ಧರ್ಮಸ್ಥಳ ಪ್ರಕರಣ-ಸರ್ಕಾರದಿಂದ ಹಿಂದೂ ಧರ್ಮಕ್ಕೆ ಅಪಮಾನ: ಬಿವೈಆರ್‌

| Published : Sep 03 2025, 01:02 AM IST

ಸಾರಾಂಶ

ಅರ್ಬನ್ ನಕ್ಸಲರ ಸಹಕಾರದಿಂದ ಯಾವುದೇ ಪುರಾವೆಗಳಿಲ್ಲದೆ, ಆರೋಪಿಯ ಹಿನ್ನೆಲೆಯನ್ನು ಪರಿಗಣಿಸದೆ ಹಿಂದೂ ಧರ್ಮಕ್ಕೆ ಅವಮಾನ ಮಾಡುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ ಎಂದು ಶಿವಮೊಗ್ಗ ಲೋಕಸಭಾ ಸಂಸದ ಬಿ.ವೈ. ರಾಘವೇಂದ್ರ ಆರೋಪಿಸಿದ್ದಾರೆ.

ಕುಂದಾಪುರ: ಒಂದು ಧರ್ಮದ ತುಷ್ಟೀಕರಣಕ್ಕಾಗಿ ಬಹುಸಂಖ್ಯಾತ ಹಿಂದೂ ಧರ್ಮವನ್ನು ತುಳಿಯುವಂತಹ ಷಡ್ಯಂತ್ರ ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ನಡೆಯುತ್ತಿದೆ. ಧರ್ಮಸ್ಥಳದ ಮಂಜುನಾಥನ ಸನ್ನಿಧಾನಕ್ಕೆ ಕಳಂಕ ತೆರಬೇಕೆಂದು ಅರ್ಬನ್ ನಕ್ಸಲರ ಸಹಕಾರದಿಂದ ಯಾವುದೇ ಪುರಾವೆಗಳಿಲ್ಲದೆ, ಆರೋಪಿಯ ಹಿನ್ನೆಲೆಯನ್ನು ಪರಿಗಣಿಸದೆ ಹಿಂದೂ ಧರ್ಮಕ್ಕೆ ಅವಮಾನ ಮಾಡುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ ಎಂದು ಶಿವಮೊಗ್ಗ ಲೋಕಸಭಾ ಸಂಸದ ಬಿ.ವೈ. ರಾಘವೇಂದ್ರ ಆರೋಪಿಸಿದ್ದಾರೆ.ಬೈಂದೂರಿನ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧರ್ಮಸ್ಥಳ ಪ್ರಕರಣದಲ್ಲಿ ಹಿಂದೂಗಳ ಭಾವನೆಗಳ ಜೊತೆಗೆ ಚೆಲ್ಲಾಟವಾಡದೆ, ಅವರ ತಾಳ್ಮೆ ಪರೀಕ್ಷಿಸದೆ ಆದಷ್ಟು ಬೇಗ ತನಿಖೆ ಮುಗಿಸಿ ಸತ್ಯಾಂಶ ಸಮಾಜಕ್ಕೆ ತಿಳಿಸುವ ಕೆಲಸವನ್ನು ಮಾಡಬೇಕು ಎಂದು ಅವರು ಒತ್ತಾಯಿಸಿದರು.ಲೇಖಕಿ ಬಾನು ಮುಷ್ತಾಕ್ ಅವರನ್ನು ಮೈಸೂರು ದಸರಾ ಉದ್ಘಾಟಕರಾಗಿ ಆಯ್ಕೆ ಮಾಡಿರುವ ಸರ್ಕಾರದ ನಡೆಯ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಒಂದು ಧರ್ಮದ ತುಷ್ಟೀಕರಣಕ್ಕಾಗಿ, ಆ ಧರ್ಮದ ವಿಶ್ವಾಸವನ್ನು ಗಳಿಸಲು ಕಾಂಗ್ರೆಸ್ ಈ ರೀತಿಯ ರಾಜಕಾರಣ ಮಾಡುತ್ತಿರುವುದು ಇದೇನು ಹೊಸದಲ್ಲ. ಹಿಂದೆಯೂ ಕೂಡ ಕಾಂಗ್ರೆಸ್ ಸರ್ಕಾರ ಹೀಗೆಯೆ ನಡೆದುಕೊಂಡಿದೆ. ಗ್ಯಾರಂಟಿ ಆಶ್ವಾಸನೆಗಳನ್ನು ನೀಡಿ ಬಹುಮತದಿಂದ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ದರ್ಪ, ಅಹಂಕಾರವನ್ನು ಬಿಟ್ಟು ಅಭಿವೃದ್ದಿ ಕಾರ್ಯಗಳ ಬಗ್ಗೆ ಗಮನಹರಿಸಬೇಕು. ಗ್ಯಾರಂಟಿಯ ಜೊತೆ ಅಭಿವೃದ್ದಿ ಕೆಲಸಗಳನ್ನು ಮಾಡಬೇಕು ಎಂದರು.

