ವಿವಿಧ ಬೇಡಿಕೆಗಳು ಈಡೇರಿಕೆಗೆ ಆಗ್ರಹಿಸಿ ಧರಣಿ

| Published : Jan 17 2024, 01:51 AM IST

ಸಾರಾಂಶ

ವಿವಿಧ ಬೇಡಿಕೆಗಳನ್ನು ಈಡೆರಿಸಬೇಕೆಂದು ಆಗ್ರಹಿಸಿ ಪಟ್ಟಣದ ಕೆಲ ಪುರಸಭೆ ಸದಸ್ಯರು, ವ್ಯಾಪರಸ್ಥರು, ಸಾರ್ವಜನಿಕರು ಮಂಗಳವಾರ ಇಂಡಿ ಪಟ್ಟಣದ ಪುರಸಭೆ ಕಚೇರಿ ಮುಂದೆ ಅನಿರ್ದಿಷ್ಟಾವಧಿ ಧರಣಿ ನಡೆಸಿದರು.

ಕನ್ನಡಪ್ರಭ ವಾರ್ತೆ ಇಂಡಿ

ಪಟ್ಟಣದಲ್ಲಿ ರಸ್ತೆ ಅಗಲೀಕರಣ ಮಾಡುವಾಗ ಅಂಗಡಿಗಳನ್ನು ಕಳೆದುಕೊಂಡ ಮಾಲೀಕರಿಗೆ ಮೆಗಾ ಮಾರುಕಟ್ಟೆಯಲ್ಲಿ ಅಂಗಡಿಗಳಲ್ಲಿ ಮೊದಲು ಪ್ರಾಶಸ್ತ್ಯ ನೀತಿ ಅಂಗಡಿಗಳು ನೀಡಬೇಕು. ಇಂಡಿ ಪಟ್ಟಣ ಅಭಿವೃದ್ಧಿಯ ಜೊತೆಗೆ ಇನ್ನು ಬೆಳವಣಿಗೆ ಹೊಂದದೆ ಪಟ್ಟಣಕ್ಕೆ ಸಂಪರ್ಕ ಸಾದಿಸುವ ಹೆದ್ದಾರಿಗಳು ಇಲ್ಲದೇ ಇರುವುದರಿಂದ ವ್ಯಾಪಾರ ವಹಿವಾಟು ಕಡಿಮೆ ಇರುವುದರಿಂದ ಸದ್ಯ ಅಂಗಡಿಗಳಿಗೆ ವಿಧಿಸಿದ ಠೇವಣಿ ಹಾಗೂ ಬಾಡಿಗೆ ಅತೀ ಕಡಿಮೆ ಮಾಡಬೇಕು.

ಎಸ್ಸಿ, ಎಸ್ಟಿ ಸಮುದಾಯಕ್ಕೆ ಮೀಸಲಿರಿಸಿದ ಅಂಗಡಿಗಳ ಬಾಡಿಗೆ ಅತೀ ಕಡಿಮೆ ಹಾಗೂ ಠೇವಣಿ ರಹಿತವಾಗಿ ಒದಗಿಸಬೇಕೆಂಬ ವಿವಿಧ ಬೇಡಿಕೆಗಳನ್ನು ಈಡೆರಿಸಬೇಕೆಂದು ಆಗ್ರಹಿಸಿ ಪಟ್ಟಣದ ಕೆಲ ಪುರಸಭೆ ಸದಸ್ಯರು, ವ್ಯಾಪರಸ್ಥರು, ಸಾರ್ವಜನಿಕರು ಮಂಗಳವಾರ ಪಟ್ಟಣದ ಪುರಸಭೆ ಕಚೇರಿ ಮುಂದೆ ಅನಿರ್ದಿಷ್ಟಾವಧಿ ಧರಣಿ ನಡೆಸಿದರು.

