ಸಾರಾಂಶ
ಕನ್ನಡಪ್ರಭ ವಾರ್ತೆ ಪಾಂಡವಪುರ
ಶ್ರೀಕ್ಷೇತ್ರ ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ನಡೆಸಿದವರ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸಿ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ನೇತೃತ್ವದಲ್ಲಿ ಕ್ಷೇತ್ರದ ಸಾವಿರಾರು ಕಾರ್ಯಕರ್ತರು ಸೋಮವಾರ ಬೆಳಗ್ಗೆ ಧರ್ಮಸ್ಥಳ ಚಲೋ ನಡೆಸಿದರು.ತಾಲೂಕಿನ ಗಡಿಗ್ರಾಮದ ನಾರ್ಥ್ ಬ್ಯಾಂಕ್-ಕೆಆರ್‌ಎಸ್ ಬಳಿ ಸೋಮವಾರ ಮಂಜಾನೆ ಹೊರಟ ಧರ್ಮಸ್ಥಳ ಚಲೋಗೆ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಚಾಲನೆ ನೀಡಿ, ಹಿಂದೂ ದೇವಾಲಯಗಳನ್ನೇ ಟಾರ್ಗೆಟ್ ಮಾಡಿ ಅವುಗಳ ವಿರುದ್ಧ ಅಪಪ್ರಚಾರ ನಡೆಸಲು ಕೆಲವರು ಷಡ್ಯಂತ್ರ ನಡೆಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಧರ್ಮಸ್ಥಳ ಕ್ಷೇತ್ರದ ವಿರುದ್ಧ ಷಡ್ಯಂತ್ರ ನಡೆಸಿ ಕ್ಷೇತ್ರದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರ ಆತ್ಮಸ್ಥೈರ್ಯವನ್ನು ಕುಗ್ಗಿಸುವ ಕೆಲಸ ಮಾಡಲಾಗಿದೆ ಎಂದು ಕಿಡಿಕಾರಿದರು.ವೀರೇಂದ್ರ ಹೆಗ್ಗಡೆ ಅವರು ಯಾವುದೇ ಫಲಾಪೇಕ್ಷೆ ಇಲ್ಲದೆ ಸಮಾಜದಲ್ಲಿ ಹಲವು ಸಮಾಜಮುಖಿ ಸೇವಾ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ. ಅಂತಹ ವ್ಯಕ್ತಿಗಳ ಆತ್ಮಸ್ಥೈರ್ಯ ಕುಗ್ಗಿಸುವ ಕೃತ್ಯ ನಡೆಸಲಾಗಿದೆ. ಅದಕ್ಕಾಗಿಯೇ ಕ್ಷೇತ್ರದಿಂದ ನೂರಾರು ಕಾರ್ಯಕರ್ತರು, ಮುಖಂಡರೊಂದಿಗೆ ತೆರಳಿ ಅವರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಲು ಹೊರಟಿದ್ದೇವೆ ಎಂದರು.
ಧರ್ಮಸ್ಥಳದ ವಿರುದ್ಧ ನಡೆದಿರುವ ಷಡ್ಯಂತ್ರ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಪ್ರವೇಶ ಮಾಡಿ ಪ್ರಕರಣದ ವಿರುದ್ಧ ಎನ್ಐಎ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.ಈ ವೇಳೆ ಜೆಡಿಎಸ್ ಅಧ್ಯಕ್ಷ ಎಸ್.ಎ.ಮಲ್ಲೇಶ್, ಮನ್ಮುಲ್ ನಿರ್ದೇಶಕ ಸಿ.ಶಿವಕುಮಾರ್, ಜಿಪಂ ಮಾಜಿ ಸದಸ್ಯರಾದ ಸಿ.ಅಶೋಕ್, ಎಚ್.ಮಂಜುನಾಥ್ ಸೇರಿದಂತೆ ನೂರಾರು ಕಾರ್ಯಕರ್ತರು ಮುಖಂಡರು ಹಾಜರಿದ್ದರು.
