ನಿವೇಶನ ರಹಿತರಿಂದ ತಹಸೀಲ್ದಾರ ಕಚೇರಿ ಎದುರು ಧರಣಿ

| Published : Jul 30 2024, 12:35 AM IST

ಸಾರಾಂಶ

ಜಿಲ್ಲೆಯ ಬಡವರಿಗೆ ನಿವೇಶನ ಮತ್ತು ಮನೆಗಳನ್ನು ನೀಡಲು ಒತ್ತಾಯಿಸಿ ತಹಸೀಲ್ದಾರ್‌ ಕಚೇರಿ ಮುಂದೆ ಸೋಮವಾರ ನಿವೇಶನ ಮತ್ತು ವಸತಿ ರಹಿತರ ಹೋರಾಟ ಸಮಿತಿ ನೇತೃತ್ವದಲ್ಲಿ ಧರಣಿ ನಡೆಸಿ, ಮನವಿ ಸಲ್ಲಿಸಲಾಯಿತು.

ನಿವೇಶನ ಮತ್ತು ಮನೆ ನೀಡಲು ಒತ್ತಾಯ । ಜಿಲ್ಲಾಧಿಕಾರಿಗೆ ಮನವಿ

ಕನ್ನಡಪ್ರಭ ವಾರ್ತೆ ಕೊಪ್ಪಳ

ಜಿಲ್ಲೆಯ ಬಡವರಿಗೆ ನಿವೇಶನ ಮತ್ತು ಮನೆಗಳನ್ನು ನೀಡಲು ಒತ್ತಾಯಿಸಿ ತಹಸೀಲ್ದಾರ್‌ ಕಚೇರಿ ಮುಂದೆ ಸೋಮವಾರ ನಿವೇಶನ ಮತ್ತು ವಸತಿ ರಹಿತರ ಹೋರಾಟ ಸಮಿತಿ ನೇತೃತ್ವದಲ್ಲಿ ಧರಣಿ ನಡೆಸಿ, ಮನವಿ ಸಲ್ಲಿಸಲಾಯಿತು.

ತಹಶೀಲ್ದಾರ್ ಗ್ರೇಡ್ 2 ಗವಿಸಿದ್ದಪ್ಪ ಮಣ್ಣೂರ್ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

ರಾಜೀವ್ ಗಾಂಧಿ ವಸತಿ ನಿಗಮದ ವೆಬ್‌ಸೈಟ್ ಲಾಕ್ ಆಗಿದೆ ಎಂದು ಸಂಬಂಧಪಟ್ಟ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಮಾಹಿತಿ ನೀಡುತ್ತಿದ್ದಾರೆ. ಆದ್ದರಿಂದ ತಾವು ಈ ಕೂಡಲೇ ರಾಜೀವ್ ಗಾಂಧಿ ವಸತಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಜಿಲ್ಲೆಯಲ್ಲಿ ನಿವೇಶನ ಮತ್ತು ವಸತಿ ರಹಿತರಿಗೆ ಅರ್ಜಿ ಸಲ್ಲಿಸಲು ಅನುಕೂಲ ವಾಗುವಂತೆ ವೆಬ್‌ಸೈಟ್ ಲಾಕ್ ಅನ್ನು ತೆಗೆದು ಅರ್ಜಿ ಸ್ವೀಕರಿಸಲು ಕ್ರಮ ಕೈಗೊಳ್ಳಬೇಕು. ಜಿಲ್ಲೆಯಲ್ಲಿ ಒಟ್ಟು 73,967 ಕುಟುಂಬಗಳು ವಸತಿ ಹೀನವಾಗಿವೆ ಎಂಬ ಅಂಕಿ-ಅಂಶಗಳು ರಾಜೀವ್ ಗಾಂಧಿ ವಸತಿ ನಿಗಮದ ನಿವೇಶನ ಮತ್ತು ವಸತಿ ರಹಿತರ ಸಮೀಕ್ಷಾ ವರದಿಯಿಂದ ಕಂಡುಬಂದಿದೆ. ಆದ್ದರಿಂದ ಕೂಡಲೇ ನಿವೇಶನ ನೀಡುವಂತೆ ಆಗ್ರಹಿಸಿದರು.

