ಧರ್ಮಸ್ಥಳ: ಟೂಲ್‌ಕಿಟ್‌ ಪಡೆದು ದಾಳಿ: ಜೋಶಿ ಆರೋಪ

| Published : Aug 29 2025, 01:00 AM IST

ಧರ್ಮಸ್ಥಳ: ಟೂಲ್‌ಕಿಟ್‌ ಪಡೆದು ದಾಳಿ: ಜೋಶಿ ಆರೋಪ
Share this Article
  • FB
  • TW
  • Linkdin
  • Email

ಸಾರಾಂಶ

ಧರ್ಮಸ್ಥಳ ವಿಚಾರವಾಗಿ ಕಾಂಗ್ರೆಸ್ ಬುದ್ಧಿ ಇಲ್ಲದಂತೆ ವರ್ತನೆ ತೋರುತ್ತಿದೆ. ಕಾಮನ್‌ಸೆನ್ಸ್ ಇಲ್ಲದವರಂತೆ ಕಾಂಗ್ರೆಸ್ ಸರ್ಕಾರ ನಡೆದುಕೊಂಡಿದೆ. ಎಸ್ಐಟಿ ಮಾಡಿ ಅಂಥ ಯಾರು ಹೇಳಿದ್ದರು ನಿಮಗೆ? ಒಬ್ಬ ಯೂಟ್ಯೂಬರ್ ನಂಬಿ ಕಾಂಗ್ರೆಸ್ ಹಳ್ಳಕ್ಕೆ ಬಿದ್ದಿದೆ. ಅತ್ಯಂತ ಬುದ್ಧಿಹೀನರು ಸಹ ಈ ರೀತಿ ನಡೆದುಕೊಳ್ಳುವುದಿಲ್ಲ. ವಿದೇಶದಲ್ಲಿ ಧರ್ಮಸ್ಥಳದ ಬಗ್ಗೆ ಅಪಪ್ರಚಾರ ನಡೆಯುತ್ತಿದೆ.

ಹುಬ್ಬಳ್ಳಿ: ಧರ್ಮಸ್ಥಳ ವಿಚಾರದಲ್ಲಿ ಹಿಂದೂ ಧಾರ್ಮಿಕ ಭಾವನೆ ಮೇಲೆ ಟೂಲ್ ಕಿಟ್ ಪಡೆದು ಈ ದಾಳಿ ಮಾಡಿದೆ. ಎಡಪಂಥೀಯರು ಟೂಲ್ ಕಿಟ್ ಪಡೆದಿದ್ದಾರೆ, ಇದಕ್ಕೆ ಕಾಂಗ್ರೆಸ್ ಸಹಾಯ ಮಾಡಿದೆ. ಇದರ ಹಿಂದೆ ಕಾಣದ ಕೈಗಳಿವೆ, ಇದನ್ನು ಮೊದಲು ಪತ್ತೆ ಹಚ್ಚಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆರೋಪಿಸಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಟೂಲ್ ಕಿಟ್ ಮಾಡಿದವರು ಯಾರು? ಇದರ ಹಿಂದೆ ದೊಡ್ಡ ಕಾಣದ ಕೈಗಳಿವೆ. ಅವುಗಳನ್ನು ಪತ್ತೆ ಹಚ್ಚಬೇಕು ಎಂದರು.

