ಧರ್ಮಸ್ಥಳ ಪ್ರಕರಣ: ಹೈಕೋರ್ಟ್‌ ನ್ಯಾಯಾಧೀಶರಿಂದ ತನಿಖೆಗೆ ಆಗ್ರಹ

| Published : Jul 30 2025, 12:45 AM IST

ಧರ್ಮಸ್ಥಳ ಪ್ರಕರಣ: ಹೈಕೋರ್ಟ್‌ ನ್ಯಾಯಾಧೀಶರಿಂದ ತನಿಖೆಗೆ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ದೊಡ್ಡಬಳ್ಳಾಪುರ: ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ನೂರಾರು ಮಹಿಳೆಯರು, ಯುವತಿಯರ ಮೇಲಿನ ಅತ್ಯಾಚಾರ, ಕೊಲೆ ಮತ್ತು ನಿಗೂಢ ಕಣ್ಮರೆ ಪ್ರಕರಣವನ್ನು ಹೈಕೋರ್ಟ್ ನ್ಯಾಯಾಧೀಶರ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ನಗರದ ತಾಲೂಕು ಕಚೇರಿ ವೃತ್ತದಲ್ಲಿ ಸಂವಿಧಾನ ರಕ್ಷಣೆಗಾಗಿ ನಾಗರಿಕರ ವೇದಿಕೆ ವತಿಯಿಂದ ಪ್ರತಿಭಟನೆ ನಡೆಯಿತು.

ದೊಡ್ಡಬಳ್ಳಾಪುರ: ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ನೂರಾರು ಮಹಿಳೆಯರು, ಯುವತಿಯರ ಮೇಲಿನ ಅತ್ಯಾಚಾರ, ಕೊಲೆ ಮತ್ತು ನಿಗೂಢ ಕಣ್ಮರೆ ಪ್ರಕರಣವನ್ನು ಹೈಕೋರ್ಟ್ ನ್ಯಾಯಾಧೀಶರ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ನಗರದ ತಾಲೂಕು ಕಚೇರಿ ವೃತ್ತದಲ್ಲಿ ಸಂವಿಧಾನ ರಕ್ಷಣೆಗಾಗಿ ನಾಗರಿಕರ ವೇದಿಕೆ ವತಿಯಿಂದ ಪ್ರತಿಭಟನೆ ನಡೆಯಿತು.

ವೇದಿಕೆ ಸಂಚಾಲಕ ಆರ್.ಚಂದ್ರತೇಜಸ್ವಿ ಮಾತನಾಡಿ, ಮಹಿಳೆಯರ ಮೇಲಿನ ದೌರ್ಜನ್ಯಗಳನ್ನು ತಡೆಗಟ್ಟಲು 2016 ರಲ್ಲಿ ಸರ್ಕಾರ ವಿ.ಎಸ್.ಉಗ್ರಪ್ಪ ನೇತೃತ್ವದಲ್ಲಿ ಒಂದು ಸಮಿತಿಯನ್ನು ರಚನೆ ಮಾಡಿತ್ತು. 2018 ರಲ್ಲಿ ಸಮೊತಿಯು 300ಕ್ಕೂ ಹೆಚ್ಚು ಶಿಫಾರಸುಗಳನ್ನು ಮಾಡಿತ್ತು. ಆದರೆ, ಆಳುವ ಸರ್ಕಾರಗಳು ಅದನ್ನು ಮೂಲೆಗೆ ಎಸೆಯಿತು ಎಂದು ಆಕ್ರೋಶ ವ್ಯಕ್ತಪಡಿಸಿದರು.ಉಗ್ರಪ್ಪ ಸಮಿತಿಯ ಸದಸ್ಯರಾಗಿದ್ದ ಪ್ರಭಾ ಬೆಳವಂಗಲ ಮಾತನಾಡಿ, ಧರ್ಮಸ್ಥಳದಲ್ಲಿ 2012ರಲ್ಲಿ ನಡೆದ ಸೌಜನ್ಯ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿತ್ತು. ಧರ್ಮಸ್ಥಳ ಸುತ್ತಮುತ್ತ ನೂರಾರು ಅಸಹಜ ಸಾವುಗಳು ಸಂಭವಿಸುತ್ತಿರುವ ಕುರಿತು ವರದಿಗಳಾಗಿದ್ದವು. ಅದರಲ್ಲಿ ಉಜಿರೆ ಸಮೀಪದ ಪಾಂಗಳದ ಅಪ್ರಾಪ್ತ ವಿದ್ಯಾರ್ಥಿನಿ ಸೌಜನ್ಯಳ ಅತ್ಯಾಚಾರ, ಕೊಲೆ ಮತ್ತು ಅದನ್ನು ಮುಚ್ಚಿ ಹಾಕಲು ನಡೆಸಿದ ವ್ಯವಸ್ಥಿತ ಪ್ರಯತ್ನಗಳು ಮರೆಯಲಾರದ ಸಂಗತಿಗಳು. ಅಮಾಯಕನೊಬ್ಬನನ್ನು ಆರೋಪಿ ಎಂದು ಹೆಸರಿಸಿ ಜೈಲಿಗೆ ಹಾಕಿದ್ದು, ದುರುದ್ದೇಶಪೂರ್ವಕವಾಗಿ ಸಾಕ್ಷಿ ನಾಶಮಾಡಿದ್ದರ ವಿರುದ್ಧ ವ್ಯಾಪಕವಾಗಿ ಪ್ರತಿಭಟನೆಗಳು ಕೂಡ ನಡೆದಿದ್ದವು. ನಂತರ ಪ್ರಕರಣವನ್ನು ಸಿಬಿಐಗೆ ವಹಿಸಿ, ತನಿಖೆ ನಡೆದು ಸಿಬಿಐ ನ್ಯಾಯಾಲಯದ ತೀರ್ಪು ಕೂಡ ಹೊರ ಬಂದಿದೆ. ತೀರ್ಪಿನ ಅನುಸಾರವಾಗಿ ಅಮಾಯಕನೆಂದು ಇಡೀ ರಾಜ್ಯ ಗಟ್ಟಿ ಧ್ವನಿಯಲ್ಲಿ ಹೇಳಿದ ವ್ಯಕ್ತಿಯನ್ನು ನಿರಪರಾಧಿ ಎಂದು ಬಿಡುಗಡೆ ಮಾಡಲಾಗಿದೆ ಎಂದು ಆರೋಪಿಸಿದರು.

