ಸಾರಾಂಶ
ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವದ ಮೂರನೇ ದಿನವಾದ ಗುರುವಾರ ರಾತ್ರಿ ಲಲಿತೋದ್ಯಾನ ಉತ್ಸವ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಸಮ್ಮುಖದಲ್ಲಿ ವೈಭವದಿಂದ ನಡೆಯಿತು.
ದೇವಾಲಯದ ಒಳಾಂಗಣದಲ್ಲಿ ಮಂಜುನಾಥನಿಗೆ ಪೂಜೆ ಸಲ್ಲಿಸಿ, ಉತ್ಸವಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಕೂರಿಸಲಾಯಿತು. ನಂತರ ವಿವಿಧ ವೈದಿಕ ಕಾರ್ಯಗಳೊಂದಿಗೆ 16 ಸುತ್ತುಗಳ ಪ್ರದಕ್ಷಿಣೆ ಸೇವೆಯನ್ನು ಸರ್ವವಾದ್ಯಗಳೊಂದಿಗೆ ಸಲ್ಲಿಸಲಾಯಿತು.ದೇವಾಲಯದಿಂದ ಸ್ವರ್ಣಪಲ್ಲಕ್ಕಿಯಲ್ಲಿ ಹೊರಟ ಉತ್ಸವಮೂರ್ತಿ ರಥಬೀದಿಯಲ್ಲಿ ಸಾಗಿ ಲಲಿತೋದ್ಯಾನ ಪ್ರವೇಶಿಸಿತು. ಲಲಿತೋದ್ಯಾನ ಕಟ್ಟೆಯಲ್ಲಿ ಉತ್ಸವಮೂರ್ತಿಯನ್ನು ಕುಳ್ಳಿರಿಸಿ ಮಂಜುನಾಥನಿಗೆ ಅಷ್ಟವಿಧಾನ ಸೇವೆ ಸಲ್ಲಿಸಲಾಯಿತು. ಸೇವೆ ಸಲ್ಲಿಸಿದ ಬಳಿಕ ಉತ್ಸವಮೂರ್ತಿಯನ್ನು ದೇವಾಲಯದ ಮುಂಭಾಗದಲ್ಲಿ ಬೆಳ್ಳಿರಥದಲ್ಲಿ ವಿರಾಜಮಾನಗೊಳಿಸಿ ಒಂದು ಸುತ್ತು ಪ್ರದಕ್ಷಿಣೆ ಬರಲಾಯಿತು.
ಸ್ವಾಮಿಯನ್ನು ದೇವಾಲಯದೊಳಗೆ ಕೊಂಡೊಯ್ಯುವಲ್ಲಿಗೆ ಲಲಿತೋದ್ಯಾನ ಉತ್ಸವ ಸಂಪನ್ನವಾಯಿತು. ದೇವಾಲಯದ ಆನೆಗಳಾದ ಲಕ್ಷ್ಮೀ, ಶಿವಾನಿ ಮತ್ತು ಬಸವ ಭೀಷ್ಮ ಮೆರವಣಿಗೆ ಮುಂಭಾಗದಲ್ಲಿ ಹೆಜ್ಜೆ ಹಾಕಿ ಉತ್ಸವದ ಕಳೆ ಹೆಚ್ಚಿಸಿದವು. ನೆರೆದಿದ್ದ ಸಾವಿರಾರು ಭಕ್ತರು ಉತ್ಸವವನ್ನು ಕಣ್ತುಂಬಿಕೊಂಡರು. ----ಧರ್ಮಸ್ಥಳ ಲಕ್ಷದೀಪೋತ್ಸವ: ಭಕ್ತರಿಂದ ಅಲಂಕಾರ ಸೇವೆಬೆಳ್ತಂಗಡಿ: ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳದಲ್ಲಿ ನ.30ರಂದು ಶನಿವಾರ ಲಕ್ಷ ದೀಪೋತ್ಸವ ನಡೆಯಲಿದ್ದು, ಲಕ್ಷಕ್ಕೂ ಹೆಚ್ಚು ಮಂದಿ ಭಕ್ತರು ಬರುವ ನಿರೀಕ್ಷೆ ಇದೆ.ಭಕ್ತರಿಂದ ವೈವಿಧ್ಯಮಯ ಸೇವೆ: ರೈತರು ಶ್ರದ್ಧಾ-ಭಕ್ತಿಯಿಂದ ಹೂವು, ಹಣ್ಣುಹಂಪಲು, ಅಕ್ಕಿ- ತರಕಾರಿ, ಬೇಳೆಗಳು ಹಾಗೂ ದವಸಧಾನ್ಯಗಳನ್ನು ಶ್ರೀ ಕ್ಷೇತ್ರಕ್ಕೆ ಕಾಣಿಕೆಯಾಗಿ ಅರ್ಪಿಸಿದ್ದಾರೆ.
ಅಲಂಕಾರ ಸೇವೆ: ಬೆಂಗಳೂರು ಮಾರುಕಟ್ಟೆ ಹೂವಿನ ವ್ಯಾಪಾರಸ್ಥರ ಸಂಘದ ಶಿವಕುಮಾರ್ ನೇತೃತ್ವದಲ್ಲಿ ವಿವಿಧ ಹೂವುಗಳು, ಹಣ್ಣುಗಳು, ತರಕಾರಿಗಳನ್ನು ಬಳಸಿ ದೇವಸ್ಥಾನ, ಬೀಡು (ಹೆಗ್ಗಡೆಯವರ ನಿವಾಸ) ಅನ್ನಪೂರ್ಣ, ಕಾರ್ಯಾಲಯಗಳನ್ನು ಆಕರ್ಷಕವಾಗಿ ಅಲಂಕರಿಸಿದ್ದಾರೆ. ಇದಕ್ಕಾಗಿ ತಲಾ ೩೦೦ ಕೆ.ಜಿ.ಯಷ್ಟು ಅನಾನಸು, ಸೇಬು, ದ್ರಾಕ್ಷಿ, ಕಬ್ಬು, ತೆಂಗಿನಕಾಯಿ, ಕಲ್ಲಂಗಡಿಳನ್ನು ಬಳಸಲಾಗಿದೆ. ಬಿ.ಒ.ಪಿ. ಆರ್ಕಿಡ್, ಗುಲಾಬಿ, ಗ್ಲಾಡಿಯೊ, ಕ್ಯೂಬ್‌ರೋಸ್ ಮೊದಲಾದ ಹೂವುಗಳನ್ನು ಬಳಸಲಾಗಿದೆ ಎಂದು ಶಿವಕುಮಾರ್ ತಿಳಿಸಿದ್ದಾರೆ.ಸುಮಾರು ಮುನ್ನೂರು ಜನರು ಅಲಂಕಾರ ಸೇವೆಯಲ್ಲಿ ನಿರತರಾಗಿದ್ದು, ಲಕ್ಷದೀಪೋತ್ಸವಕ್ಕೆ ಇಂದು ಉಚಿತ ಸೇವೆ ಎಂದ ಶಿವಕುಮಾರ್, ಅಂದಾಜು 10 ಲಕ್ಷ ರು. ವೆಚ್ಚವಾಗಬಹುದು ಎಂದು ತಿಳಿಸಿದ್ದಾರೆ.