ಫಾರ್ಮ್‌ ನಂ.೩ ಪೂರೈಸುವಂತೆ ಧರಣಿ ಸತ್ಯಾಗ್ರಹ

| Published : Mar 12 2025, 12:52 AM IST

ಸಾರಾಂಶ

ಧರಣಿ ನಿರತರು, ಏ.೩೦ ರೊಳಗೆ ಬೇಡಿಕೆ ಈಡೇರದಿದ್ದಲ್ಲಿ ಮೇ.೨ ರಂದು ಪಟ್ಟಣ ಪಂಚಾಯತ್ ಗೆ ಬೀಗ ಜಡಿದು ಪ್ರತಿಭಟಿಸಲಾಗುವುದೆಂದು ಎಚ್ಚರಿಸಿದರು

ಮುಂಡಗೋಡ: ವಿವಿಧ ಕೊಳಚೆ ಪ್ರದೇಶದ ಆಸ್ತಿಗಳಿಗೆ ನಮೂನೆ ೩ ಪೂರೈಸುವಂತೆ ಆಗ್ರಹಿಸಿ ಕೊಳಚೆ ಪ್ರದೇಶದ ನಿವಾಸಿಗಳು ಮಂಗಳವಾರ ಪಟ್ಟಣದ ಪಂಚಾಯತ್ ಎದುರು ಧರಣಿ ಸತ್ಯಾಗ್ರಹ ನಡೆಸಿ ಪಪಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕೊಳಚೆ ಪ್ರದೇಶದ ೫೩೦ ಫಲಾನುಭವಿಗಳಿಗೆ ಫಾರ್ಮ್ ನಂ. ೩ ನೀಡಬೇಕೆಂದು ಜಿಲ್ಲಾಧಿಕಾರಿಗಳು ಆದೇಶ ಮಾಡಿದ್ದಾರೆ. ಈ ಬಗ್ಗೆ ಹಿಂದೆ ಪ್ರತಿಭಟನೆ ನಡೆಸಿದಾಗ ೪-೧೧-೨೦೨೩ ರೊಳಗೆ ಫಾರ್ಮ್ ನಂ. ೩ ನೀಡುವುದಾಗಿ ಪಪಂನಿಂದ ಲಿಖಿತ ಭರವಸೆ ನೀಡಲಾಗಿತ್ತು. ಆದರೆ ಇದುವರೆಗೂ ನೀಡದೆ ಸತಾಯಿಸಲಾಗುತ್ತಿದೆ. ಫಲಾನುಭವಿಗಳು ಸಲ್ಲಿಸಿದ ಅರ್ಜಿ ವಿಲೇವಾರಿ ಮಾಡಲಾಗಿಲ್ಲ. ನಿಮ್ಮ ಕೈಯಿಂದ ಕೆಲಸ ಮಾಡಲು ಸಾದ್ಯವಾಗದಿದ್ದರೆ ಮನೆಗೆ ಹೋಗಿ ಎಂದು ಅಧಿಕಾರಿಗಳ ವಿರುದ್ದ ಗುಡುಗಿದರು.ಸ್ಥಳಕ್ಕಾಗಮಿಸಿದ ಮುಖ್ಯಾಧಿಕಾರಿ ಚಂದ್ರಶೇಖರ, ಹಂತ ಹಂತವಾಗಿ ಫಾರ್ಮ್ ನಂ.೩ ನೀಡುವುದಾಗಿ ಧರಣಿ ಕೈಬಿಡುವಂತೆ ಮನವಿ ಮಾಡಿದರು. ಇದಕ್ಕೆ ಜಗ್ಗದ ಪ್ರತಿಭಟನಾಕಾರರು, ಇಷ್ಟು ದಿನ ಅಂಗಲಾಚಿದರೂ ಮಾಡದ ಕೆಲಸ ಈಗ ಮಾಡುತ್ತೇವೆ ಎಂದು ಬಂದಿದ್ದೀರೇನು? ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರಲ್ಲದೇ, ಪ್ರತಿಯೊಬ್ಬರಿಗೂ ಫಾರ್ಮ ನಂ.೩ ಪೂರೈಸುವವರೆಗೂ ಇಲ್ಲಿಂದ ಕದಲುವುದಿಲ್ಲ ಎಂದು ಧುರೀಣ ರವಿ ಹಾವೇರಿ ಮತ್ತು ಪಪಂ ಸದಸ್ಯ ಅಶೋಕ ಚಲವಾದಿ ಪಟ್ಟು ಹಿಡಿದರು.

