ಖಾಸಗಿ ಶಾಲೆಗಳ ಅಬ್ಬರಕ್ಕೆ ಸೆಡ್ಡು ಹೊಡೆದ ಧರ್ಮಪುರ ಶಾಲೆ

| Published : Apr 08 2025, 12:32 AM IST

ಸಾರಾಂಶ

ಧರ್ಮಪುರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಪ್ರವೇಶಾತಿಗಾಗಿ ಶಿಕ್ಷಕರು ಪ್ರಚಾರದ ವಾಹನದ ಜೊತೆಗೆ ಮನೆ ಮನೆಗೆ ತೆರಳಿ ಪೋಷಕರನ್ನು ಭೇಟಿ ಮಾಡಿದರು.

ಹಳ್ಳಿ ಹಳ್ಳಿ ಸುತ್ತಿ ಪೋಷಕರ ಮನವೊಲಿಸುವ ಯತ್ನ । ಸರ್ಕಾರಿ ಶಾಲೆಯಲ್ಲಿ ದಾಖಲಾತಿ ಆಂದೋಲನ ಆರಂಭರಮೇಶ್ ಬಿದರಕೆರೆ

ಕನ್ನಡಪ್ರಭ ವಾರ್ತೆ ಹಿರಿಯೂರು

ಖಾಸಗಿ ಶಾಲೆಗಳ ಅಬ್ಬರದ ನಡುವೆ ಸೊರಗುತ್ತಿರುವ ಸರ್ಕಾರಿ ಶಾಲೆಗಳ ಬಗ್ಗೆ ಜನರಲ್ಲಿ ನಂಬಿಕೆ ಹುಟ್ಟಬೇಕಾಗಿದೆ. ಯಾವ ಖಾಸಗಿ ಶಾಲೆಗೂ ಕಡಿಮೆಯಿಲ್ಲದಂತೆ ಸರ್ಕಾರಿ ಶಾಲೆಗಳಲ್ಲಿ ಭೋಧನೆ ಮತ್ತು ಕಲಿಕೆಯ ವಾತಾವರಣ ಕಲ್ಪಿಸುವ ತುರ್ತು ಅಗತ್ಯವಿರುವ ಈ ಹೊತ್ತಲ್ಲಿ ತಾಲೂಕಿನ ಧರ್ಮಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು ಈಗಾಗಲೇ ದಾಖಲಾತಿ ಆಂದೋಲನ ಆರಂಭಿಸಿದೆ.

