10ರಂದು ಸಾಧು-ಸಂತರಿಂದ ಧರ್ಮಸ್ಥಳ ಚಲೋ

| Published : Sep 05 2025, 01:00 AM IST

ಸಾರಾಂಶ

ಸೆ. 10ರಂದು ಸಾಧು- ಸಂತರು ಧರ್ಮಸ್ಥಳ ಚಲೋ ನಡೆಸಲಿದ್ದೇವೆ. ಈ ವೇಳೆ ಧಾರ್ಮಿಕ ಕ್ಷೇತ್ರಕ್ಕೆ ಅವಮಾನ, ಅಪಮಾನ ದೂರವಾಗಲಿ ಎಂದು ಮಹಾ ಆರತಿ ಮತ್ತು ಮಹಾಪೂಜೆ ಕೈಗೊಂಡು ವೀರೇಂದ್ರೆ ಹೆಗ್ಗಡೆ ಅವರಿಗೆ ಆಶೀರ್ವಾದ ಮಾಡಲಿದ್ದೇವೆ.

ಹುಬ್ಬ‍ಳ್ಳಿ: ಸನಾತನ ಸಂಸ್ಕೃತಿ, ಧರ್ಮಸ್ಥಳದ ಬಗ್ಗೆ ಷಡ್ಯಂತ್ರ ಆಗುತ್ತಿದೆ. ದೇಶದಲ್ಲೇ ಇಂತಹ ಷಡ್ಯಂತ್ರ ಆಗಿಲ್ಲ. ಭಕ್ತರ ಭಾವನೆಗೆ ಧಕ್ಕೆ ತರುವ ಪ್ರಯತ್ನ ನಡೆಯುತ್ತಿದೆ. ಧರ್ಮಸ್ಥಳದಲ್ಲಿ ಕಲುಷಿತಗೊಂಡಿರುವ ವಾತಾವರಣ ಶುದ್ಧಿಗಾಗಿ ಸೆ. 10ರಂದು ಸಾಧು-ಸಂತರು ಮತ್ತು ಮಠಾಧೀಶರು ಧರ್ಮಸ್ಥಳ ಚಲೋ ಹಮ್ಮಿಕೊಂಡಿದ್ದೇವೆ ಎಂದು ವರೂರಿನ ಜೈನಮುನಿ ಆಚಾರ್ಯ ಗುಣಧರನಂದಿ ಮಹಾರಾಜ್ ಹೇಳಿದ್ದಾರೆ.

ವರೂರಿನ ನವಗೃಹ ತೀರ್ಥ ಕ್ಷೇತ್ರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅ‍ವರು, ಸೆ. 10ರಂದು ಸಾಧು- ಸಂತರು ಧರ್ಮಸ್ಥಳ ಚಲೋ ನಡೆಸಲಿದ್ದೇವೆ. ಈ ವೇಳೆ ಧಾರ್ಮಿಕ ಕ್ಷೇತ್ರಕ್ಕೆ ಅವಮಾನ, ಅಪಮಾನ ದೂರವಾಗಲಿ ಎಂದು ಮಹಾ ಆರತಿ ಮತ್ತು ಮಹಾಪೂಜೆ ಕೈಗೊಂಡು ವೀರೇಂದ್ರೆ ಹೆಗ್ಗಡೆ ಅವರಿಗೆ ಆಶೀರ್ವಾದ ಮಾಡಲಿದ್ದೇವೆ. ಎಲ್ಲ ತಾಲೂಕು ಕೇಂದ್ರಗಳಿಂದ ನೂರಾರು ಸಂಖ್ಯೆಯಲ್ಲಿ ಸ್ವಾಮೀಜಿಗಳು, ಮಠಾಧೀಶರು, ಸಾಧು-ಸಂತರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಕಾನೂನು ರಚನೆಗೆ ಆಗ್ರಹ: ಇತ್ತೀಚಿಗೆ ಸಾಧು ಸಂತರ ಮೇಲೆ ಆಗುತ್ತಿರುವ ಹಲ್ಲೆ, ಧಾರ್ಮಿಕ ಕೇಂದ್ರಗಳ ಮೇಲಿನ ದೌರ್ಜನ್ಯ ಹಾಗೂ ಧರ್ಮಸ್ಥಳ ಕ್ಷೇತ್ರದ ಮೇಲಿನ ಷಡ್ಯಂತ್ರದ ಬಗ್ಗೆ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಕಟ್ಟುನಿಟ್ಟಿನ ಕಾನೂನು ರಚಿಸಲು ಕೋರಿಕೊಂಡಿದ್ದೇವೆ. ಹರಿಹರದ ಪಂಚಮಸಾಲಿ ಪೀಠದ ಶ್ರೀ ವಚನಾನಂದ ಸ್ವಾಮೀಜಿ, ಮಲೆಮಹಾದೇಶ್ವರ ಬೆಟ್ಟದ ಸಾಲೂರು ಮಠದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ, ವರೂರು ಸ್ವಸ್ತಿಶ್ರೀ ಧರ್ಮಸೇನಾ ಭಟ್ಟಾರಕ ಸ್ವಾಮೀಜಿ‌, ಗುರುದೇವ ಆಶ್ರಮದ ಆತ್ಮರಾಮ ಸ್ವಾಮೀಜಿ ಸೇರಿದಂತೆ ವಿವಿಧ ಮಠಗಳ ಪೀಠಾಧಿಪತಿಗಳು ನಿಯೋಗದಲ್ಲಿದ್ದರು.