ಈ ಸಂದರ್ಭದಲ್ಲಿ ಪಪಂ ಅಧಿಕಾರಿ ಮತ್ತು ಪ್ರತಿಭಟನಾನಿರತರ ನಡುವೆ ಮಾತಿನ ಚಕಮಕಿ ನಡೆಯಿತು. ಇಷ್ಟು ದಿನದೊಳಗಾಗಿ ನಮ್ಮ ಬೇಡಿಕೆ ಪೂರೈಸುವ ಬಗ್ಗೆ ಲಿಖಿತ ಭರವಸೆ ನೀಡುವಂತೆ ಪಟ್ಟುಹಿಡಿದರು.

ಏ. ೩೦ ರೊಳಗೆ ಫಾರ್ಮ ನಂ.೩ ಪೂರೈಕೆ ಭರವಸೆ: ಸುಮಾರು ೨ ಗಂಟೆಗಳ ಬಳಿಕ ಮಧ್ಯ ಪ್ರವೇಶಿಸಿದ ಪಪಂ ಅಧ್ಯಕ್ಷೆ ಜಯಸುಧಾ ಬೋವಿ, ಉಪಾಧ್ಯಕ್ಷೆ ರಹಿಮಾಬಾನು ಕುಂಕೂರ ಮತ್ತು ಪಪಂ ಮುಖ್ಯಾಧಿಕಾರಿ ಚಂದ್ರಶೇಖರ, ಸುಧೀರ್ಘ ಚರ್ಚೆ ನಡೆಸಿ ಏ.೩೦ ರೊಳಗಾಗಿ ಪಟ್ಟಣದ ವಿವಿಧ ಬಡಾವಣೆಯ ಸ್ಲಂ ನಿವಾಸಿಗಳಿಗೆ ಹಕ್ಕು ಪತ್ರ ನೀಡಿದಂತೆಯೇ ಆದ್ಯತೆಯ ಮೇರೆಗೆ ಫಾರ್ಮ ನಂ. ೩ ಒದಗಿಸಲಾಗುವುದು, ಅಲ್ಲದೇ ಗಾಂಧಿನಗರದ ಘೋಷಿತ ಕೊಳಚೆ ಪ್ರದೇಶಕ್ಕೆ ಜಿಲ್ಲಾಧಿಕಾರಿಗಳ ಆದೇಶದಲ್ಲಿ ಸೂಚಿಸಿದಂತೆ ೫೩೦ಫಲಾನುಭವಿಗಳ ಯಾದಿಯಂತೆ ಮತ್ತು ಕಂಬಾರಗಟ್ಟಿ ಬಡಾವಣೆಯ ಹಕ್ಕು ಪತ್ರದಾರರಿಗೆ ಈ ಅವದಿಯಲ್ಲಿ ನಮೂನೆ ೩ ಪೂರೈಸುವುದಾಗಿ ಲಿಖಿತ ಭರವಸೆ ನೀಡಿದ ಬಳಿಕ ಪ್ರತಿಭಟನೆ ಕೈಬಿಟ್ಟ ಧರಣಿ ನಿರತರು, ಏ.೩೦ ರೊಳಗೆ ಬೇಡಿಕೆ ಈಡೇರದಿದ್ದಲ್ಲಿ ಮೇ.೨ ರಂದು ಪಟ್ಟಣ ಪಂಚಾಯತ್ ಗೆ ಬೀಗ ಜಡಿದು ಪ್ರತಿಭಟಿಸಲಾಗುವುದೆಂದು ಎಚ್ಚರಿಸಿದರು.

ಧುರೀಣ ರವಿ ಹಾವೇರಿ ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ಪಪಂ ಸದಸ್ಯ ಅಶೋಕ ಚಲವಾದಿ, ಚಿದಾನಂದ ಹರಿಜನ, ಜ್ಞಾನದೇವ ಗುಡಿಯಾಳ, ಹನುಮಯ್ಯ ಇಳಿಗೇರ ಮುಂತಾದವರು ಉಪಸ್ಥಿತರಿದ್ದರು.