ಸಾರಾಂಶ
ದಾಬಸ್‍ಪೇಟೆ: ಧರ್ಮಸ್ಥಳ ಪ್ರಕರಣ ಶೇ.90ರಷ್ಟು ತನಿಖೆ ಮುಗಿದಿದೆ. ಎನ್‍ಐಎ ಸಿಬಿಐ ತನಿಖೆ ಬೇಕಾಗಿಲ್ಲ, ನಮ್ಮ ಪೊಲೀಸರೆ ಸಮರ್ಥರಿದ್ದಾರೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.
ಪಟ್ಟಣದಲ್ಲಿ ಧರ್ಮಸ್ಥಳ ಪ್ರಕರಣದ ಕುರಿತು ಸತೀಶ್ ಜಾರಕಿಹೊಳಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ, ಪರಮೇಶ್ವರ್ ಕ್ಲಾರಿಟಿ ಕೊಡಬೇಕು ಎಂಬ ತೀರ್ಮಾನ ತೆಗೆದುಕೊಂಡಿದ್ದರಿಂದ ಒಂದು ಹಂತಕ್ಕೆ ಬಂದಿದೆ. ಎನ್‍ಐಎ, ಸಿಬಿಐ ಬೇಕಾಗಿಲ್ಲ. ಧರ್ಮಸ್ಥಳ ಹಾಗೂ ಧರ್ಮಾಧಿಕಾರಿ ಬಗ್ಗೆ ವ್ಯಾಪಕವಾಗಿ ಯೂಟೂಬರ್ಸ್ ಪರ ಹಾಗೂ ವಿರೋಧ ಇದ್ದರೂ ಎಲ್ಲವೂ ಅಂತ್ಯವಾಗುತ್ತದೆ ಎಂದರು.ಅಬ್ದುಲ್ ಕಲಾಂ ರಾಷ್ಟ್ರಪತಿ ಆಗಿರಲಿಲ್ವಾ: ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಆಹ್ವಾನ ಕುರಿತು ಪ್ರತಿಕ್ರಿಯಿಸಿ, ಅಬ್ದುಲ್ ಕಲಾಂ ರಾಷ್ಟ್ರಪತಿ ಆಗಿರಲಿಲ್ವಾ? ಅಬ್ದುಲ್ ಕಲಾಂ ರಾಷ್ಟ್ರಪತಿಯಾಗಿದ್ದಾರೆ ಅಂದರೆ ಬಾನು ಮುಷ್ತಾಕ್ ಉದ್ಘಾಟನೆ ಮಾಡೋದ್ರಲ್ಲಿ ತಪ್ಪೇನಿದೆ? ಅವರು ಇದೇ ಮಣ್ಣಿನಲ್ಲಿ ಹುಟ್ಟಿ ಅಭಿಮಾನ ಇರುವಂತವರು. ಎಲ್ಲ ಧರ್ಮವನ್ನು ಸಮಾನವಾಗಿ ಕಾಣುವಂತವರು. ಬೂಕರ್ ಪ್ರಶಸ್ತಿ ವಿಜೇತರು ಉದ್ಘಾಟನೆ ಮಾಡುವುದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು.
ಆರ್‌ಎಸ್‍ಎಸ್ ಗೀತೆ ವಿಚಾರ ಹೇಳಿಕೆಗೆ ಪ್ರತಿಕ್ರಿಯಿಸಿ, ಆರ್‌ಎಸ್‍ಎಸ್ ನಮ್ಮ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿಲ್ಲ. ಅವರ ಪಾತ್ರ ಏನೂ ಇಲ್ಲ, 52 ವರ್ಷ ನಾಗಪುರದ ಆರ್‌ಎಸ್‌ಎಸ್ ಕಚೇರಿ ಮೇಲೆ ನಮ್ಮ ತ್ರಿವರ್ಣ ಧ್ವಜ ಹಾರಿಸಲಿಲ್ಲ. ದೇಶದ ಸ್ವಾತಂತ್ರ್ಯಕ್ಕೆ ಅವರ ಕೊಡುಗೆ ಏನೂ ಇಲ್ಲ ಎಂದರು.ನೆಲಮಂಗಲ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಅಧಿಕಾರಿಯಿಂದ ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ ಆರೋಪದ ಬಗ್ಗೆ ಪ್ರತಿಕ್ರಿಯಿಸಿ, ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ರಾಜಕುಮಾರ್ ವಿರುದ್ಧ ಕೂಡಲೇ ಶಿಸ್ತಿನ ಕ್ರಮ ತೆಗೆದುಕೊಳ್ಳಲು ಸಾರಿಗೆ ಆಯುಕ್ತರಿಗೆ ತಿಳಿಸಿದ್ದೇನೆ ಎಂದರು. ಸೂಚನೆ ನೀಡಿದ ಅರ್ಧ ಗಂಟೆಯಲ್ಲೇ, ನೆಲಮಂಗಲದಲ್ಲಿ ಕಾರ್ಯ ನಿರ್ವಹಣಾ ವ್ಯವಸ್ಥೆಯನ್ನು ರದ್ದುಗೊಳಿಸಿ ಬೆಂಗಳೂರು(ಪಶ್ಚಿಮ) ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಮೂಲಕಚೇರಿಗೆ ಹಿಂದಿರುಗಿಸಿ ಆದೇಶಿಸಿದ್ದಾರೆ. ಜೊತೆಗೆ ಲೈಂಗಿಕ ಕಿರುಕುಳ ಆರೋಪ ಮಾಡಿದ ಮಹಿಳಾ ಸಿಬ್ಬಂದಿಯನ್ನು ಮೂಲ ಕಚೇರಿ ತುಮಕೂರು ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಗೆ ಹಿಂದಿರುಗಿಸಿ ಆದೇಶ ಮಾಡಲಾಗಿದೆ.