ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳ್ತಂಗಡಿ
ಎಂಟು ಶತಮಾನಗಳ ಭವ್ಯ ಇತಿಹಾಸ ಮತ್ತು ಪರಂಪರೆ ಹೊಂದಿರುವ ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳದಲ್ಲಿ ಭಕ್ತಾದಿಗಳಿಗೆ ದೇವರ ದರ್ಶನಕ್ಕಾಗಿ ಆರಾಮದಾಯಕ ಸರತಿಸಾಲಿನ ನೂತನ ಸಂಕೀರ್ಣ ‘ಶ್ರೀ ಸಾನ್ನಿಧ್ಯ’ ಲೋಕಾರ್ಪಣೆಗೆ ಸಜ್ಜಾಗಿದೆ. ಮಂಗಳವಾರ ಅಪರಾಹ್ನ 2 ಗಂಟೆಗೆ ಉಪರಾಷ್ಟ್ರಪತಿ ಜಗದೀಪ್ ಧನ್‌ಕರ್ ಉದ್ಘಾಟಿಸುವರು.ಅಮೃತವರ್ಷಿಣಿ ಸಭಾಭವನದಲ್ಲಿ ನಡೆಯುವ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ವಹಿಸುವರು. ಡಾ. ಸುದೇಶ್ ಧನ್‌ಕರ್ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್, ಹೇಮಾವತಿ ವೀ. ಹೆಗ್ಗಡೆ, ಸಂಸದ ಕ್ಯಾ. ಬ್ರಿಜೇಶ್ ಚೌಟ ಮತ್ತು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಇದೇ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಸಕ್ತ ವರ್ಷದ ಜ್ಞಾನದೀಪ ಕಾರ್ಯಕ್ರಮಕ್ಕೂ ಚಾಲನೆ ನೀಡಲಾಗುವುದು ಎಂದು ಕಾರ್ಯನಿರ್ವಾಹಕ ನಿರ್ದೇಶಕ ಅನಿಲ್‌ಕುಮಾರ್ ಎಸ್.ಎಸ್. ತಿಳಿಸಿದ್ದಾರೆ.ವಿಶೇಷ ಸೌಲಭ್ಯಗಳು: ೨,೭೫,೧೭೭ ಚದರ ಅಡಿ ವಿಸ್ತೀರ್ಣದಲ್ಲಿ ನಿರ್ಮಾಣಗೊಂಡಿರುವ ‘ಶ್ರೀ ಸಾನ್ನಿಧ್ಯ’ ಸರತಿಸಾಲಿನ ಸಂಕೀರ್ಣ ಎರಡು ಅಂತಸ್ತುಗಳನ್ನು ಹೊಂದಿದ್ದು ಆಧುನಿಕ ತಂತ್ರಜ್ಞಾನದ ಬಳಕೆಯೊಂದಿಗೆ ಭಕ್ತಾದಿಗಳಿಗೆ ಎಲ್ಲಾ ಸೌಲಭ್ಯಗಳನ್ನು ಒದಗಿಸಲಾಗಿದೆ.
10 ಸಾವಿರ ಜನರಿಗೆ ಆರಾಮದಾಯಕ ಆಸನ ವ್ಯವಸ್ಥೆ, ವೃದ್ಧರು, ಅಂಗವಿಕಲರು ಮತ್ತು ಮಕ್ಕಳ ಆರೈಕೆ ಕೇಂದ್ರ, ವೈದ್ಯಕೀಯ ನೆರವು, ಶೌಚಾಲಯ, ಉಪಾಹಾರ ಸೌಲಭ್ಯ, ದೂರದರ್ಶನ ಸಹಿತ ಹವಾನಿಯಂತ್ರಿತ ಸೌಲಭ್ಯ ಕಲ್ಪಿಸಲಾಗಿದೆ. ದರ್ಶನದ ಸಮಯದಲ್ಲಿ ವಿವಿಧ ಸೇವೆಗಳ ಮಾಹಿತಿ ಪಡೆಯಲು ಡಿಜಿಟಲ್ ತಂತ್ರಜ್ಞಾನ ಅಳವಡಿಸಲಾಗಿದೆ.ಕಟ್ಟಡಕ್ಕೆ ಸಂಪೂರ್ಣ ಪರಿಸರ ಸ್ನೇಹಿ ವಸ್ತುಗಳನ್ನು ಬಳಸಿದ್ದು, ಮರುಬಳಕೆಯ ಸೋಲಾರ್ ಇಂಧನ ಅಳವಡಿಸಲಾಗಿದೆ. ಪ್ರತಿ ಭವನದಲ್ಲಿ ೮೦೦ ಮಂದಿ ತಂಗಲು ಅವಕಾಶವಿರುವ ೧೬ ವಿಶಾಲ ಭವನಗಳು ಇಲ್ಲಿವೆ. ಅಲ್ಲಲ್ಲಿ ಸೂಚನಾ ಫಲಕಗಳು ಹಾಗೂ ಸಿ.ಸಿ. ಕ್ಯಾಮರಾ ಅಳವಡಿಸಲಾಗಿದೆ. ಸಂಕೀರ್ಣದ ಪ್ರವೇಶದ್ವಾರದ ಎದುರು ಧರ್ಮಸ್ಥಳದ ಭವ್ಯ ಇತಿಹಾಸ ಮತ್ತು ಪರಂಪರೆ ಬಿಂಬಿಸುವ ಆಕರ್ಷಕ ಕಲಾಕೃತಿಗಳು ಕಣ್ಮನ ಸೆಳೆಯುತ್ತವೆ.
ದೇವರ ದರ್ಶನಕ್ಕೆ ಪ್ರಸ್ತುತ ಇರುವ ಸರತಿಸಾಲಿನ ವ್ಯವಸ್ಥೆಯನ್ನೂ ಕೆಲವು ಸುಧಾರಣೆಗಳೊಂದಿಗೆ ಮುಂದುವರಿಸಲಾಗುವುದು ಎಂದು ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ತಿಳಿಸಿದ್ದಾರೆ.