ಪುರಸಭೆ ಸದಸ್ಯ ಅನಿಲಗೌಡ ಬಿರಾದಾರ ಧರಣಿ ಉದ್ದೇಶಿಸಿ ಮಾತನಾಡಿ, ಪಟ್ಟಣದಲ್ಲಿ ಪುರಸಭೆಯಿಂದ ಮೆಗಾ ಮಾರುಕಟ್ಟೆ ನಿರ್ಮಾಣ ಮಾಡಿರುವುದರಿಂದ ಇಂಡಿ ಪಟ್ಟಣದ ಬೆಳವಣಿಗೆ ಜೊತೆಗೆ ವ್ಯಾಪಾರಸ್ಥರಿಗೆ ಅನುಕೂಲವಾಗುತ್ತಿರುವುದು ಸಂತೋಷದ ಸಂಗತಿ. ಆದರೆ, ಮಾರುಕಟ್ಟೆಗೆ ರಸ್ತೆ ಸೇರಿದಂತೆ ಮೂಲಭೂತ ಸೌಕರ್ಯ ಕಲ್ಪಿಸದೇ ಮೆಗಾ ಮಾರುಕಟ್ಟೆಯ ಮೊದಲನೇ ಮಹಡಿಯ ಮಳಿಗೆಗಳ ಹರಾಜು ಪ್ರಕ್ರಿಯೆಗೆ ಪುರಸಭೆ ಮುಂದಾಗಿದೆ. ಅಂಗಡಿಗಳ ಠೇವಣಿ ಹಾಗೂ ಬೇಡಿಕೆ ಹೆಚ್ಚಿಗೆ ಆಗಿರುವುದರಿಂದ ಇದು ಬಡ, ಮಧ್ಯಮ ವ್ಯಾಪಾರಸ್ಥರಿಗೆ ಮಳಿಗೆಗಳು ಹಿಡಿಯಲು ಸಾಧ್ಯವಾಗುವುದಿಲ್ಲ. ಇಂಡಿ ಪಟ್ಟಣದಲ್ಲಿ ರಸ್ತೆ ಅಗಲೀಕರಣ ಮಾಡುವ ಸಂದರ್ಭದಲ್ಲಿ ಅಂಗಡಿ ಕಳೆದುಕೊಂಡ ಮಾಲೀಕರಿಗೆ ಮೆಗಾ ಮಾರುಕಟ್ಟೆಯಲ್ಲಿ ಅನುಕೂಲ ಕಲ್ಪಿಸಿಕೊಡುವುದಾಗಿ ಶಾಸಕರು ಹಾಗೂ ಪುರಸಭೆ ಅಧಿಕಾರಿಗಳು ಹಿಂದೆಯೇ ಭರವಸೆ ನೀಡಿದ್ದು, ಆದರೆ, ಆ ಭರವಸೆ ಈಡೇರಿಸದ ಕಾರಣ ಅಂಗಡಿ ಕಳೆದುಕೊಂಡ ವ್ಯಾಪರಸ್ಥರು, ಪುರಸಭೆ ಸದಸ್ಯರು ದಿನಾಂಕ ಸೆ. 14 ರಂದು ಪುರಸಭೆ ಮುಂದೆ ಬೇಡಿಕೆ ಈಡೆರಿಕೆಗೆ ಧರಣಿ ನಡೆಸಲಾಗಿತ್ತು. ಧರಣಿ ಸ್ಥಳಕೆ ಭೇಟಿ ನೀಡಿರುವ ಪುರಸಭೆ ಆಡಳಿತಾಧಿಕಾರಿ ಹಾಗೂ ಎಸಿ ಅವರು ಮತ್ತು ಶಾಸಕರ ಜೊತೆ ಚರ್ಚಿಸಿ ತಮ್ಮ ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದರಿಂದ ಅಂದು ಪ್ರತಿಭಟನೆ ಹಿಂದಕ್ಕೆ ಪಡೆದಿದ್ದೇವೆ. ಆದರೆ, ಎಸಿ ಸಾಹೇಬರು ನಮ್ಮ ಭರವಸೆ ಈಡೆರಿಸದೆ ಮತ್ತೇ ಮಳಿಗೆ ಹರಾಜು ಪ್ರಕ್ರಿಯೆಗೆ ಮುಂದಾಗಿದ್ದು, ಇದನ್ನು ವಿರೋದಿಸಿ ಧರಣಿ ಸತ್ಯಾಗ್ರಾಹ ಹಮ್ಮಿಕೊಳ್ಳಲಾಗಿದೆ. ನಮ್ಮ ಬೇಡಿಕೆಗಳು ಈಡೇರಿಸುವವರೆಗೆ ಧರಣಿ ಕೈಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಮೆಗಾ ಮಾರುಕಟ್ಟೆಯ 4 ಬದಿಗಳಲ್ಲಿ ಉತ್ತಮ ರಸ್ತೆ ಚರಂಡಿ, ಪಾರ್ಕಿಂಗ್, ಬೀದಿ ದೀಪದ ವ್ಯವಸ್ಥೆ ಮಾಡಿಯೇ ಮಳಿಗೆಗಳ ಹರಾಜು ಪ್ರಕ್ರಿಯೆ ಮುಂದುವರೆಸಬೇಕು. ಅಂಗವಿಕಲರಿಗೆ ಕಾಯ್ದಿರಿಸಿದ ಅಂಗಡಿಗಳು ರಿಯಾಯತಿ ದರದಲ್ಲಿ ಒದಗಿಸಬೇಕು. ಪುರಸಭೆಯ ಮುಂಭಾಗದಲ್ಲಿ ಸನ್ 2015- 16ನೇ ಸಾಲಿನಲ್ಲಿ ರಸ್ತೆ ನಿರ್ಮಾಣ ಮಾಡುವಾಗ ತೆರವುಗೊಂಡ 32 ಮಳಿಗೆಗಳು ಕಳೆದುಕೊಂಡವರು, ಠೇವಣಿ ಹಣವನ್ನು ಪುರಸಭೆಯಲ್ಲಿ ಇಟ್ಟಿರುತ್ತಾರೆ. ಅವರಿಗೆ ಸಹ ಮೇಗಾ ಮಾರುಕಟ್ಟೆ ಅಂಗಡಿಗಳು ಮೀಸಲಿರಿಸಬೇಕು ಎಂದು ಆಗ್ರಹಿಸಿದರು.