ಈ ವೇಳೆ ಭಾರತೀಯ ಮಠ, ಮಂದಿರದ ಮೇಲೆ ನಾಸ್ತಿಕರಿಂದ ನಿರಂತರ ದಾಳಿ ನಡೆಯುತ್ತಿದೆ. ಋಷಿಮುನಿಗಳು ಕಟ್ಟಿದ ಸಂಸ್ಕೃತಿ ಹಾಳಾಗಬಾರದು. ಇದನ್ನು ತಡೆಯಲು ಹೊಸ ಕಾನೂನು ರಚನೆ ಮಾಡಬೇಕು ಎಂದು ಮನವಿ ಮಾಡಿದ್ದು, ಅವರು ಸಂತೋಷದಿಂದ ಒಪ್ಪಿಕೊಂಡಿದ್ದಾರೆ. ಸುಮಾರು 48 ನಿಮಿಷ ನಡೆದ ಸಭೆಯಲ್ಲಿ ಅಮಿತ್‌ ಶಾ ಅವರಿಗೆ ಸಾಮಾಜಿಕ ಜಾಲತಾಣ ಮತ್ತು ಯೂಟ್ಯೂಬ್‌ನಲ್ಲಿ ಮಾನಹರಣ ಮಾಡುವಂತಹ ಪ್ರವೃತ್ತಿ ಹೆಚ್ಚಾಗುತ್ತಿದೆ. ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕಾನೂನು ಜಾರಿ ತರಬೇಕು ಎಂದು ತಿಳಿಸಲಾಗಿದೆ. ಧರ್ಮ ರಕ್ಷಣೆಗೆ ಸರ್ಕಾರ ಬದ್ಧವಾಗಿದೆ. ಕರ್ನಾಟಕದಲ್ಲಿ ನಡೆಯುತ್ತಿರುವ ಬೆಳವಣಿಗೆ ಗಮನಕ್ಕಿದೆ. ಧರ್ಮಸ್ಥಳ ಪ್ರಕರಣದ ಕುರಿತು ರಾಜ್ಯ ಸರ್ಕಾರದಿಂದ ವರದಿ ತರಿಸಿಕೊಂಡಿರುವುದಾಗಿ ತಿಳಿಸಿದ್ದಾರೆ ಎಂದರು.

ಸೆ. 8ರಂದು ಧರ್ಮಾಧಿಕಾರಿ ವೀರೇಂದ್ರ ಹೆಗ್ಗೆಡೆ ಅವರನ್ನು ದೆಹಲಿಗೆ ಕರೆಯಿಸಿಕೊಂಡು ಭೇಟಿ ಆಗಿ ಮಾಹಿತಿ ಪಡೆಯುತ್ತೇನೆ. ಎಸ್‌ಐಟಿ ತನಿಖೆ ನಡೆಯಲಿ ಎಂದು ಅಮಿತ್ ಶಾ ತಿಳಿಸಿದ್ದಾರೆ ಎಂದು ಸ್ವಾಮೀಜಿ ತಿಳಿಸಿದರು.

ಇದೇ ವೇಳೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರನ್ನು ಪ್ರತ್ಯೇಕವಾಗಿ ಭೇಟಿಯಾಗಿ ಈ ಕುರಿತಂತೆ ಚರ್ಚಿಸಲಾಗಿದೆ. ಅವರಿಂದಲೂ ಸಕಾರಾತ್ಮಕ ಸ್ಪಂದನೆ ವ್ಯಕ್ತವಾಗಿದೆ ಎಂದರು.