ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ಮಹಿಳೆಯರು ಸಮಾಜದಲ್ಲಿ ಉನ್ನತ ಜೀವನ ನಡೆಸಲು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಸಹಕಾರಿಯಾಗಿದೆ. ಮಹಿಳೆಯರು ಯಾವುದೇ ಕಷ್ಟಕ್ಕೆ ಕುಗ್ಗದೇ ಮುನ್ನಡೆಯಬೇಕು ಎಂದು ರಾಜ್ಯ ರೈತ ಸಂಘದ ಮಹಿಳಾ ಪ್ರಧಾನ ಕಾರ್ಯದರ್ಶಿ ರತ್ನಾ ಬ.ಕರವೀರನವರ ಗೋಧಿ ತಿಳಿಸಿದರು.ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ (ರಿ) ಖಾಸಭಾಗ ಬೆಳಗಾವಿ ಜಿಲ್ಲೆ 1 ಮತ್ತು ಜ್ಞಾನವಿಕಾಸ ಕೇಂದ್ರಗಳು ಹಾಗೂ ಪ್ರಗತಿಬಂಧು ಸ್ವ ಸಹಾಯ ಸಂಘಗಳ ಆಶ್ರಯದಲ್ಲಿ ಬನಶಂಕರಿ ದೇವಸ್ಥಾನದ ಸಭಾಭವನದಲ್ಲಿ ನಡೆದ ತಾಲೂಕು ಮಟ್ಟದ ಮಹಿಳಾ ಜ್ಞಾನವಿಕಾಸ ಕೇಂದ್ರಗಳ ಮಹಿಳಾ ವಿಚಾರ ಗೋಷ್ಠಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಧರ್ಮಸ್ಥಳ ಯೋಜನೆ ಬಗ್ಗೆ ಕೆಲವರು ಅಪಪ್ರಚಾರ ಮಾಡುವುದು ಮತ್ತು ಸದಸ್ಯರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ನಾವು ಒಗ್ಗಟ್ಟಿನಿಂದ ಇದ್ದು ಅಂತಹ ಸಂಘಟನೆಗೆ ತಕ್ಕ ಉತ್ತರ ಕೊಡುವ ಕೆಲಸ ಮಾಡಬೇಕಾಗಿದೆ. ನಿಮ್ಮೆಲ್ಲರ ಜೊತೆ ನಾನಿದ್ದೇನೆ. ಹೆಣ್ಣು ಸಮಾಜದ ಕುಟುಂಬದ ಕಣ್ಣು. ಸಮಾಜದ ಶಕ್ತಿಯಾಗಿ ಬೆಳೆಯಲು ಯೋಜನೆಯ ಪಾತ್ರ ಅಪಾರವಾಗಿದೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಧಾರವಾಡ ಪ್ರಾದೇಶಿಕ ಕಚೇರಿಯ ಪ್ರಾದೇಶಿಕ ನಿರ್ದೇಶಕರಾದ ದಯಾಶೀಲ ಮಾತನಾಡಿ, ಗ್ರಾಮಾಭಿವೃದ್ಧಿ ಯೋಜನೆ ಕಳೆದ 4 ದಶಕಗಳಿಂದ ಕರ್ನಾಟಕದ ಗ್ರಾಮೀಣ ಜನರ ಅಭಿವೃದ್ಧಿಗೆ ಶ್ರಮಿಸಿದೆ. ಮನೆಬಾಗಿಲಿನಲ್ಲಿ ಬ್ಯಾಂಕ್ ವ್ಯವಹಾರ ಒದಗಿಸುವ ಚಾರಿಟೇಬಲ್ ಸಂಸ್ಥೆಯಾಗಿ ಕೆಲಸ ಮಾಡುತ್ತಿದೆ. ಕೆರೆಯ ನೀರನ್ನು ಕೆರೆಗೆ ಚೆಲ್ಲು ಎಂಬ ಮಾತಿನಂತೆ ಪೂಜ್ಯರು ಮಾಶಾಸನ, ದೇವಸ್ಥಾನ ಜೀರ್ಣೋದ್ಧಾರ, ಶಿಷ್ಯವೇತನ, ನಮ್ಮೂರು