ಧರ್ಮಾಧಿಕಾರಿ, ಕುಟುಂಬ, ಭಕ್ತರು ನಿರಾಳ: ಬಾಲಕೃಷ್ಣ

| Published : Aug 24 2025, 02:00 AM IST

ಸಾರಾಂಶ

ಧರ್ಮಸ್ಥಳ ಕ್ಷೇತ್ರಕ್ಕೆ ಅಂಟಿದ್ದ ಅಪವಾದವನ್ನು ತೊಡೆದು ಹಾಕಲು ಈ ತನಿಖೆ ಅವಶ್ಯಕತೆ ಇತ್ತು. ತನಿಖೆಯಿಂದ ಸತ್ಯ ಹೊರಬಂದಿದ್ದು, ಎಸ್ಐಟಿ ರಚನೆ ಉದ್ದೇಶ ಸಫಲವಾಗಿದೆ ಎಂದರು.

ಕನ್ನಡಪ್ರಭ ವಾರ್ತೆ ರಾಮನಗರ

ಧರ್ಮಸ್ಥಳದ ವಿರುದ್ಧ ನಡೆಯುತ್ತಿದ್ದ ಅಪಪ್ರಚಾರ ತಡೆಯುವ ಉದ್ದೇಶದಿಂದಲೇ ಎಸ್ಐಟಿ ರಚನೆ ಮಾಡಲಾಗಿತ್ತು. ಇದೀಗ ತನಿಖೆ ಸತ್ಯಾಂಶದಿಂದ ಧರ್ಮಾಧಿಕಾರಿಗಳು, ಅವರ ಕುಟುಂಬ ಹಾಗೂ ಭಕ್ತರು ನಿರಾಳರಾಗಿದ್ದಾರೆ ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ಪ್ರತಿಕ್ರಿಯಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧರ್ಮಸ್ಥಳ ಕ್ಷೇತ್ರಕ್ಕೆ ಅಂಟಿದ್ದ ಅಪವಾದವನ್ನು ತೊಡೆದು ಹಾಕಲು ಈ ತನಿಖೆ ಅವಶ್ಯಕತೆ ಇತ್ತು. ತನಿಖೆಯಿಂದ ಸತ್ಯ ಹೊರಬಂದಿದ್ದು, ಎಸ್ಐಟಿ ರಚನೆ ಉದ್ದೇಶ ಸಫಲವಾಗಿದೆ ಎಂದರು.

ಇದೀಗ ಮುಸುಕುಧಾರಿ ವ್ಯಕ್ತಿಯನ್ನು ಎಸ್ಐಟಿ ಬಂಧಿಸಿದೆ. ಮತ್ತಷ್ಟು ತನಿಖೆ ನಂತರ ಅವನ ಹಿಂದೆ ಯಾರಿದ್ದಾರೆ. ಉದೇಶ ಏನೆಂಬುದನ್ನು ಪತ್ತೆ ಹಚ್ಚಿ ಎಲ್ಲರಿಗೂ ಕಠಿಣ ಶಿಕ್ಷೆಗೆ ಗುರಿಪಡಿಸಲಾಗುವುದು. ಇದು ಸಾಮಾನ್ಯ ತನಿಖೆ ಅಲ್ಲ. ನಮ್ಮ ಸಿಎಂ ಹಾಗೂ ಡಿಸಿಎಂ ಆಸಕ್ತಿವಹಿಸಿ ರಚಿಸಿರುವ ಎಸ್ಐಟಿ ಇದಾಗಿದ್ದು, ಧರ್ಮಸ್ಥಳಕ್ಕೆ ಅಂಟಿದ್ದ ಕಳಂಕ ತೊಡೆದು ಹೋಗಲಿದೆ ಎಂದರು.