ಧರ್ಮಸ್ಥಳ ಮಂಜುನಾಥ ದೇವಾಲಯದಲ್ಲಿ ತಾನು ಸ್ವಚ್ಛತಾ ಕಾರ್ಯದಲ್ಲಿ ನಿಯುಕ್ತನಾಗಿದ್ದ ಎನ್ನಲಾದ ವ್ಯಕ್ತಿ ಪೊಲೀಸರಿಗೆ ಮತ್ತು ಬೆಳ್ತಂಗಡಿ ನ್ಯಾಯಾಲಯಕ್ಕೆ ಅಧಿಕೃತವಾಗಿ ತಿಳಿಸಿದ್ದು, ಸರ್ಕಾರ ಎಸ್‌ಐಟಿ ರಚಿಸಿ ತನಿಖೆ ಪ್ರಗತಿಯಲ್ಲಿದೆ. ಈ ಎಲ್ಲ ಬೆಳವಣಿಗೆಗಳನ್ನು ಗಮನಿಸಿ, ಸಾಕ್ಷಿ ದೂರುದಾರರ ದೂರಿನನ್ವಯ ಸೌಜನ್ಯ ಪ್ರಕರಣವೂ ಸೇರಿದಂತೆ ಅಸಹಜ ಸಾವೆಂದು ಪರಿಗಣಿಸಿ ಮೂಲೆಗೆ ತಳ್ಳಲ್ಪಟ್ಟ ಎಲ್ಲ ಪ್ರಕರಣಗಳನ್ನು ನ್ಯಾಯಾಲಯದ ಸುಪರ್ದಿಯಲ್ಲಿ ಮರು ತನಿಖೆ ಮಾಡಬೇಕು. ತನಿಖೆ ನಿಷ್ಪಕ್ಷಪಾತ ಮತ್ತು ಪಾರದರ್ಶಕವಾಗಿ ನಡೆದು ಶೀಘ್ರವಾಗಿ ಅಪರಾಧಿಗಳನ್ನು ಪತ್ತೆ ಮಾಡಿ ಮುಂದಿನ ಕ್ರಮ ಕೈಗೊಳ್ಳಲು ಸಾಧ್ಯವಾಗುವಂತೆ ವಿಶೇಷ ತನಿಖೆಗೆ ಆದೇಶಿಸಬೇಕು ಎಂದು ಆಗ್ರಹಿಸಿದರು.