ಧರ್ಮಸ್ಥಳ ವಿಚಾರವಾಗಿ ಕಾಂಗ್ರೆಸ್ ಬುದ್ಧಿ ಇಲ್ಲದಂತೆ ವರ್ತನೆ ತೋರುತ್ತಿದೆ. ಕಾಮನ್‌ಸೆನ್ಸ್ ಇಲ್ಲದವರಂತೆ ಕಾಂಗ್ರೆಸ್ ಸರ್ಕಾರ ನಡೆದುಕೊಂಡಿದೆ. ಎಸ್ಐಟಿ ಮಾಡಿ ಅಂಥ ಯಾರು ಹೇಳಿದ್ದರು ನಿಮಗೆ? ಒಬ್ಬ ಯೂಟ್ಯೂಬರ್ ನಂಬಿ ಕಾಂಗ್ರೆಸ್ ಹಳ್ಳಕ್ಕೆ ಬಿದ್ದಿದೆ. ಅತ್ಯಂತ ಬುದ್ಧಿಹೀನರು ಸಹ ಈ ರೀತಿ ನಡೆದುಕೊಳ್ಳುವುದಿಲ್ಲ. ವಿದೇಶದಲ್ಲಿ ಧರ್ಮಸ್ಥಳದ ಬಗ್ಗೆ ಅಪಪ್ರಚಾರ ನಡೆಯುತ್ತಿದೆ. ಎಸ್ಐಟಿ ಅಧಿಕಾರಿಗಳ ಮೇಲೆ ಕನಿಕರ ಮೂಡುತ್ತಿದೆ. ಯಾರೋ ಹೇಳಿದರೂ ಎಂದು ದೊಡ್ಡ ದೊಡ್ಡ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಎಸ್‌ಐಟಿ ಬಗ್ಗೆಯೇ ಹೈಕೋರ್ಟ್‌ ನೇತೃತ್ವದಲ್ಲಿ ಮೊದಲು ತನಿಖೆಯಾಗಬೇಕು. ಹಿಂದೂ ಧರ್ಮ ಸಂಸ್ಕೃತಿ ನಾಶ ಮಾಡಲು ಈ ರೀತಿ ಪ್ಲ್ಯಾನ್‌ ಮಾಡಿ ಹೀಗೆ ಮಾಡಲಾಗುತ್ತಿದೆ ಎಂದರು.

ಈ ಪ್ರಕರಣ ಎನ್‌ಐಎಗೆ ಬರುವ ಸಾಧ್ಯತೆ ಬಗ್ಗೆ ನನಗೆ ಗೊತ್ತಿಲ್ಲ. ನಮ್ಮ ಶ್ರದ್ಧಾಕೇಂದ್ರಗಳ ಮೇಲೆ ವ್ಯವಸ್ಥಿತ ದಾಳಿ ನಡೆದಿದೆ. ಹಂತ ಹಂತವಾಗಿ ದಾಳಿ ನಡೆದಿದೆ. ವ್ಯವಸ್ಥಿತ ಪಿತೂರಿ ನಡೆದಿದೆ. ಸರ್ಕಾರದಲ್ಲಿರುವವರು ಕೂಡ ಈ ಷಡ್ಯಂತ್ರದಲ್ಲಿ ಭಾಗಿಯಾಗಿರುವ ಸಾಧ್ಯತೆಗಳಿರುವುದರಿಂದ ಹೈಕೋರ್ಟ್‌ ಸುಪರ್ದಿಯಲ್ಲೇ ತನಿಖೆಯಾಗಬೇಕು. ಇದರ ಹಿಂದೆ ಸಂಸದ ಸೆಂಥಿಲ್‌ ಇದ್ದಾರೆ ಎಂಬ ಆರೋಪವಿದೆ. ಹೀಗಾಗಿ ಸಮಗ್ರ ತನಿಖೆಯಾಗಬೇಕಿದೆ ಎಂದರು.

ಡಿಕೆಶಿ ಬಿಜೆಪಿಗೆ ಬರಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ ಬಿಜೆಪಿಗೆ ಬರಲ್ಲ. ಸೈದ್ಧಾಂತಿಕವಾಗಿ ಅವರು ನಮ್ಮನ್ನು ವಿರೋಧಿಸುತ್ತಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ಡಿ.ಕೆ. ಶಿವಕುಮಾರ ಬಿಜೆಪಿಗೆ ಬರುವ ಪ್ರಶ್ನೆಯೇ ಇಲ್ಲ. ಸೈದ್ಧಾಂತಿಕವಾಗಿ ನಮ್ಮನ್ನು ವಿರೋಧಿಸುತ್ತಾರೆ. ಅಪ್ಪಿ ತಪ್ಪಿ ನಮ್ಮ ಸಂಘದ ಪ್ರಾರ್ಥನೆ ಹೇಳಿದ್ದಾರೆ. ಅದಕ್ಕೆ ಎಲ್ಲರೂ ಮುಗಿಬಿದ್ದಿದ್ದಾರೆ. ಇದರಿಂದ ಗೊಂದಲಕ್ಕೊಳಗಾಗಿದ್ದಾರೆ; ಗಾಬರಿಗೊಳಗಾಗಿದ್ದಾರೆ. ಅವರಿಗೆ ಅಧಿಕಾರ ಕೊಡುತ್ತಾರೋ ಇಲ್ವೋ ಎನ್ನುವ ಗೊಂದಲ ಇದೆ. ಹೀಗಾಗಿ ಏನೇನೋ ಹೇಳುತ್ತಿದ್ದಾರೆ ಎಂದರು.

