ಪಂಚಾಯಿತಿಯ ಪಿಡಿಒ ಸರಿಯಾದ ರೀತಿಯಲ್ಲಿ ಸಮೀಕ್ಷೆ ನಡೆಸಿ ವರದಿ ಸಲ್ಲಿಸದ ಕಾರಣ ವಿಮೆ ಹಣ ಬಿಡುಗಡೆ ಆಗಿಲ್ಲ ಎಂಬುದು ಸೋನಗಾನಹಳ್ಳಿ ರೈತರ ಆರೋಪ. ನ್ಯಾಯ ಸಿಗದಿದ್ದರೆ ಆತ್ನಹತ್ಯೆ ಮಾಡಿಕೊಳ್ಳುವ ಬೆದರಿಕೆ
ಕನ್ನಡಪ್ರಭ ವಾರ್ತೆ ಗೌರಿಬಿದನೂರು
ತಾಲೂಕಿನ ಸೊನಗಾನಹಳ್ಳಿಗ್ರಾಮದಲ್ಲಿ ಸುಮಾರು 1,280 ಪಹಣಿಗಳಿದ್ದು ಅದರ ಪೈಕಿ 600ಕ್ಕೂ ಹೆಚ್ಚು ರೈತರು ಸುಮಾರು 3 ಕೋಟಿ ರು.ಗಳನ್ನು ಬೆಳೆ ವಿಮೆಗಾಗಿ ಪಾವತಿಸಿದ್ದಾರೆ. ಆದರೆ ಗ್ರಾಮಕ್ಕೆ ಬೆಳೆನಷ್ಟ ಪರಿಹಾರ ವಿಮೆ ಮಂಜೂರಾಗಿಲ್ಲ. ಇದಕ್ಕೆ ಕಾರಣ ನಮ್ಮ ಪಂಚಾಯಿತಿಯ ಪಿಡಿಒ ಸರಿಯಾದ ರೀತಿಯಲ್ಲಿ ಸಮೀಕ್ಷೆ ನಡೆಸದಿರುವುದೇ ಕಾರಣ ಎಂದು ಆರೋಪಿಸಿ ರೈತರು ಗ್ರಾಪಂ ಕಚೇರಿಗೆ ಬೀಗ ಜಡಿದು ಧರಣಿ ನಡೆಸಿದರು.ಪಕ್ಕದ ಹೊಸೂರು ಗ್ರಾಪಂ ವ್ಯಾಪ್ತಿಯಲ್ಲಿ 1 ಎಕರೆಗೆ ಜಮೀನಿಗೆ 16,700 ರು.ಗಳನ್ನು ಮಂಜೂರು ಮಾಡಿದ್ದಾರೆ. ಪಕ್ಕದಲ್ಲಿರುವಂತಹ ನಮ್ಮ ಪಂಚಾಯಿತಿಗೆ ಶೂನ್ಯ. ಈ ಅನ್ಯಾಯ ಸರಿಪಡಿಸುವವರೆಗೆ ನಮ್ಮ ಹೋರಾಟ ನಿಲ್ಲಿಸುವುದಿಲ್ಲ ಎಂದು ಗ್ರಾಮಸ್ಥರು ತಿಳಿಸಿದರು.
ನ್ಯಾಯ ಸಿಗದಿದ್ದರೆ ಆತ್ಮಹತ್ಯೆಒಂದು ವೇಳೆ ನಮಗೆ ನ್ಯಾಯ ಸಿಗದಿದ್ದಲ್ಲಿ ಕಾರ್ಯಾಲಯದ ಮುಂದೆಯೆ ವಿಷವನ್ನು ಕುಡಿದು ಅಥವಾ ನೇಣಿಗೆ ಶರಣಾಗಿ ನಮ್ಮ ಪ್ರಾಣತ್ಯಾಗ ಮಾಡುತ್ತೇವೆಂದು ಗ್ರಾಮದ ರೈತರ ಕೈಯಲ್ಲಿ ಕೀಟನಾಶಕ ಡಬ್ಬಗಳನ್ನು ಕೈಯಲ್ಲಿ ಹಿಡಿದು ಧರಣಿ ನಡೆಸಿದರು. ಈಗಿನ ಬರದ ಪರಿಸ್ಥಿತಿಯಲ್ಲಿ ರೈತರು ಬೆಳೆ ಕಳೆದುಕೊಂಡು ಕಂಗಾಲಾಗಿದ್ದಾರೆ. ಅಧಿಕಾರಿಗಳು ಯಾವ ಸರ್ವೆ ನಂ. ಅಡಿಯಲ್ಲಿ ಸಮೀಕ್ಷೆಯ ನಡೆಸಿದರು ಎಂಬ ಪೂರ್ಣ ಸಾಕ್ಷಿ ಸಮೇತ ಮಾಹಿತಿಯನ್ನು ನೀಡುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು. ತಾಪಂ ಸಹಾಯಕ ನಿರ್ದೇಶಕ ಕರಿಯಪ್ಪ ಸ್ಥಳಕ್ಕೆ ಆಗಮಿಸಿ, ಇನ್ನು ಕೇವಲ 2 ರಿಂದ 3 ದಿನಗಳಲ್ಲಿ ಸಮೀಕ್ಷೆಯ ಎಲ್ಲಾ ದಾಖಲೆಗಳು ಲಭ್ಯವಾಗಲಿದ್ದು, ಅಧಿಕಾರಿಗಳು ತಪ್ಪು ಮಾಡಿದ್ದರೆ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು. ಜೊತೆಗೆ ಮೇಲಾಧಿಕಾರಿಗಳ ಜೊತೆಗೆ ಚರ್ಚಿಸಿ ನಡೆದಿರುವ ತಪ್ಪನ್ನು ಸರಿಪಡಿಸಲು ಏನಾದರೂ ಅವಕಾಶ ಇದೆಯೇ ಎಂಬುದರ ಬಗ್ಗೆ ಸಂಪೂರ್ಣ ವರದಿಯನ್ನು ಗ್ರಾಮಸ್ಥರಿಗೆ ನೀಡುತ್ತೇವೆ ಎಂದು ಭರವಸೆ ನೀಡಿದರು.
ಅಧಿಕಾರಿಯ ಸಂಧಾನ ವಿಫಲಇದ್ಕಕೆ ಒಪ್ಪದ ರೈತರು ಪ್ರತಿಭಟನೆ ಮುಂದುವರೆಸಿದಾಗ ಪೊಲೀಸರು ಪ್ರತಿಭಟನಾಕಾರರ ಮನವೊಲಿಸಲು ಪ್ರಯತ್ನ ನಡೆಸಿದರು. ಚುನಾವಣೆ ನೀತಿ ಸಂಹಿತೆ ಜಾರಿ ಇರುವುದರಿಂದ ಸರ್ಕಾರಿ ಕಚೇರಿಗೆ ಬೀಗ ಜಡಿದು ಪ್ರತಿಭಟಸುವುದು ಸರಿಯಲ್ಲ ಎಂದು ಪೊಲೀಸರು ತಿಳಿಸಿದರು.
ಧರಣಿಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ತಾರಾನಾಥ್ , ರಾಘವೇಂದ್ರ ಗ್ರಾ ಪಂ. ಸದಸ್ಯ, ಡೈರಿ ಶಿವಣ್ಣ, ಮಾಳೂರಪ್ಪ ಮತ್ತು 16 ಹಳ್ಳಿಗಳ ರೈತರು ಭಾಗವಹಿಸಿದ್ದರು.