ಸಣ್ಣ ಮನೆಗಳಲ್ಲಿ ಹಲವು ಕುಟುಂಬಗಳು ವಾಸವಾಗಿದ್ದು, ಸಾಮಾನ್ಯ ಜೀವನ ನಡೆಸಲು ಕೂಡ ಅಸಾಧ್ಯವಾದ ಸ್ಥಿತಿಯಲ್ಲಿ ಈ ಕುಟುಂಬಗಳಲ್ಲಿ ಬದುಕುತ್ತಿವೆ. ನಗರ ಪ್ರದೇಶದಲ್ಲಿ ವಸತಿ ರಹಿತರು ದಶಕಗಳಿಂದ ಬಾಡಿಗೆ ಮನೆಯಲ್ಲಿ ವಾಸವಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ನಿವೇಶನ ಅಲಭ್ಯತೆಯಿಂದ ಹಲವು ಕುಟುಂಬಗಳು ಕಾಲುವೆಯ ದಂಡೆಯ ಮೇಲೆ ಹಾಗೂ ಯೋಗ್ಯವಲ್ಲದ ಸ್ಥಳಗಳಲ್ಲಿ ಗುಡಿಸಲು ನಿರ್ಮಾಣ ಮಾಡಿಕೊಂಡು ಅತಂತ್ರ ಮತ್ತು ಅತ್ಯಂತ ಅಪಾಯಕಾರಿ ಜಾಗಗಳಲ್ಲಿ ಜೀವನ ನಡೆಸುತ್ತಿದ್ದಾರೆ. ಈ ಎಲ್ಲ ಅಂಶಗಳನ್ನು ಪರಿಗಣಿಸಿ ನಮ್ಮ ಜಿಲ್ಲೆಯ ಅರ್ಹ ನಿವೇಶನ ಮತ್ತು ವಸತಿ ರಹಿತ ಕುಟುಂಬಗಳಿಗೆ ಸಂವಿಧಾನಬದ್ಧವಾದ ವಸತಿ ಹಕ್ಕನ್ನು ನೀಡಬೇಕು. ಕೂಡಲೇ ನಿವೇಶನ ಮತ್ತು ವಸತಿಗಾಗಿ ಈಗಾಗಲೇ ಅರ್ಜಿ ಸಲ್ಲಿಸಿರುವ ಮತ್ತು ಹೊಸದಾಗಿ ಅರ್ಜಿ ಸಲ್ಲಿಸ ಬಯಸುವ ಕುಟುಂಬಗಳ ಅರ್ಜಿ ಸ್ವೀಕರಿಸಿ ನಿವೇಶನ ಮತ್ತು ವಸತಿ ರಹಿತರ ಸಮೀಕ್ಷಾ ಪಟ್ಟಿಗೆ ಸೇರಿಸಬೇಕು. ಜಿಲ್ಲೆಯಾದ್ಯಂತ ಇರುವ ಆರ್ಹ ನಿವೇಶನ ರಹಿತರ ಸಂಖ್ಯೆಗೆ ಅನುಗುಣವಾಗಿ ಅವರಿಗೆ ನಿವೇಶನ ನೀಡಲು ಅಗತ್ಯ ಇರುವ ಸರ್ಕಾರಿ ಭೂಮಿಯನ್ನು ಗುರುತಿಸಿ ಆ ಭೂಮಿಯನ್ನು ಆಶ್ರಯ ನಿವೇಶನಕ್ಕಾಗಿ ಕಾಯ್ದಿದಿರಿಸಬೇಕು. ಭೂಮಿ ಲಭ್ಯತೆ ಇಲ್ಲದೆ ಇದ್ದಲ್ಲಿ ಖಾಸಗಿ ಜಮೀನನ್ನು ಖರೀದಿ ಮಾಡಿ ನಿವೇಶನ ರಚಿಸಿ ಬಡವರಿಗೆ ವಿತರಣೆ ಮಾಡಬೇಕು ಎಂದು ಧರಣಿನಿರತರು ಆಗ್ರಹಿಸಿದರು.

ನಿವೇಶನ ಮತ್ತು ವಸತಿ ರಹಿತರ ಹೋರಾಟ ಸಮಿತಿಯ ತಾಲೂಕಾ ಅಧ್ಯಕ್ಷ ಎಸ್.ಎ. ಗಫಾರ್, ತಾಲೂಕಾ ಉಪಾಧ್ಯಕ್ಷ ನೂರಸಾಬ ಹೊಸಮನಿ, ತಾಲೂಕಾ ಕಾರ್ಯದರ್ಶಿ ತುಕಾರಾಮ್ ಬಿ. ಪಾತ್ರೋಟಿ, ಭಾರತ ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ಉಸ್ತುವಾರಿ ಡಾ. ಕೆ.ಎಸ್. ಜನಾರ್ದನ, ಹಿರಿಯ ಮುಖಂಡರಾದ ಜಾಫರ್ ಕುರಿ, ರಾಜಪ್ಪ ಚವ್ಹಾಣ್, ಬೆಟದಯ್ಯ ಹಾದಿಮನಿ, ಶೋಭಾ ವಡ್ಡರ, ಮಲ್ಲಿಕಾರ್ಜುನ್ ಕಾಸನಕಂಡಿ, ಮಂಜುನಾಥ್ ವಡ್ಡರ, ರೇಷ್ಮಾ ಭಾವಿಮನಿ, ಗೀತಾ ಇಂಗಳಗಿ, ರೇಣುಕಾ ನವನಗರ, ಹನುಮಂತ ವಡ್ಡರ, ಜಗದೀಶ್ ಕಟ್ಟಿಮನಿ ಮುಂತಾದವರಿದ್ದರು.