ಧರ್ಮಸ್ಥಳ ಚಲೋ ಯಾತ್ರೆಗೆ ಮಾಗಡಿಯಲ್ಲಿ ಸ್ವಾಗತ

| Published : Aug 17 2025, 01:36 AM IST

ಸಾರಾಂಶ

ಮಾಗಡಿ: ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ನೇತೃತ್ವದಲ್ಲಿ ಧರ್ಮಸ್ಥಳ ಚಲೋ 400ಕ್ಕೂ ಹೆಚ್ಚು ಕಾರುಗಳ ಯಾತ್ರೆಗೆ ಮಾಗಡಿ ಬಿಜೆಪಿ ವತಿಯಿಂದ ಸ್ವಾಗತ ಕೋರಲಾಯಿತು.

ಮಾಗಡಿ: ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ನೇತೃತ್ವದಲ್ಲಿ ಧರ್ಮಸ್ಥಳ ಚಲೋ 400ಕ್ಕೂ ಹೆಚ್ಚು ಕಾರುಗಳ ಯಾತ್ರೆಗೆ ಮಾಗಡಿ ಬಿಜೆಪಿ ವತಿಯಿಂದ ಸ್ವಾಗತ ಕೋರಲಾಯಿತು.

ತಾಲೂಕಿನ ತಿಪ್ಪಸಂದ್ರ ಹ್ಯಾಂಡ್ ಪೋಸ್ಟ್ ಬಳಿ ಶನಿವಾರ ಬೆಳಗ್ಗೆ ಬಿಜೆಪಿ ರೈತ ಮೋರ್ಚಾ ತಾಲೂಕು ಅಧ್ಯಕ್ಷ ಹನುಮಂತೇಗೌಡರ ನೇತೃತ್ವದಲ್ಲಿ ಧರ್ಮಸ್ಥಳದ ಪರವಾಗಿ ನಡೆಯುತ್ತಿರುವ ಧರ್ಮ ಹೋರಾಟಕ್ಕೆ ತೆರಳಿದ ಶಾಸಕರು ಹಾಗೂ ನೂರಾರು ಕಾರ್ಯಕರ್ತರಿಗೆ ಭವ್ಯ ಸ್ವಾಗತ ಕೋರಿ ಯಾತ್ರೆ ಯಶಸ್ವಿಯಾಗಲಿ ಎಂದು ಬಿಜೆಪಿ ಕಾರ್ಯಕರ್ತರು ಹಾರೈಸಿ ಬೀಳ್ಕೊಟ್ಟರು.

ಬಿಜೆಪಿ ತಾಲೂಕು ರೈತ ಮೋರ್ಚಾ ಅಧ್ಯಕ್ಷ ಹನುಮಂತೇಗೌಡ ಮಾತನಾಡಿ, ಧರ್ಮಸ್ಥಳ ಹೆಸರನ್ನು ಹಾಳು ಮಾಡಲು ಹಲವರು ಸಂಚು ಹಾಕುತ್ತಿದ್ದು, ಸರ್ಕಾರದ ಮೇಲೆ ಒತ್ತಡ ತಂದು ಎಸ್ಐಟಿ ರಚನೆ ಮಾಡಿ ಮುಸುಕುಧಾರಿ ಮೂಲಕ ಧರ್ಮಸ್ಥಳದ ಪುಣ್ಯಕ್ಷೇತ್ರ ಹಾಳು ಮಾಡುವ ಹುನ್ನಾರ ನಡೆದಿದೆ. ಎಲ್ಲೆಂದರಲ್ಲಿ ಹೆಣಗಳಿಗಾಗಿ ಸುಮ್ಮನೆ ಮಣ್ಣನ್ನು ಅಗೆಸುತ್ತಿದ್ದು ನಮ್ಮ ತೆರಿಗೆ ಹಣವನ್ನು ಸರ್ಕಾರ ಈ ರೀತಿ ಪೋಲು ಮಾಡುತ್ತಿದೆ. ಈ ರೀತಿ ಗುಂಡಿಗಳನ್ನು ತೆಗೆಯುವ ಬದಲು ರೈತರಿಗೆ ಅನುಕೂಲವಾಗುವ ಕಾಲುವೆ ನಿರ್ಮಾಣ ಮಾಡಿದರೆ ಹೆಚ್ಚು ಅನುಕೂಲವಾಗುತ್ತದೆ. ಧರ್ಮದ ಹೆಸರಿನ ಮೂಲಕ ಹಿಂದೂ ಭಾವನೆಗೆ ಧಕ್ಕೆ ತರುವ ಕೆಲಸ ಮಾಡುತ್ತಿದ್ದು ಯಲಹಂಕ ಶಾಸಕರಾದ ಎಸ್.ಆರ್.ವಿಶ್ವನಾಥ್ ಧರ್ಮಸ್ಥಳ ಉಳಿಸುವ ನಿಟ್ಟಿನಲ್ಲಿ ದೊಡ್ಡ ಹೋರಾಟಕ್ಕೆ ಕೈ ಹಾಕಿದ್ದು ಇದಕ್ಕೆ ಸಂಪೂರ್ಣ ಸಹಕಾರ ನೀಡುತ್ತೇವೆ. ಇದೇ ರೀತಿ ಧರ್ಮದ ಹೆಸರಿನಲ್ಲಿ ಅಪಚಾರ ಮಾಡಿದರೆ ರಾಜ್ಯಾದ್ಯಂತ ಬಿಜೆಪಿ ವತಿಯಿಂದ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಇದೇ ವೇಳೆ ಒಬಿಸಿ ತಾಲೂಕು ಅಧ್ಯಕ್ಷ ಕುಮಾರಸ್ವಾಮಿ, ಮುಖಂಡರಾದ ಚಿಕ್ಕ ಹನುಮಂತಯ್ಯ, ಗಂಗರಾಜು, ಚಂದ್ರು, ಚಿಕ್ಕ ಹೊನ್ನಯ್ಯ ಸೇರಿದಂತೆ ಇತರರು ಭಾಗವಹಿಸಿದ್ದರು.

(ಫೋಟೋ ಕ್ಯಾಫ್ಷನ್‌)

ಮಾಗಡಿ ತಾಲೂಕಿನ ತಿಪ್ಪಸಂದ್ರ ಹ್ಯಾಂಡ್ ಪೋಸ್ಟ್ ಬಳಿ ಧರ್ಮಸ್ಥಳ ಚಲೋ ಕಾರ್ಯಕ್ರಮಕ್ಕೆ ತೆರಳಿದ ಬಿಜೆಪಿ ಮುಖಂಡರಿಗೆ ತಾಲೂಕು ಬಿಜೆಪಿ ರೈತ ಮೋರ್ಚಾ ಮುಖಂಡರು ಸ್ವಾಗತ ಕೋರಿ ಬೀಳ್ಕೊಟ್ಟರು.