗಟ್ಟಿ ಕೆಲಸ ಮಾಡಿರುವ ಧರ್ಮಸ್ಥಳ ಸಂಸ್ಥೆ ಹೆಣ್ಣು ಮಕ್ಕಳಿಗೆ ಉತ್ತಮ ಸಂಘಟನೆಯ ಶಕ್ತಿ ನೀಡಿ, ಬ್ಯಾಂಕಿನ ಸಹಕಾರದೊಂದಿಗೆ ಅಭಿವೃದ್ಧಿಯ ಕಡೆಗೆ ಗಮನ ನೀಡಿರುವುದು ಅತ್ಯಂತ ಪ್ರಶಂಸನೀಯ. ಮನೆ ಮನೆಗೆ ಸಾಲ ಸೌಲಭ್ಯದ ಜತೆಗೆ ಸಕಾಲಿಕ ಮರುಪಾವತಿ ಹಾಗೂ ಆರ್ಥಿಕಾಭಿವೃದ್ಧಿಯ ಪರ್ವವನ್ನೇ ಸೃಷ್ಟಿಸಿದ್ದಾರೆ. ಬಡವರ ಬದುಕು ಹಸನಗೊಳಿಸುವ ಸಂಸ್ಥೆಯ ಚಟುವಟಿಕೆ ಧಾರ್ಮಿಕ ಸಂಸ್ಕಾರಕ್ಕೂ ಆದ್ಯತೆ ನೀಡಿರುವುದು ಗಮನಾರ್ಹ ಸಂಗತಿ. ಇದರ ಸದುಪಯೋಗದ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ಸಾಕ್ಷಿಯಾಗೋಣ ಎಂದರು.ಸಮ್ಮುಖವಹಿಸಿ ಮಾತನಾಡಿದ ಹೋತನಹಳ್ಳಿ ಸಿದ್ಧಾರೂಢ ಮಠದ ಶಂಕರಾನಂದ ಮಹಾಸ್ವಾಮಿಗಳು, ಒಗ್ಗಟ್ಟಿನಲ್ಲಿ ಶಕ್ತಿ ಇದೆ. ಆದರೆ ಒಗ್ಗಟ್ಟು ಮಾಡುವವರು ಅಗತ್ಯವಿದೆ. ಅಂತಹ ಕಾರ್ಯದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಗಣನೀಯ ಸಾಧನೆ ಮಾಡಿದೆ. ಮಹಿಳೆಯರಿಗೆ ಆರ್ಥಿಕ ಸಾಮಾಜಿಕ ಸ್ವಾತಂತ್ರ್ಯ ನೀಡಿ, ಧಾರ್ಮಿಕವಾಗಿಯೂ ಉತ್ತಮ ಸಂಸ್ಕಾರ ನೀಡುವಲ್ಲಿ ಈ ಸಂಸ್ಥೆಯ ಸೇವೆ ಸಾಕಾರವಾಗಿದೆ ಎಂದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಯೋಜನಾಧಿಕಾರಿ ರಾಘವೇಂದ್ರ ಪಟಗಾರ ಮಾತನಾಡಿ, ಸೇವೆಯೇ ನಮ್ಮ ಧ್ಯೇಯ. ಸಾರ್ವಜನಿಕ ವಲಯದಲ್ಲಿ ಸೌಹಾರ್ದಯುತ ಭಾವನೆಗಳನ್ನು ಗಟ್ಟಿಗೊಳಿಸಿ ಒಟ್ಟಾಗಿ ಬದುಕುವ ಸಂಕಲ್ಪಕ್ಕೆ ನಮ್ಮ ಸಂಸ್ಥೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದೆ. ಅದರಲ್ಲಿ ಯಶಸ್ಸು ಕೂಡ ಸಿಕ್ಕಿದೆ. ಬಡವರ ಬದುಕಿಗೆ ಕಷ್ಟಗಳು ಬಂದಾಗ ನೆರವಿಗೆ ನಿಲ್ಲುವ ಇಚ್ಛಾಶಕ್ತಿ ನಮ್ಮ ಕಾರ್ಯಕರ್ತರಲ್ಲಿದೆ. ವಿದ್ಯಾರ್ಥಿಗಳು, ದುರ್ಬಲರು, ಕೃಷಿಕರು, ಕಾರ್ಮಿಕರು ಸೇರಿದಂತೆ ಅಗತ್ಯವಿರುವ ಎಲ್ಲರ ಸೇವೆಯೇ ನಮ್ಮ ಸಂಸ್ಥೆಯ ಧ್ಯೇಯ. ಡಾ. ವೀರೇಂದ್ರ ಹಗ್ಗಡೆ ಅವರ ಮಾರ್ಗದರ್ಶನ, ಮಾತೋಶ್ರೀ ಡಾ. ಹೇಮಾವತಿ ಹೆಗ್ಗಡೆ ಅವರ ಕೃಪಾಶೀರ್ವಾದದೊಂದಿಗೆ ಸಮಾಜ ಸೇವೆಗೆ ಇದೊಂದು ದೊಡ್ಡ ಅವಕಾಶ ಎಂದರು.ಕೆ.ಟಿ. ಕಲಗೌಡರ ಅಧ್ಯಕ್ಷತೆವಹಿಸಿದ್ದರು. ಮಲ್ಲಯ್ಯ ಹಿರೇಮಠ, ಗ್ರಾಪಂ ಅಧ್ಯಕ್ಷ ರಾಮಣ್ಣ ಕುರಿಯವರ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಜಿಲ್ಲಾ ನಿರ್ದೇಶಕ ಶಿವರಾಯ ಪ್ರಭು, ಗ್ರಾಪಂ ಉಪಾಧ್ಯಕ್ಷೆ ಸರೋಜವ್ವ ತೋಟದ, ಕೊಟ್ರೇಶ್ ಅಂಗಡಿಶೆಟ್ಟರ, ಜಗದೀಶ ಹಿರೇಮಠ, ಹನುಮಗೌಡ್ರ ದೊಡ್ಡಗೌಡ್ರ, ಚನ್ನವ್ವ ಹಿರೂರ ಅತಿಥಿಗಳಾಗಿದ್ದರು.
ಮೇಲ್ವಿಚಾರಕಿ ನೇತ್ರಾವತಿ ಮಂಡಿಗನಾಳ ಸ್ವಾಗತಿಸಿದರು. ಮೇಲ್ವಿಚಾರಕ ರಾಕೇಶ ಸಾಣೇರ ಕಾರ್ಯಕ್ರಮ ನಿರೂಪಿಸಿದರು. ಮೇಲ್ವಿಚಾರಕಿ ಯಶೋದಾ ತೋಟದ ವಂದಿಸಿದರು.