ಪ್ರತಿಪಕ್ಷಗಳು ಇರುವುದೇ ಸರ್ಕಾರವನ್ನು ಟೀಕೆ ಮಾಡಲು. ಹಾಗಾಗಿ ವಿಪಕ್ಷಗಳ ಆರೋಪಕ್ಕೆ ಮಹತ್ವ ನೀಡಬೇಕಿಲ್ಲ. ಬಿಜೆಪಿಯವರಿಗೆ ನಿಜವಾಗಿಯೂ ಕಾಳಜಿ ಇದ್ದಿದ್ದರೆ ಅವರ ಅಧಿಕಾರಾವಧಿಯಲ್ಲೇ ಪ್ರಕರಣವನ್ನು ಬಗೆಹರಿಸಬಹುದಿತ್ತು. ಆಗಲೇ ಬಗೆಹರಿಸಿದ್ದರೆ ಇಲ್ಲಿವರೆಗೆ ಅದು ಮುಂದುವರಿಯುತ್ತಲೇ ಇರಲಿಲ್ಲ ಎಂದು ತಿಳಿಸಿದರು.

ಬಿಜೆಪಿಯವರದು ಧರ್ಮಾಧಾರಿತ ರಾಜಕಾರಣ. ಮಗುವನ್ನೂ ಚಿವುಟಿ, ತೊಟ್ಟಿಲನ್ನೂ ತೂಗುವ ಕೆಲಸವನ್ನು ಅವರು ಮಾಡುತ್ತಾರೆ. ಮೊದಲು ಎಸ್ಐಟಿ ರಚನೆಯನ್ನು ಸ್ವಾಗತಿಸಿದ್ದರು. ಯಾವಾಗ ಸತ್ಯ ಹೊರಗೆ ಬರುತ್ತದೆ ಎಂಬ ಸುಳಿವು ಸಿಕ್ಕಿತೋ ಎಲ್ಲರೂ ಧರ್ಮಸ್ಥಳಕ್ಕೆ ದೌಡಾಯಿಸಿ ವೋಟ್ ಬ್ಯಾಂಕ್ ರಾಜಕಾರಣ ಶುರು ಮಾಡಿದರು. ತನಿಖೆ ನಡೆಯುತ್ತಿರುವ ಸಂದರ್ಭದಲ್ಲಿ ಮಧ್ಯ ಪ್ರವೇಶ ಮಾಡಬಾರದು ಎಂಬ ಕನಿಷ್ಠ ಜ್ಞಾನ ಕೂಡ ಅವರಿಗಿಲ್ಲ ಎಂದು ಟೀಕಿಸಿದರು.

ಬಿಜೆಪಿಯವರು ಆರ್‌ಎಸ್‌ಎಸ್ ಅನ್ನು ಗುತ್ತಿಗೆ ಪಡೆದಿಲ್ಲ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸದನದಲ್ಲಿ ಹಾಡಿರುವ ಗೀತೆ ರಾಷ್ಟ್ರಭಕ್ತಿ ಗೀತೆಯೇ ಹೊರತು ಆರ್‌ಎಸ್‌ಎಸ್ ಗೀತೆ ಅಲ್ಲ. ನಮ್ಮದು ಜಾತ್ಯಾತೀತ ರಾಷ್ಟ್ರವಾಗಿದ್ದು, ಎಲ್ಲಾ ಜಾತಿ, ಧರ್ಮಗಳನ್ನೂ ಸಮನಾಗಿ ಕಾಣುವುದು ಹಾಗೂ ಗೌರವಿಸುವುದು ಕಾಂಗ್ರೆಸ್ ಸಂಸ್ಕೃತಿಯಾಗಿದೆ. ಬಿಜೆಪಿಯವರಿಗಿಂತಲೂ ಹೆಚ್ಚಾಗಿ ನಾವು ದೇಶ, ಧರ್ಮವನ್ನು ಪ್ರೀತಿಸುತ್ತೇವೆ ಎಂದರು.