ಶಾಲಾ ದಾಖಲಾತಿಗೆ ಇನ್ನೂ ಮೂರ್ನಾಲ್ಕು ತಿಂಗಳುಗ ಇರುವಾಗಲೇ ಖಾಸಗಿ ಶಾಲೆಯವರು ಚಿತ್ರ ವಿಚಿತ್ರದ ಪ್ರಚಾರ ಕೈಗೊಂಡು ಹಳ್ಳಿ ಹಳ್ಳಿ ಸುತ್ತಿ ಪೋಷಕರ ಮನವೊಲಿಸಿ ಮಕ್ಕಳನ್ನು ತಮ್ಮ ಶಾಲೆಗೆ ಸೇರಿಸಿ ಎಂದು ದುಂಬಾಲು ಬೀಳುವುದು ಮಾಮೂಲು. ಆದರೆ ಬಂದಷ್ಟು ಮಕ್ಕಳು ಬರಲಿ ಎಂದು ಸುಮ್ಮನಿರುವ ಸರ್ಕಾರಿ ಶಾಲೆಗಳ ಪೈಕಿ ಧರ್ಮಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರು, ಎಸ್‌ಡಿಎಂಸಿ ಸದಸ್ಯರು ಖಾಸಗಿ ಶಾಲೆಗಳಂತೆಯೇ ದಾಖಲಾತಿಗಾಗಿ ಮನೆ ಮನೆ ಹಳ್ಳಿ ಹಳ್ಳಿ ಪ್ರಚಾರ ಕೈಗೊಂಡಿದ್ದಾರೆ. ನುರಿತ ಶಿಕ್ಷಕರು, ಸೃಜನಾತ್ಮಕ ಶಿಕ್ಷಣ, ಕಲಿಕಾ ವಾತಾವರಣ, ಕಂಪ್ಯೂಟರ್ ಕೋಚಿಂಗ್ ಹಾಗೂ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಉತ್ತೇಜನ ಹಾಗೂಉತ್ತಮ ಶಾಲಾ ಕಟ್ಟಡಗಳ ಸೌಲಭ್ಯ ಇದೆ ಎಂದು ಈಗಾಗಲೇ ನಾಲ್ಕು ದಿನ ಧರ್ಮಪುರ ಸೇರಿದಂತೆ ಅಕ್ಕಪಕ್ಕದ ಹಳ್ಳಿಗಳಲ್ಲಿ ಪ್ರಚಾರ ಕೈಗೊಳ್ಳಲಾಗಿದೆ. ಎಲ್‌ಕೆಜಿ ಮತ್ತು ಯುಕೆಜಿ ಹಾಗೂ 1 ರಿಂದ 7ನೇ ತರಗತಿಯವರೆಗೆ ಕನ್ನಡ ಮತ್ತು ಆಂಗ್ಲ ಮಾಧ್ಯಮವಿರುವ ಶಾಲೆಗೆ ಇನ್ನಷ್ಟು ಕೊಠಡಿಗಳ ಅವಶ್ಯಕತೆ ಇದೆ. ಕುಡಿಯುವ ನೀರು, ಶೌಚಾಲಯದ ಕೊರತೆ ಇಲ್ಲ.ಕಳೆದ ವರ್ಷ ಇನ್ನೂರಕ್ಕೂ ಹೆಚ್ಚು ಮಕ್ಕಳ ಹಾಜರಾತಿ ಇದ್ದ ಶಾಲೆಗೆ ಈ ಬಾರಿ ಇನ್ನಷ್ಟು ಹೆಚ್ಚಿನ ಪ್ರವೇಶಾತಿ ಕೊಡಿಸಲು ಮುಖ್ಯ ಶಿಕ್ಷಕರು ಸೇರಿದಂತೆ ಶಾಲೆಯ ಹತ್ತು ಶಿಕ್ಷಕರು, ಎಸ್‌ಡಿಎಂಸಿ ಅಧ್ಯಕ್ಷರು, ಸದಸ್ಯರು ಶ್ರಮಿಸುತ್ತಿದ್ದಾರೆ. ಈಗಾಗಲೇ 2025-26ರ ಸಾಲಿನ ಪ್ರವೇಶಾತಿ ಶುರುವಾಗಿದ್ದು, ನೂರಕ್ಕೂ ಹೆಚ್ಚು ಮಕ್ಕಳ ಪೋಷಕರನ್ನು ಶಾಲಾ ಸಿಬ್ಬಂದಿಗಳು ಭೇಟಿ ಮಾಡಿ ಸರ್ಕಾರಿ ಶಾಲೆಗೆ ತಮ್ಮ ಮಕ್ಕಳನ್ನು ಸೇರಿಸಿ ಎಂದು ಮನವೊಲಿಸುವ ಕೆಲಸ ಮಾಡಿದ್ದಾರೆ. ಸುಮಾರು ಒಂಬತ್ತು ದಶಕದ ಈ ಶಾಲೆಯಲ್ಲಿ ಸದೃಢ

ಎಸ್‌ಡಿಎಂಸಿ ಕಮಿಟಿ ಹಾಗೂ ಶಾಲೆಯ ಪ್ರವೇಶಾತಿ ಹೆಚ್ಚಳಕ್ಕೆ ಶಿಕ್ಷಕರ ಪ್ರಯತ್ನ ಮೆಚ್ಚುವಂತಹದು.