ಜೆಡಿಎಸ್ ಕಾರ್ಯಕರ್ತರು, ಭಕ್ತರಿಂದ ಧರ್ಮಯಾತ್ರೆಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ತಾಲೂಕಿನಿಂದಲೂ ಸೋಮವಾರ ನೂರಾರು ಜೆಡಿಎಸ್ ಕಾರ್ಯಕರ್ತರು, ಧರ್ಮಸ್ಥಳ ಭಕ್ತರು ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಧರ್ಮಯಾತ್ರೆ ನಡೆಸಿದರು.ಬೆಳಗ್ಗೆ 6 ಗಂಟೆಗೆ ಕೆಆರ್‌ಎಸ್ ಬೃಂದಾವನದ ಪ್ರವೇಶ ದ್ವಾರದ ಬಳಿಯಿಂದ ಮಾಜಿ ಸಚಿವ ಸಿ.ಎಸ್ ಪುಟ್ಟರಾಜು ನೇತೃತ್ವದಲ್ಲಿ ಕಾರ್ಯಕರ್ತರು, ಭಕ್ತರು ಪಕ್ಷಾತೀತವಾಗಿ ನೂರಾರು ಕಾರುಗಳಲ್ಲಿ ಧರ್ಮಸ್ಥಳ ಯಾತ್ರೆ ಆರಂಭವಾಯಿತು.
ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಯಾತ್ರೆಗೆ ಚಾಲನೆ ನೀಡಿ ಮಾತನಾಡಿ, ಧರ್ಮಸ್ಥಳ ನಮ್ಮ ಹಿಂದುಗಳ ಪುಣ್ಯ ಕ್ಷೇತ್ರ. ಶ್ರೀ ಕ್ಷೇತ್ರಕ್ಕೆ ಕಳಂಕ ತರಲು ಪ್ರಯತ್ನಗಳು ನಡೆಯುತ್ತಿವೆ. ಇದನ್ನು ಪಕ್ಷಾತೀತವಾಗಿ ಖಂಡಿಸಬೇಕು ಎಂದು ಆಗ್ರಹಿದರು.ಧರ್ಮಾಧಿಕಾರಿ ಶ್ರೀವೀರೇಂದ್ರ ಹೆಗ್ಗಡೆಯವರು ಹಾಗೂ ಶ್ರೀಕ್ಷೇತ್ರದ ವಿರುದ್ಧ ಕಳಂಕ ತರಲು ಸಂಚು ನಡೆಯುತ್ತಿದೆ. ಇದಕ್ಕೆ ದೇಶ ದ್ರೋಹಿಗಳ ನಂಟು ಇದೆ. ಅವರು ಶ್ರೀಮಂಜುನಾಥ ಸ್ವಾಮಿಯಿಂದಲೇ ಭಸ್ಮವಾಗಲಿ ಎಂದರು.
ಮುಸ್ಲಿಂ ಭಾಂದವರು ತಮ್ಮ ದೇವರ ಬಗ್ಗೆ ಹಿಂದುಗಳು ಮಾತನಾಡಿದರೆ ದಂಗೆ ಏಳುತ್ತಾರೆ. ಅದೇ ಸಮುದಾಯದ ಸಮೀರ್ ಹಿಂದು ದೇವರು ಹಾಗೂ ಶ್ರೀಕ್ಷೇತ್ರದ ಬಗ್ಗೆ ಮಾತನಾಡಿದಾಗ ಏಕೆ ಆತನ ವಿರುದ್ಧ ಕ್ರಮವಿಲ್ಲ. ಮುಸ್ಲಿಂ ಧರ್ಮಗುರುಗಳು ಆತನ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಈತನಿಗೆ ಮುಸ್ಲಿಂ ಸಮುದಾಯದ ನಾಯಕರೇ ಸರಿಯಾಗಿ ಬುದ್ಧಿ ಕಳಿಸಬೇಕು ಎಂದು ಒತ್ತಾಯಿಸಿದರು.