ಅಕ್ಟೋಬರ್‌ನಲ್ಲಿ ಕ್ರಾಂತಿ ನಡೆಯುತ್ತದೆ ಎಂದು ಭವಿಷ್ಯ ನುಡಿದಿದ್ದವರಿಗೆ ಆಗಸ್‌ನಲ್ಲೇ ಕ್ರಾಂತಿಯಾಗಿದೆ. ಅದರ ಬಗ್ಗೆ ಚರ್ಚೆ ಅಗತ್ಯವಿಲ್ಲ. ಬದಲಾವಣೆ ಜಗದ ನಿಯಮ, ಕಾಲ ಕೂಡಿ ಬಂದಾಗ ಆಗುತ್ತದೆ. ಸೂಕ್ತ ಸಮಯದಲ್ಲಿ ನಮ್ಮ ಹೈಕಮಾಂಡ್ ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದು ಹೇಳಿದರು.ಪಕ್ಷ ಸಂಘಟನೆ ಹಾಗೂ ಬಿಜೆಪಿ ಷಡ್ಯಂತ್ರವನ್ನು ಬಯಲಿಗೆಳೆಯಲು ನಮ್ಮ ನಾಯಕರು ಬಿಹಾರಕ್ಕೆ ತೆರಳುತ್ತಿದ್ದಾರೆ. ಇಂದು ಅಥವಾ ನಾಳೆ ಉಪಮುಖ್ಯಮಂತ್ರಿ, 29ಕ್ಕೆ ಮುಖ್ಯಮಂತ್ರಿಗಳು ಬಿಹಾರಕ್ಕೆ ತೆರಳುವರು. ಬಿಜೆಪಿ ಹಾಗೂ ಚುನಾವಣಾ ಆಯೋಗದ ಅಪವಿತ್ರ ಮೈತ್ರಿ ಬಗ್ಗೆ ಬಿಹಾರದ ಜನರಿಗೆ ಮನದಟ್ಟು ಮಾಡಲಿದ್ದಾರೆ ಎಂದು ತಿಳಿಸಿದರು.

ಒಂದೇ ಬಾರಿ ನಾಲ್ಕು ರಾಜ್ಯಗಳ ಚುನಾವಣೆ ಅವಧಿ ಮುಕ್ತಾಯಗೊಂಡಿತ್ತು. ಆದರೆ, ಮೂರು ರಾಜ್ಯಗಳಿಗೆ ಮಾತ್ರ ಮೊದಲು ಚುನಾವಣೆ ಘೋಷಿಸಲಾಯಿತು. ಆರು ತಿಂಗಳ ನಂತರ ಮಹಾರಾಷ್ಟ್ರ ಚುನಾವಣೆಗೆ ದಿನಾಂಕ ನಿಗದಿಪಡಿಸಲಾಯಿತು. ಇದೊಂದು ಷಡ್ಯಂತ್ರವಾಗಿದ್ದು, ಬಿಜೆಪಿ ಹಾಗೂ ಚುನಾವಣಾ ಆಯೋಗ ಮೈತ್ರಿ ಮಾಡಿಕೊಂಡಿವೆ ಎಂಬುದಕ್ಕೆ ಇದು ಸಾಕ್ಷಿ ಎಂದು ಆರೋಪಿಸಿದರು.ಚುನಾವಣಾ ಆಯೋಗದ ಕುತಂತ್ರ ಕರ್ನಾಟಕದಲ್ಲಿ ನಡೆಯಲಿಲ್ಲ. ಬೇರೆ ರಾಜ್ಯದಲ್ಲಿ ಷಡ್ಯಂತ್ರ ಮಾಡಬಹುದು. ನಮ್ಮಲ್ಲಿ ಆಗುವುದಿಲ್ಲ. ರಾಹುಲ್ ಗಾಂಧಿರವರು ಸೂಕ್ತ ದಾಖಲೆಗಳೊಂದಿಗೆ ಮಾತನಾಡಿದರು. ಈಗ ಸುಪ್ರೀಂ ಕೋರ್ಟ್ ವೋಟರ್ ಐಡಿಗೆ ಆಧಾರ್ ಲಿಂಕ್ ಮಾಡಲು ಸೂಚನೆ ನೀಡಿದೆ. ಈ ಕೆಲಸವನ್ನು ಆಯೋಗ ಮೊದಲೇ ಏಕೆ ಮಾಡಲಿಲ್ಲ. ಚುನಾವಣಾ ಆಯೋಗದಲ್ಲಿ ಇನ್ನೂ ಅನೇಕ ಸುಧಾರಣೆಗಳು ಆಗಬೇಕಿದೆ ಎಂದು ಬಾಲಕೃಷ್ಣ ಹೇಳಿದರು.23ಕೆಆರ್ ಎಂಎನ್ 4.ಜೆಪಿಜಿ

ಮಾಗಡಿ ಕ್ಷೇತ್ರ ಶಾಸಕ ಬಾಲಕೃಷ್ಣ