ಸಾರಾಂಶ
ಕನ್ನಡಪ್ರಭ ವಾರ್ತೆ ಕಿಕ್ಕೇರಿ
ಧರ್ಮಸ್ಥಳ ಸಂಸ್ಥೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಹೆಸರಿನಲ್ಲಿ ದತ್ತಿ ಸೇವಾ ಚಾರಿಟಬಲ್ ಸಂಸ್ಥೆಯಾಗಿ ಜನಪರವಾಗಿ ಕೆಲಸ ಮಾಡುತ್ತಿದೆ ಎಂದು ಯೋಜನೆ ಜಿಲ್ಲಾ ನಿರ್ದೇಶಕ ಕೇಶವ ದೇವಾಂಗ ಹೇಳಿದರು.ಪಟ್ಟಣದ ರಂಗಮ್ಮ ಛೇರ್‍ಮನ್ ತಮ್ಮಯ್ಯ ಸಮುದಾಯ ಭವನದಲ್ಲಿ ಮಂಗಳವಾರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಆಯೋಜಿಸಿದ್ದ ತಾಲೂಕು ಮಟ್ಟದ ಒಕ್ಕೂಟ ಪದಾಧಿಕಾರಿಗಳ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ನಮ್ಮದು ಜನರಿಗೆ ಸೇವೆ ಮಾಡಲು ಬಂದಿರುವ ಸಂಸ್ಥೆ. ಮೈಕ್ರೋ ಫೈನಾನ್ಸ್ ಸಂಸ್ಥೆಯಂತೆ ಹಣಕ್ಕಾಗಿ ಕೆಲಸ ಮಾಡುತ್ತಿಲ್ಲ ಎಂಬುದನ್ನು ತಿಳಿ ಹೇಳುವ ಕೆಲಸ ಒಕ್ಕೂಟದ ಪದಾಧಿಕಾರಿಗಳು ಮಾಡಬೇಕಿದೆ ಎಂದರು.1982ರಲ್ಲಿ ಗೊಮೇಟೇಶ್ವರ ಮೂರ್ತಿ ಸ್ಥಾಪನೆ ನೆನಪಿನಲ್ಲಿ ರುಡ್‌ಷೆಡ್, ಗ್ರಾಮೀಣಾಭಿವೃದ್ಧಿ ಯೋಜನೆ ಸ್ಥಾಪನೆಯಾಗಿ, ಪ್ರಸ್ತುತ ರಾಜ್ಯಾದ್ಯಂತ 65000 ಲಕ್ಷ ಸಂಘಗಳು, 60 ಲಕ್ಷ ಸದಸ್ಯರಿದ್ದಾರೆ. ಕೆ.ಆರ್.ಪೇಟೆಯಲ್ಲಿ 5500 ಸಂಘವಿದ್ದು, 4850 ಸಾವಿರ ಸದಸ್ಯರಿದ್ದು, ಕಿಕ್ಕೇರಿಯಲ್ಲಿ 2700 ಸಂಘ, 2700 ಸದಸ್ಯರಿದ್ದು ಸೇವಾ ಮನೋಭಾವನೆ ಸಂಸ್ಥೆ ಮೂಲ ಬಂಡವಾಳವಾಗಿದೆ ಎಂದರು.