ಈ ಬಗ್ಗೆ ಶಾಲೆಯ ಬಡ್ತಿ ಮುಖ್ಯ ಶಿಕ್ಷಕಿ ಬಿ.ರತ್ನಮ್ಮ ಮಾತನಾಡಿ, ನಮ್ಮ ಶಾಲೆಯಲ್ಲಿ ಕಲಿಕೆಗೆ ಪೂರಕ ವಾತಾವರಣವಿದ್ದು ಉತ್ತಮ ಬೋಧನೆಯ ಶಿಕ್ಷಕರಿದ್ದಾರೆ. ಎಲ್ಲಾ ಶಿಕ್ಷಕರು ಪ್ರವೇಶಾತಿ ಹೆಚ್ಚಳಕ್ಕೆ ಸ್ವಯಂ ಪ್ರೇರಿತರಾಗಿ ಓಡಾಡಿ ಪೋಷಕರಿಗೆ ಮನವಿ ಮಾಡಲಾಗುತ್ತಿದೆ. ಅಕ್ಕಪಕ್ಕದ ಹಳ್ಳಿಯಿಂದ ಬರುವ ನಿರ್ಧಾರ ಮಾಡಿರುವ ಎಲ್‌ಕೆಜಿ, ಯುಕೆಜಿ ಮಕ್ಕಳಿಗೆ ವಾಹನದ ಸಮಸ್ಯೆ ಇದೆ. ಮೂರ್ನಾಲ್ಕು ಖಾಸಗಿ ಶಾಲೆಗಳ ನಡುವೆಯೂ ನಾವು ಸರ್ಕಾರಿ ಶಾಲೆಯ ಪ್ರವೇಶಾತಿ ಹೆಚ್ಚಳಕ್ಕೆ ಪ್ರಯತ್ನ ಮಾಡುತ್ತಿದ್ದೇವೆ ಎಂದರು.

ಧರ್ಮಪುರದಲ್ಲಿ ಉತ್ತಮ ಗುಣಮಟ್ಟದ ಶಾಲೆ

ಕ್ಷೇತ್ರ ಶಿಕ್ಷಣಾಧಿಕಾರಿ ಸಿಎಂ ತಿಪ್ಪೇಸ್ವಾಮಿ ಪ್ರತಿಕ್ರಿಯಿಸಿ ಧರ್ಮಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಂಗ್ಲ ಮಾಧ್ಯಮ ಭಾಷೆಯೂ ಇದ್ದು ಎಲ್ಲಾ ರೀತಿಯ ಕಲಿಕಾ ಸೌಲಭ್ಯ ಹೊಂದಿರುವ ಉತ್ತಮ ಗುಣಮಟ್ಟದ ಶಾಲೆಯಾಗಿದೆ. ಆ ಶಾಲೆಯ ಶಿಕ್ಷಕರು ಹೆಚ್ಚು ಮಕ್ಕಳನ್ನು ಶಾಲೆಗೆ ಸೇರಿಸುವ ಸಂಕಲ್ಪದೊಂದಿಗೆ ಕೆಲಸ ಮಾಡುತ್ತಿದ್ದಾರೆ. ಹಾಗಾಗಿ ಸದರಿ ಶಾಲೆಯ ಶಿಕ್ಷಕರು ಮನೆ ಮನೆಗೆ ತೆರಳಿ ಮಕ್ಕಳನ್ನು ಶಾಲೆಗೆ ಸೇರಿಸುವಂತೆ ಜಾಗೃತಿ ಮೂಡಿಸುತ್ತಿದ್ದಾರೆ. ಇದೀಗ ಸುಮಾರು 11 ಕಂಪನಿಗಳು ಆ ಶಾಲೆಯನ್ನು ದತ್ತು ತೆಗೆದುಕೊಂಡು ಅಭಿವೃದ್ಧಿ ಮಾಡಲು ಮುಂದಾಗಿದ್ದು ಕಂಪ್ಯೂಟರ್ ಲ್ಯಾಬ್ ನೀಡಿ ವಾರದಲ್ಲಿ ಎರಡು ದಿನ ತರಬೇತಿಯನ್ನೂ ನೀಡುತ್ತಿದ್ದಾರೆ ಎಂದರು.