ಯಾವುದೇ ಕ್ಷಣದಲ್ಲಾದರೂ ಕೊಲ್ಲೂರು ಕಾರಿಡಾರ್ ಘೋಷಣೆ!

ಕೊಲ್ಲೂರು ಕಾರಿಡಾರ್ ಕುರಿತಂತೆ ಪ್ರತಿಕ್ರಿಯಿಸಿದ ಅವರು, ಚುನಾವಣಾಪೂರ್ವದಲ್ಲಿ ನಾವು ಕೊಟ್ಟ ಭರವಸೆಯಂತೆ ಕೊಲ್ಲೂರು ಕಾರಿಡಾರ್ ಘೋಷಣೆ ಮಾಡಿಯೇ ತೀರುತ್ತೇವೆ. ಬೈಂದೂರು ಕ್ಷೇತ್ರದಲ್ಲಿ ಪ್ರವಾಸೋದ್ಯಮ ಅಭಿವೃದ್ದಿಗಳಿಗೆ ವಿಫುಲ ಅವಕಾಶಗಳಿವೆ. ಕೊಲ್ಲೂರು ಕಾರಿಡಾರ್ ಅನ್ನು ತಾಯಿ ಕೊಲ್ಲೂರು ಮೂಕಾಂಬಿಕೆಯ ಸನ್ನಿಧಾನಕ್ಕೆ ಕೇಂದ್ರ ಸರ್ಕಾರ ಘೋಷಣೆ ಮಾಡುತ್ತದೆ ಎನ್ನುವ ವಿಶ್ವಾಸವಿದೆ ಎಂದು ಅವರು ಹೇಳಿದರು.ದೆಹಲಿಯಲ್ಲಿ ಈ ಬಗ್ಗೆ ಚರ್ಚೆಗಳು ನಡೆದಿವೆ. ರಾಜ್ಯ ಸರ್ಕಾರದಿಂದಲೂ ಪ್ರಸ್ತಾವನೆ ಹೋಗಿದೆ. ಕೇಂದ್ರ ಪ್ರವಾಸೋದ್ಯಮ ಸಚಿವರು ಹಾಗೂ ಹಣಕಾಸು ಸಚಿವರು ಜೊತೆಗೂಡಿ ಇದಕ್ಕೊಂದು ಅಂತಿಮ ಸ್ಪರ್ಶ ಕೊಡುವ ತೀರ್ಮಾನ ನಡೆಸುತ್ತಿದ್ದಾರೆ. ಹೀಗಾಗಿ ಯಾವುದೇ ಕ್ಷಣದಲ್ಲಾದರೂ ಕೊಲ್ಲೂರು ಕಾರಿಡಾರ್ ಘೋಷಣೆಯಾಗಬಹುದು ಎಂದು ಬಿವೈಆರ್ ಭರವಸೆ ವ್ಯಕ್ತಪಡಿಸಿದರು.