ಯಾವುದೇ ಕಾರಣಕ್ಕೂ ಈ ಸರ್ಕಾರವನ್ನು ಕೆಡವುವ ಕೆಲಸ ಬಿಜೆಪಿ ಮಾಡಲ್ಲ. ಸರ್ಕಾರ ಐದು ವರ್ಷ ಪೂರ್ಣಗೊಳಿಸಲಿ ಎನ್ನುವುದೇ ನಮ್ಮ ಆಶಯ ಎಂದರು.

ಡಿ.ಕೆ. ಶಿವಕುಮಾರ ಅತ್ಯಂತ ಕನಫ್ಯೂಸ್ಡ್‌ ಮ್ಯಾನ್‌. ಚಾಮುಂಡಿಬೆಟ್ಟ ಸರ್ಕಾರಕ್ಕೆ ಸೇರಿದ್ದು ಎಂದು ಹೇಳುತ್ತಾರೆ. ಈ ಕನಫ್ಯೂಸ್‌ನಲ್ಲೇ ಸರ್ಕಾರ ಮುಗಿದುಹೋಗುತ್ತದೆ. 2028ರಲ್ಲಿ ಬಿಜೆಪಿಯೇ ಅಧಿಕಾರಕ್ಕೆ ಬರುತ್ತದೆ ಎಂದು ಭವಿಷ್ಯ ನುಡಿದರು.

ಜನವರಿಯೊಳಗೆ ಪ್ಲೈಒವರ್‌ ಪೂರ್ಣ: ಹುಬ್ಬಳ್ಳಿ ಚೆನ್ನಮ್ಮ ವೃತ್ತದ ಫ್ಲೈಒವರ್ ಮುಂಬರುವ ಮಾರ್ಚ್ ತಿಂಗಳಲ್ಲಿ ಮುಗಿಸುವುದಾಗಿ ಗುತ್ತಿಗೆದಾರರು ಹೇಳಿದ್ದಾರೆ. ಆದರೆ, ನಾವು ಜನವರಿ 1ರೊಳಗೆ ಮುಗಿಸಿಕೊಡುವಂತೆ ಹೇಳಿದ್ದೇವೆ. ಸ್ಥಳೀಯ ಸಮಸ್ಯೆಗಳನ್ನು ಸರಿಪಡಿಸಿಕೊಟ್ಟಿದ್ದೇವೆ. ಚೆನ್ನಮ್ಮ ವೃತ್ತದಲ್ಲಿ ಸುರಕ್ಷತಾ ಕ್ರಮಗಳನ್ನು ತೆಗೆದುಕೊಂಡು ಕಾಮಗಾರಿ ನಡೆಸುವಂತೆ ಸೂಚನೆ ನೀಡಿದ್ದೇವೆ. ಗಣೇಶ ಮೂರ್ತಿಗಳ ಮೆರವಣಿಗೆ ಸಮಯದಲ್ಲಿ ಸಂಚಾರ ದಟ್ಟಣೆ ಕಡಿಮೆ ಇರುವ ಕಡೆ ಕಾಮಗಾರಿ ಮಾಡುವುದಾಗಿ ಹೇಳಿದ್ದಾರೆ. ಸೆಪ್ಟೆಂಬರ್ ತಿಂಗಳಲ್ಲಿ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.