ಸಂಸ್ಥೆಯಿಂದ ಸಂಪೂರ್ಣ ಆರೋಗ್ಯ ಪ್ರಗತಿ ರಕ್ಷಾ ಕವಚ, ಶುದ್ಧಗಂಗಾ ಘಟಕ, ನಮ್ಮೂರ ನಮ್ಮಕೆರೆ ಅಡಿಯಲ್ಲಿ ಕೆರೆ ಹೂಳುತ್ತೆವು ಕಾರ್ಯಕ್ರಮ, ವಿದ್ಯಾರ್ಥಿ ಸುಜ್ಞಾನ ವೇತನಾ, ನಿರ್ಗತಿಕರಿಗೆ ಮಾಶಾಸನ, ವಾತ್ಸಲ್ಯ ಮನೆ ನಿರ್ಮಾಣ, ಅಂಗವಿಕಲರಿಗೆ ಪರಿಕರ ವಿತರಣೆ, ಆರೋಗ್ಯ ವಿಮೆಯ ಸಂಪೂರ್ಣ ಸುರಕ್ಷಾ, ಆರೋಗ್ಯ ರಕ್ಷ ಯೋಜನೆ, ಸಮುದಾಯ ಮೂಲ ಸೌಕರ್ಯಕ್ಕೆ ಸಮುದಾಯಭವನ ನಿರ್ಮಾಣ, ಡೇರಿಕಟ್ಟಡ ನಿರ್ಮಾಣ, ಹಿಂದೂ ರುದ್ರಭೂಮಿ, ಶಾಲಾ ಕಟ್ಟಡಕ್ಕೆಅನುದಾನ ಮತ್ತಿತರ ಸಮಾಜಕ್ಕೆ ಕೈಂಕರ್ಯ ಮಾಡಲಾಗುತ್ತಿದೆ ಎಂದರು.ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಲುಜಾಗೃತಿ ಮೂಡಿಸಿ ಮಹಿಳೆಯರು ಸ್ವಾವಲಂಬನೆಯಿಂದ ಸಬಲೀಕರಣ ಹೊಂದಲು ಯೋಜನೆಗಳನ್ನು ಸದ್ಭಳಕೆ ಮಾಡಿಕೊಳ್ಳಿ ಎಂದರು.
ಹಳದಂಗಡಿ ಕರ್ನಾಟಕ ಬ್ಯಾಂಕ್ ವ್ಯವಸ್ಥಾಪಕಿ ಶ್ರೀಶಾ ಮಾತನಾಡಿ, ಸಂಸ್ಥೆ ತಮ್ಮ ಬ್ಯಾಂಕಿನೊಂದಿಗೆ ವ್ಯವಹಾರ ಇಟ್ಟುಕೊಂಡು, ಶಿಸ್ತು ಬದ್ಧವಾಗಿ ವ್ಯವಹರಿಸುತ್ತ ಬ್ಯಾಂಕ್, ಜನರ ನಡುವೆ ಸಂಪರ್ಕ ಸೇತುವೆಯಾಗಿದೆ. ಶಿಕ್ಷಣ, ಆರೋಗ್ಯ, ವಸತಿ, ಆಧ್ಯಾತ್ಮಿಕವಾಗಿ ಜಾಗೃತಿ ಮೂಡಿಸುತ್ತ ಒಂದು ವ್ಯವಸ್ಥೆಯಾಗಿದೆ ಎಂದರು.ವಿವಿಧ ಗ್ರಾಮಗಳ 800ಕ್ಕೂ ಹೆಚ್ಚು ಸೇವಾ ಪ್ರತಿನಿಧಿಗಳು, ತಾಲೂಕು ಯೋಜನಾಧಿಕಾರಿ ಎಂ.ವೀರೇಶಪ್ಪ, ಜಿಲ್ಲಾ ಜನಜಾಗೃತಿ ವೇದಿಕೆ ನಿಕಟಪೂರ್ವ ಅಧ್ಯಕ್ಷಕೆ.ಎಸ್. ರಾಜೇಶ್, ಸದಸ್ಯರಾದ ಮೊಟ್ಟೆಮಂಜು, ಸುನೀತಾ, ಕುಮಾರ್, ಶಿವರಾಂ, ನಳಿನಾ, ಸಂಸ್ಥೆ ಮೇಲ್ವಿಚಾರಕರು, ಗ್ರಾಹಕ ಸೇವಾದಾರರು, ಒಕ್ಕೂಟದ ಪದಾಧಿಕಾರಿಗಳು, ವಿಲೇಜ್ ಲೆವೆಲ್‌ಎಕ್ಸಿಕ್ಯೂಟಿವ್, ಸೇವಾ ಪ್ರತಿನಿಧಿಗಳು ಭಾಗವಹಿಸಿದ್ದರು.