ತಮ್ಮ ಪತ್ನಿ ಶಿಲ್ಪಾ ಗೃಹಲಕ್ಷ್ಮಿಯ ಅರ್ಜಿ ಆನ್‌ಲೈನ್‌ನಲ್ಲಿ ಸ್ವೀಕೃತಿ ಆಗುತ್ತಿಲ್ಲ. ಈ ಸಮಸ್ಯೆ ಬಗೆಹರಿಸದೆ ನಿರ್ಲಕ್ಷ್ಯ ಮಾಡಿದ ಸಿಡಿಪಿಒ ವಿರುದ್ಧ ಕ್ರಮ ಜರುಗಿಸಬೇಕು.
ಕೊಪ್ಪಳ: ಮೂರು ವರ್ಷದಿಂದ ಪತ್ನಿಯ ಗೃಹಲಕ್ಷ್ಮೀ ಹಣ ಬಂದಿಲ್ಲ, ಅಧಿಕಾರಿಗಳು ಸರಿಪಡಿಸಿಕೊಡುತ್ತಿಲ್ಲ ಎಂದು ಆರೋಪಿಸಿ ಕುಷ್ಟಗಿ ತಾಲೂಕಿನ ಹಾಬಲಕಟ್ಟಿ ಗ್ರಾಮದ ಶರಣಪ್ಪ ಭೋವಿ ಎಂಬುವರು ಇಲ್ಲಿನ ಜಿಲ್ಲಾಡಳಿತ ಭವನದ ಮುಂದೆ ಧರಣಿ ಕುಳಿತುಕೊಂಡಿದ್ದಾರೆ.
ತನ್ನ ಪತ್ನಿ ಶಿಲ್ಪಾಗೆ ಗೃಹಲಕ್ಷ್ಮೀ ಯೋಜನೆಯಲ್ಲಿ ಅರ್ಜಿ ಆನ್ ಲೈನ್ ನಲ್ಲಿ ಅಪ್ಲೋಡ್ ಆಗದೆ ಅನ್ಯಾಯವಾಗಿದ್ದು, ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಿ ಮೂರು ವರ್ಷದ ಗೃಹ ಲಕ್ಷ್ಮಿ ಹಣ ಕೊಡಿಸಬೇಕು ಎಂದು ಆಗ್ರಹಿಸಿದ್ದಾರೆ.ಧರಣಿ ಕುಳಿತಿರುವ ಶರಣಪ್ಪ ಭೋವಿ ಹಾಬಲಕಟ್ಟಿ ಗ್ರಾಮದಲ್ಲಿ ಎಗ್ ರೈಸ್ ಅಂಗಡಿ ಇಟ್ಟುಕೊಂಡು ಬದುಕು ಸಾಗಿಸುತ್ತಿದ್ದಾರೆ. ಮೂರು ವರ್ಷದಿಂದ ಹೆಂಡತಿಯ ಗೃಹಲಕ್ಷ್ಮೀ ಹಣಕ್ಕಾಗಿ ಪ್ರಯತ್ನಿಸಿದ್ದಾರೆ. ಆದರೆ ಯಾವುದೇ ಪ್ರಯೋಜನ ಆಗದ ಕಾರಣ ಜಿಲ್ಲಾಧಿಕಾರಿ ಕಚೇರಿ ಎದುರು ತಾನೊಬ್ಬನೇ ಧರಣಿ ಸಹ ಕುಳಿತಿದ್ದಾನೆ.
ಈ ಕುರಿತು ಮಾತನಾಡಿರುವ ಶರಣಪ್ಪ, ತಮ್ಮ ಪತ್ನಿ ಶಿಲ್ಪಾ ಗೃಹಲಕ್ಷ್ಮಿಯ ಅರ್ಜಿ ಆನ್‌ಲೈನ್‌ನಲ್ಲಿ ಸ್ವೀಕೃತಿ ಆಗುತ್ತಿಲ್ಲ. ಈ ಸಮಸ್ಯೆ ಬಗೆಹರಿಸದೆ ನಿರ್ಲಕ್ಷ್ಯ ಮಾಡಿದ ಸಿಡಿಪಿಒ ವಿರುದ್ಧ ಕ್ರಮ ಜರುಗಿಸಬೇಕು. ಅರ್ಜಿ ಹಾಕಲು ವೃಥಾ ಅಲೆದಾಟದಿಂದ ₹20-25 ಸಾವಿರ ವೆಚ್ಚ ಆಗಿದೆ. ಈ ಸಮಸ್ಯೆ ಬಗ್ಗೆ ಹೇಳಿಕೊಂಡರೆ ನಿರ್ಲಕ್ಷ್ಯ ಮಾಡಿದ ಕುಷ್ಟಗಿ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಫಾರೂಕ್ ಡಲಾಯತ್ ರನ್ನು ಅಧ್ಯಕ್ಷ ಸ್ಥಾನದಿಂದ ಅಮಾನತ್ತು ಮಾಡಬೇಕು. ಗೃಹ ಲಕ್ಷ್ಮಿ ಹಣ ಬಾರದೆ ಕುಟುಂಬದಲ್ಲಿ ಕಿರಿಕಿರಿ ಆಗುತ್ತಿದೆ. ಹಾಗಾಗಿ ನೊಂದು ಸಿಎಂ ಡಿ.ಕೆ. ಶಿವಕುಮಾರ ಹೆಸರಿಗೆ ಸಹ ಪತ್ರ ಬರೆದಿದ್ದೇನೆ. ಗೃಹಲಕ್ಷ್ಮೀ ಹಣ ಮರಳಿ ನೀಡುವವರೆಗೂ ಪ್ರತಿಭಟನೆ ಕೈಬಿಡೋದಿಲ್ಲ ಎಂದು ಹೇಳಿದರು.