ಸಿಬಿಐ ನ್ಯಾಯಾಲಯದ ಆದೇಶದಂತೆ ಸೌಜನ್ಯ ಪ್ರಕರಣದಲ್ಲಿ ಸಾಕ್ಷಿನಾಶಕ್ಕೆ ಕಾರಣರಾದ ಮತ್ತು ತನಿಖೆಯನ್ನು ದಾರಿ ತಪ್ಪಿಸಿದ ಅಧಿಕಾರಿಗಳ ಮೇಲೆ ತನಿಖೆಗೆ ಆದೇಶಿಸಿ ಸೂಕ್ತ ಕ್ರಮಕ್ಕೆ ಮುಂದಾಗಬೇಕು. ರಾಜ್ಯದಲ್ಲಿ ಮಹಿಳೆಯರು ಮಕ್ಕಳ ಮೇಲೆ ಅನಿಯಂತ್ರಿತವಾಗಿ ಲೈಂಗಿಕ ದೌರ್ಜನ್ಯ, ಅತ್ಯಾಚಾರ, ಕೊಲೆಗಳು ನಡೆಯುತ್ತಿದ್ದು ಕಳವಳಕಾರಿ ಪರಿಸ್ಥಿತಿ ನಿರ್ಮಾಣವಾಗಿದೆ. ಇವುಗಳನ್ನು ನಿಯಂತ್ರಿಸಲು ಗಂಭೀರವಾದ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ತಹಶೀಲ್ದಾರ್‌ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ವೇದಿಕೆ ಸಂಚಾಲ ರಾಜು ಸಣ್ಣಕ್ಕಿ, ಕನ್ನಡ ಪಕ್ಷದ ರಾಜ್ಯ ಮುಖಂಡ ಸಂಜೀವನಾಯಕ್, ಜಿಲ್ಲಾಧ್ಯಕ್ಷ ಮುನಿಪಾಪಯ್ಯ, ತಾಲೂಕು ಅಧ್ಯಕ್ಷ ವೆಂಕಟೇಶ್, ಕನ್ನಡ ಜಾಗೃತ ಪರಿಷತ್ ಕಾರ್ಯದರ್ಶಿ ಡಿ.ಪಿ.ಆಂಜನೇಯ, ಸಿಪಿಐ(ಎಂ) ತಾಲೂಕು ಪ್ರಧಾನ ಕಾರ್ಯದರ್ಶಿ ರುದ್ರಾರಾಧ್ಯ, ಕಾರ್ಮಿಕ ಮುಖಂಡ ಪಿ.ಎ.ವೆಂಕಟೇಶ್, ಪ್ರಜಾ ವಿಮೋಚನಾ ಸಮಿತಿಯ ರಾಜ್ಯ ಕಾರ್ಯಾಧ್ಯಕ್ಷ ಗೂಳ್ಯ ಹನುಮಣ್ಣ, ರಾಜ್ಯ ರೈತ ಸಂಘದ ಜಿಲ್ಲಾ ಮುಖಂಡ ಮುತ್ತೇಗೌಡ, ಹನುಮೇಗೌಡ, ಮುನಿನಾರಾಯಣಪ್ಪ, ಮಹಿಳಾ ಸಂಘಟನೆಯ ಕವಿತಾ, ಎಸ್‌ಎಫ್ಐ ಸಂಘಟನೆಯ ತಾಲೂಕು ಅಧ್ಯಕ್ಷ ನಟರಾಜು, ಮುಖಂಡರಾದ ರಘುಕುಮಾರ್, ಚೌಡಪ್ಪ ಸೇರಿದಂತೆ ನೂರಾರು ವಿದ್ಯಾರ್ಥಿನಿಯರು ಭಾಗವಹಿಸಿದ್ದರು.

29ಕೆಡಿಬಿಪಿ6-

ಧರ್ಮಸ್ಥಳ ಪ್ರಕರಣದ ನ್ಯಾಯಾಂಗ ತನಿಖೆಗೆ ಆಗ್ರಹಿಸಿ ದೊಡ್ಡಬಳ್ಳಾಪುರದಲ್ಲಿ ಸಂವಿಧಾನ ರಕ್ಷಣೆಗಾಗಿ ನಾಗರೀಕರ ವೇದಿಕೆ ವತಿಯಿಂದ ಪ್ರತಿಭಟನೆ ನಡೆಯಿತು.