ನಮ್ಮ ಕೆರೆ ಕಾರ್ಯಕ್ರಮದ ಮೂಲಕ ಸಮಾಜದಿಂದ ಬಂದ ಹಣವನ್ನು ಸಮಾಜಕ್ಕೆ ವಿನಿಯೋಗಿಸುತ್ತಿದ್ದಾರೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯನ್ನು ಇಟ್ಟಿಗೆ ಮಣ್ಣಿನಿಂದ ಕಟ್ಟದೇ ಧರ್ಮದಿಂದ ಕಟ್ಟಲಾಗಿದೆ. ಧರ್ಮದ ಯೋಜನೆಯನ್ನು ಯಾವುದೇ ಅಧರ್ಮದ ಚಟುವಟಿಕೆಗಳು ನಾಶಮಾಡಲು ಸಾಧ್ಯವಿಲ್ಲ ಎಂದು ಮಾಹಿತಿ ನೀಡಿದರು.ಕುಟುಂಬದಲ್ಲಿ ಮಹಿಳೆಯರ ಪಾತ್ರ ಹಾಗೂ ಸಂಸ್ಕೃತಿ ಸಂಸ್ಕಾರ ವಿಷಯ ಕುರಿತು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ, ಎಂಎನ್‌ಆರ್‌ಎಂ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ನಿರ್ಮಲ ಬಟ್ಟಲ ಮಾತನಾಡಿ, ಮಹಿಳೆ ಕುಟುಂಬದಲ್ಲಿ ನೂರಾರು ಪಾತ್ರ ನಿರ್ವಹಿಸುತ್ತಾಳೆ. ಸಮಾಜದಲ್ಲಿ ಪ್ರಮುಖಳಾಗಿದ್ದರು ಕುಟುಂಬದಲ್ಲಿ ಎರಡನೇಯವಳಾಗಿದ್ದುಕೊಂಡು, ಮಕ್ಕಳಿಗೆ ಉತ್ತಮ ಸಂಸ್ಕಾರ, ಸಂಸ್ಕೃತಿ ನೀಡುತ್ತಾಳೆ. ಸ್ವಸ್ತ ಸುಂದರ ಆರೋಗ್ಯವಂತ ಸಮಾಜ ನಿರ್ಮಾಣದಲ್ಲಿ ಮಹಿಳೆಯರ ಪಾತ್ರ ಪ್ರಮುಖವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಬೆಳಗಾವಿ ಜಿಲ್ಲೆ ನಿರ್ದೇಶಕ ಸತೀಶ ನಾಯ್ಕ, ಧಾರವಾಡ ಪ್ರಾದೇಶಿಕ ಕಚೇರಿಯ ಜ್ಞಾನವಿಕಾಸ ಯೋಜನಾಧಿಕಾರಿ ಮಲ್ಲಿಕಾ ಇದ್ದರು. ಅಧ್ಯಕ್ಷತೆ ಅಖಿಲ ಕರ್ನಾಟಕ ಜಿಲ್ಲಾ ಜನ ಜಾಗೃತಿ ವೇದಿಕೆ ಅಧ್ಯಕ್ಷ ಬಸವರಾಜ ಸೊಪ್ಪಿಮಠ ವಹಿಸಿದ್ದರು. ಯೋಜನಾಧಿಕಾರಿ ಸುಭಾಷ ಪಿ.ಸಿ ಸ್ವಾಗತಿಸಿ, ಜ್ಞಾನವಿಕಾಸ ಸಮನ್ವಯಾಧಿಕಾರಿ ಮೀನಾರಾಣಿ ವಂದಿಸಿ, ಕೃಷಿ ಮೇಲ್ವಿಚಾರಕ ಮಂಜುನಾಥ ಗೌಡ ನಿರ್ವಹಣೆ ಮಾಡಿದರು. ಮೇಲ್ವಿಚಾರಕ ಉಮೇಶ, ಸೋಮಲಿಂಗ, ಸೇವಾಪ್ರತಿನಿಧಿ ಸುಲೇಖಾ, ರೇಖಾ, ವಿನೋದ ಮತ್ತು ಜ್ಞಾನವಿಕಾಸ ಕೇಂದ್ರದ ಸದಸ್ಯರು ಭಾಗವಹಿಸಿದ್ದರು. ಜ್ಞಾನವಿಕಾಸ ಕೇಂದ್ರದ ಸದಸ್ಯರಿಂದ ವಿವಿಧ ಮನರಂಜನ ಕಾರ್ಯಕ್ರಮಗಳು ಆಯೋಜನೆಗೊಂಡಿದ್ದವು.