ಸಾರಾಂಶ
ನ್ಯಾಮತಿ: ಗ್ರಾಮ ಆಳಿತಾಧಿಕಾರಿಗಳ ಸಂಘದ ಪದಾಧಿಕಾರಿಗಳು ಹಲವು ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ನ್ಯಾಮತಿ ತಹಸೀಲ್ದಾರ್ ಕಚೇರಿ ಮುಂಭಾಗದಲ್ಲಿ ಗುರುವಾರ ಮುಷ್ಕರ ನಡೆಸಿದರು.
ಜನಸಾಮಾನ್ಯರ ಕೆಲಸ ಮಾಡುವ ಕಂದಾಯ ಇಲಾಖೆ ಗ್ರಾಮ ಆಡಳಿತಾಧಿಕಾರಿಗಳು ಈಗಾಗಲೇ ಸೋಮವಾರದಿಂದ ಆಧಾರ್ ಸೀಡ್, ಲ್ಯಾಂಡ್ ಬೀಟ್, ಬಗರ್‌ಹುಕುಂ, ಹಕ್ಕುಪತ್ರ ಸೆರಿದಂತೆ ಕೆಲವು ಸೇವೆಗಳನ್ನು ನಿಲ್ಲಿಸಿ, ತಹಸೀಲ್ದಾರರಿಗೆ ಮನವಿ ಸಲ್ಲಿಸಿದ್ದರು.ಸಂಘದ ನ್ಯಾಮತಿ ತಾಲೂಕು ಘಟಕ ಅಧ್ಯಕ್ಷ ರಾಘವೇಂದ್ರ ಮಾತನಾಡಿ, ಸೆ.22ರಂದು ಚಿತ್ರದುರ್ಗದಲ್ಲಿ ನಡೆದ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ರಾಜ್ಯದ 31 ಜಿಲ್ಲೆಗಳ ಜಿಲ್ಲಾಧ್ಯಕ್ಷರು, ಪದಾಧಿಕಾರಿಗಳು, ತಾಲೂಕು ಅಧ್ಯಕ್ಷರು ಹಾಗೂ ಸರ್ವ ಸದಸ್ಯರ ಒಪ್ಪಿಗೆಯಂತೆ ನಿರ್ಣಯ ಕೈಗೊಂಡು, ಗ್ರಾಮಾಡಳಿತ ಅಧಿಕಾರಿಗಳ ಬೇಡಿಕೆ ಈಡೇರುವವರೆಗೂ ಮುಷ್ಕರ ನಡೆಸಲಾಗುವುದು. ಸೆ.27ರಂದು ದಾವಣಗೆರೆ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಾಗುತ್ತದೆ ಎಂದು ಹೇಳಿದರು.
ಮೂಲಸೌಕರ್ಯಗಳು, ಆಧುನಿಕ ತಾಂತ್ರಿಕ ಸೌಲಭ್ಯಗಳನ್ನು ನೀಡದೇ ಅನೇಕ ಕೆಲಸಗಳ ಒತ್ತಡದಿಂದ ಬಳಲುತ್ತಿರುವ ಗ್ರಾಮ ಆಡಳಿತಾಧಿಕಾರಿಗಳ ಬೇಡಿಕೆಗೆ ಸ್ಪಂದಿಸಿ, ನ್ಯಾಯ ಒದಗಿಸುವಂತೆ ಆಗ್ರಹಿಸಿದರು.ತಾಲೂಕು ಪದಾಧಿಕಾರಿಗಳಾದ ಶಿವಕುಮಾರ್, ಕೊಟ್ರೇಶ್, ವಿಜಯಕುಮಾರ, ರಂಗನಾಥ, ಹರೀಶ್, ಪರಶುರಾಮ, ಆಶೋಕ್ ಪಾಟೀಲ್, ಚಂದ್ರಮ್ಮ, ವೇಣುಗೋಪಾಲ, ಸೋಮಯ್ಯ ಹಿರೇಮಠ, ಗ್ರಾಮ ಸಹಾಯಕ ಸಂಘ ಅಧ್ಯಕ್ಷ ಚಂದ್ರಪ್ಪ ಹಾಗೂ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಂತೋಷ್ ಮತ್ತಿತರರು ಇದ್ದರು.
- - - (-ಫೋಟೋ:)