ಧರಣಿ ನಿರತ ಸ್ಥಳಕ್ಕೆ ಆಗಮಿಸಿದ ಪುರಸಭೆ ಆಡಳಿತಾಧಿಕಾರಿ ಹಾಗೂ ಎಸಿ ಅಬೀದ್‌ ಗದ್ಯಾಳ ಮಾತನಾಡಿ, ತಮ್ಮ ಬೇಡಿಕೆಗಳನ್ನು ಚರ್ಚಿಸಿ ಈಡೇರಿಸುವ ಭರವಸೆ ನೀಡಿದರು. ಆದರೆ, ಇದಕ್ಕೆ ಒಪ್ಪದ ಧರಣಿ ನಿರತರು, ಬೇಡಿಕೆ ಈಡೇರುವವರೆಗೆ ಧರಣಿ ಮುಂದುವರೆಸುತ್ತೇವೆ ಎಂದು ಪಟ್ಟು ಹಿಡಿದು, ಧರಣಿ ಮುಂದುವರೆಸಿದರು.

ತಿಪ್ಪಣ್ಣ ಉಟಗಿ, ಶರಣಗೌಡ ಬಂಡಿ, ಪ್ರದೀಪ ಉಟಗಿ, ಬಾಳು ಗವಳಿ, ಪ್ರಶಾಂತ ಗವಳಿ, ವಜ್ರಕಾಂತ ಕುಡಿಗನೂರ, ಅಶೋಕ ಅಕಲಾದಿ, ರಾಜಶೇಖರ ಮಣೂರ, ಸಂಜು ದಶವಂತ, ಅಶೋಕ ಅಗಸರ, ಶ್ರೀಶೈಲಗೌಡ ಬಿರಾದಾರ, ಬಾಳು ಮುಳಜಿ, ಮಹೇಶ ಹೂಗಾರ, ಆದಿತ್ಯ ಶಿಂಧೆ, ಸಂತೋಷ ಪಾಟೀಲ, ಅರವಿಂದ ಪಾಟೀಲ, ಸುರೇಶ ಏವೂರ, ಸುರೇಶ ಬಳಮಕರ, ಅರವಿಂದ ಪಾಟೀಲ, ಅಂಬ್ರನಾಥ ರಾಠೋಡ, ಸಂತೋಷ ಚವ್ಹಾಣ, ದಶರಂಥ ಇಂಗಳೆ, ಎ.ಎಂ.ಲಾಳಸಂಗಿ, ಜಯರಾಮ ರಾಠೋಡ, ಸತೀಶ ಬೊಳೆಗಾಂವ, ಮಂಜುನಾಥ ದೇವರ, ಪ್ರವೀಣ ಮಠ, ಶಂಕರಸಿಂಗ ಹಲವಾಯಿ, ಅಪ್ಪು ಪವಾರ ಮೊದಲಾದವರು ಧರಣಿಯಲ್ಲಿ ಇದ್ದರು.