ಜೆಎಸ್‌ಡಬ್ಲು ಕಾರ್ಖಾನೆಯಲ್ಲಿ ಮೃತಪಟ್ಟಿದ್ದ ಕಾರ್ಮಿಕರ ಪಾಲಕರಿಂದ ಧರಣಿ

| Published : Jun 26 2024, 12:36 AM IST

ಜೆಎಸ್‌ಡಬ್ಲು ಕಾರ್ಖಾನೆಯಲ್ಲಿ ಮೃತಪಟ್ಟಿದ್ದ ಕಾರ್ಮಿಕರ ಪಾಲಕರಿಂದ ಧರಣಿ
Share this Article
  • FB
  • TW
  • Linkdin
  • Email

ಸಾರಾಂಶ

ಕರಣ ಕುರಿತಾದ ತಾಂತ್ರಿಕ ದೋಷಗಳ ಕುರಿತು ವರದಿ ಸಲ್ಲಿಸಬೇಕಿದ್ದ ಕೈಗಾರಿಕೆ ಮತ್ತು ಬಾಯ್ಲರ್ ಇಲಾಖೆಯ ಅಧಿಕಾರಿಗಳೂ ತಮ್ಮ ಕಾರ್ಯ ಪೂರ್ಣಗೊಳಿಸಿಲ್ಲ.

ಸಂಡೂರು: ತಾಲೂಕಿನ ತೋರಣಗಲ್ಲಲ್ಲಿರುವ ಜೆಎಸ್‌ಡಬ್ಲು ಸ್ಟೀಲ್ ಕಾರ್ಖಾನೆಯ ಎಚ್.ಎಸ್.ಎಂ ೩ ಘಟಕದಲ್ಲಿ ಮೇ ೯ರಂದು ನಡೆದ ದುರ್ಘಟನೆಯಲ್ಲಿ ಮೃತಪಟ್ಟ ಎಂಜಿನಿಯರ್‌ಗಳ ಪಾಲಕರು ಮಂಗಳವಾರ ಕಾರ್ಖಾನೆಯ ಮುಂಭಾಗ ಸಾಂಕೇತಿಕ ಧರಣಿ ನಡೆಸಿ, ತಮ್ಮ ಮಕ್ಕಳ ಸಾವಿಗೆ ಸೂಕ್ತ ಕಾರಣ ತಿಳಿಸಬೇಕು. ಕಾರ್ಖಾನೆಯಲ್ಲಿ ಕಾರ್ಮಿಕರಿಗೆ ಸೂಕ್ತ ರಕ್ಷಣೆ ಒದಗಿಸಬೇಕು ಎಂದು ಒತ್ತಾಯಿಸಿದರು.ದುರ್ಘಟನೆಯಲ್ಲಿ ಸಿವಿಲ್ ವಿಭಾಗದ ಸಹಾಯಕ ಎಂಜಿನಿಯರ್‌ಗಳಾದ ಬೆಂಗಳೂರು ಮೂಲದ ನಯನಾರು ಸುಶಾಂತ್ ಕೃಷ್ಣ, ಹೊಸಪೇಟೆ ತಾಲೂಕಿನ ಗಂಟೆ ಜಡಿಯಪ್ಪ, ಚೆನ್ನೈ ಮೂಲದ ಮೆಕ್ಯಾನಿಕಲ್ ವಿಭಾಗದ ಎಂ. ಶಿವಮಗಾದೇವ್ ಮೃತಪಟ್ಟಿದ್ದರು.ಮೃತ ಎಂಜಿನಿಯರ್ ನಯನಾರು ಸುಶಾಂತ್ ಕೃಷ್ಣ ಅವರ ತಂದೆ ನಾಯನಾರು ಮಹೇಶ್ವರ್ ಮಾತನಾಡಿ, ದುರ್ಘಟನೆ ನಡೆದು ೪೫ ದಿನಗಳಾದರೂ ನಮ್ಮ ಮಕ್ಕಳ ದುರಂತ ಸಾವಿನ ಕಾರಣಗಳು ತಿಳಿಯದೇ ಹೋಗಿರುವುದು, ಈ ಕುರಿತು ತನಿಖೆ ಪೂರ್ಣಗೊಳ್ಳದಿರುವುದು ಮತ್ತು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸದಿರುವುದು ನಮಗೆ ದುಃಖ ತಂದಿದೆ ಎಂದರು.ಈ ಪ್ರಕರಣ ಕುರಿತಾದ ತಾಂತ್ರಿಕ ದೋಷಗಳ ಕುರಿತು ವರದಿ ಸಲ್ಲಿಸಬೇಕಿದ್ದ ಕೈಗಾರಿಕೆ ಮತ್ತು ಬಾಯ್ಲರ್ ಇಲಾಖೆಯ ಅಧಿಕಾರಿಗಳೂ ತಮ್ಮ ಕಾರ್ಯ ಪೂರ್ಣಗೊಳಿಸಿಲ್ಲ. ಈ ಪ್ರಕರಣದ ಆರೋಪಿಗಳು ಯಾರು? ತಪ್ಪಿತಸ್ಥರ ವಿರುದ್ಧ ಯಾವುದಾದರೂ ಕ್ರಮ ಜರುಗಿದೆಯಾ? ತನಿಖೆಯ ಪ್ರಗತಿ ಮುಂತಾದ ವಿಷಯಗಳನ್ನು ನಮಗೆ ತಿಳಿಸುತ್ತಿಲ್ಲ ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.ನಮ್ಮ ಮಕ್ಕಳ ಸಾವಿನ ಪ್ರಕರಣದ ತನಿಖೆ ಚುರುಕುಗೊಳ್ಳಬೇಕು. ಜೆಎಸ್‌ಡಬ್ಲು ಸಂಸ್ಥೆ ಕೈಗೊಂಡಿರುವ ಆಂತರಿಕ ತನಿಖೆ ಮಾಹಿತಿ ಬಹಿರಂಗವಾಗಬೇಕು. ಶೀಘ್ರದಲ್ಲಿಯೇ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಬೇಕು. ನಮ್ಮ ಮಕ್ಕಳಿಗೆ ಆದ ಗತಿ ಬೇರೆ ಕಾರ್ಮಿಕರಿಗೆ ಆಗಬಾರದು. ಕಾರ್ಖಾನೆಯಲ್ಲಿ ಕಾರ್ಮಿಕರ ಸುರಕ್ಷತೆಗೆ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಮೃತ ಸುಶಾಂತ್ ಕೃಷ್ಣ ತಾಯಿ ಫಣಿಕುಮಾರಿ, ಮೃತ ಎಂಜಿನಿಯರ್ ಎಂ.ಶಿವಮಗಾದೇವ್ ಅವರ ಪಾಲಕರಾದ ಜಿ.ಮಣಿ ಹಾಗೂ ಆನಂದಿ ಮಣಿಯವರು ಧರಣಿಯಲ್ಲಿ ಭಾಗವಹಿಸಿದ್ದರು.ಸಿಐಟಿಯು ಸಂಘಟನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜೆ.ಎಂ. ಚನ್ನಬಸಯ್ಯ, ಸಿಪಿಎಂ ತಾಲೂಕು ಕಾರ್ಯದರ್ಶಿ ಎ.ಸ್ವಾಮಿ, ಡಿವೈಎಫ್‌ಐ ಉಪಾಧ್ಯಕ್ಷ ಎಸ್.ಕಾಲುಬಾ ಉಪಸ್ಥಿತರಿದ್ದರು.