ಧರ್ಮಸ್ಥಳದ ವಿಂಟೇಜ್ ಕಾರುಗಳ ಪ್ರದರ್ಶನ

| Published : Sep 14 2024, 01:55 AM IST

ಸಾರಾಂಶ

ನಗರದ ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ನಡೆಯುತ್ತಿರುವ 3ನೇ ಆವೃತ್ತಿಯ ‘ಅಂತಾರಾಷ್ಟ್ರೀಯ ಆಟೋ ಎಕ್ಸ್‌ಪೋ’ದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳದ ‘ಪಯಣ’ ವಸ್ತು ಸಂಗ್ರಹಾಲಯದ ಹತ್ತು ಹಳೆ (ವಿಂಟೇಜ್) ಕಾರುಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಗರದ ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ನಡೆಯುತ್ತಿರುವ 3ನೇ ಆವೃತ್ತಿಯ ‘ಅಂತಾರಾಷ್ಟ್ರೀಯ ಆಟೋ ಎಕ್ಸ್‌ಪೋ’ದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳದ ‘ಪಯಣ’ ವಸ್ತು ಸಂಗ್ರಹಾಲಯದ ಹತ್ತು ಹಳೆ (ವಿಂಟೇಜ್) ಕಾರುಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ.

ಶುಕ್ರವಾರ ಪ್ರಾರಂಭವಾಗಿರುವ ಆಟೋ ಪ್ರದರ್ಶನವು ಸೆ.16 ರ ಸೋಮವಾರದವರೆಗೆ ನಡೆಯಲಿದೆ. ಪ್ರದರ್ಶನದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರ ಸಂಗ್ರಹದ ಹತ್ತು ಅಪರೂಪದ, ಪುರಾತನ ಕಾರುಗಳು ಪ್ರದರ್ಶನದಲ್ಲಿ ಎಲ್ಲರ ಗಮನ ಸೆಳೆಯುತ್ತಿವೆ.

ಅವುಗಳಲ್ಲಿ ವಿಶೇಷವಾಗಿ ಕರ್ನಾಟಕ ಸರ್ಕಾರದ 1954ರ ಡಾಡ್ಜ್ ಕಿಂಗ್ಸ್‌ವೇ ಕಾರು ವಿಶೇಷವಾಗಿದ್ದು, ಕರ್ನಾಟಕ ಸ್ಟೇಟ್ ಕಾರ್ ಎಂದು ಬರೆದಿರುವ ಮತ್ತು ರಾಜ್ಯ ಸರ್ಕಾರದ ಲೋಗೋ ಹೊಂದಿದೆ. ಈ ಕಾರು ಈಗ ಡಾ। ವೀರೇಂದ್ರ ಹೆಗ್ಗಡೆಯವರ ಸಂಗ್ರಹಾಲಯದಲ್ಲಿರುವ ಈ ಕಾರು, ಮಾಜಿ ಪ್ರಧಾನಿ ಇಂದಿರಾಗಾಂಧಿ ರಾಜ್ಯಕ್ಕೆ ಬಂದಾಗ ಇದೇ ಕಾರಿನಲ್ಲಿ ಸಂಚಾರ ಮಾಡಿದ್ದರು. ಅಲ್ಲದೇ ಕರ್ನಾಟಕ ರಾಜ್ಯ ಸರ್ಕಾರ ಖರೀದಿಸಿದ ಮೊಟ್ಟ ಮೊದಲ ಕಾರು ಎಂಬ ಹೆಗ್ಗಳಿಕೆಯೂ ಇದು ಪೆಡೆದಿದೆ.

ಉಳಿದಂತೆ ಜೊಕೊಸ್ಲೊವಾಕಿಯಾ ಮೂಲದ ಸ್ಕೋಡಾ ಪಾಪ್ಯುಲರ್‌ ರೋಡ್‌ಸ್ಟರ್‌, ಇಂಗ್ಲೆಂಡ್‌ ಮೂಲದ ಮೊರಿಸ್‌ ಉಡಿ, ಯುನೈಟೆಡ್‌ ಕಿಂಗ್‌ಡಂ ಮೋರಿಸ್ 8 ಸೀರೀಸ್ ಟೂರರ್‌, ಇಟಲಿಯ ಫಿಯೆಟ್ 501 ಮತ್ತು ಫಿಯೆಟ್‌ 521, ಅಮೆರಿಕದ ಷವರ್ಲೆ ಇಂಪಾಲ ಮತ್ತು ಷವರ್ಲೆ ಬೆಲ್‌ ಏರ್‌, ರಷ್ಯಾದ ಗ್ಯಾಜ್‌-69 ಹಾಗೂ ಫ್ರಾನ್ಸ್‌ ಮೂಲದ ಪಿಜೋಟ್‌ 404 ಬರ್ಲಿನ್‌ ಗ್ರ್ಯಾನ್‌ ಟ್ಯೂರಿಸ್ಮೆ ಹಳೆದ ಕಾರುಗಳು ಪ್ರದರ್ಶನದಲ್ಲಿ ಸಾರ್ವಜನಿಕರನ್ನು ಸೆಳೆದವು.

ಆಟೋ ಎಕ್ಸ್‌ಪೋದಲ್ಲಿ ಬೆಳಗ್ಗೆ 10ರಿಂದ ಸಂಜೆ 6 ರವರೆಗೆ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶವಿದ್ದು, ಕಾರು, ಬೈಕು ಸೇರಿದಂತೆ ಇತರೆ ವಾಹನಗಳ ಬಿಡಿಭಾಗಗಳ ಸುಮಾರು 40ಕ್ಕೂ ಹೆಚ್ಚು ಪ್ರದರ್ಶನ ಮತ್ತು ಮಾರಾಟದ ಮಳಿಗೆಗಳಿವೆ. ಭಾರತದಲ್ಲೇ ತಯಾರಿಸಿದ ಪೆಟ್ರೊಲ್‌, ಡಿಸೇಲ್‌ ಮತ್ತು ಎಲೆಕ್ಟ್ರಿಕ್‌ ಹೊಸ ವಿನ್ಯಾಸದ ಕಾರು, ಬೈಕ್‌ಗಳು ಇಲ್ಲಿವೆ. 50 ಸಾವಿರದಿಂದ ಲಕ್ಷಾಂತರ ರು. ಬೆಲೆಯ ಕಾರು, ಬೈಕ್‌ಗಳು ಪ್ರದರ್ಶನದಲ್ಲಿದ್ದು, ನೋಡುಗರ ಆಕರ್ಷಣೆಯ ಕೇಂದ್ರವಾಗಿವೆ.