ಸಾರಾಂಶ
ಧರ್ಮಸ್ಥಳದ ಬಗ್ಗೆ ಅಪಪ್ರಚಾರಕ್ಕೆ ಮುಂದಾದವರಿಗೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ನಂತರ ಶಿರಸ್ತೇದಾರ್ ಪುನೀತ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಕನ್ನಡಪ್ರಭ ವಾರ್ತೆ ಗುಬ್ಬಿ
ಧರ್ಮಸ್ಥಳಕ್ಕೆ ಕೆಟ್ಟ ಹೆಸರು ತರಲು ಬುರುಡೆ ಗ್ಯಾಂಗ್ ನಡೆಸಿದ ಹುನ್ನಾರಕ್ಕೆ ಕಡಿವಾಣ ಈಗ ಬಿದ್ದಿದೆ. ಇಲ್ಲಸಲ್ಲದ ಆರೋಪ ಮಾಡಿ ಧಾರ್ಮಿಕತೆಗೆ ಧಕ್ಕೆ ತಂದ ತಂಡಕ್ಕೆ ತಕ್ಕ ಶಾಸ್ತಿ ನೀಡಬೇಕು ಎಂದು ಒತ್ತಾಯಿಸಿ ಬಿಜೆಪಿ, ಜೆಡಿಎಸ್ ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸದಸ್ಯರು ಬೃಹತ್ ಹೋರಾಟವನ್ನು ಶುಕ್ರವಾರ ನಡೆಸಿದರು.ಪಟ್ಟಣದ ಶ್ರೀ ಚನ್ನಬಸವೇಶ್ವರಸ್ವಾಮಿ ದೇವಾಲಯದಿಂದ ಮೆರವಣಿಗೆ ಮೂಲಕ ತಾಲೂಕು ಕಚೇರಿ ತಲುಪಿದ ಪ್ರತಿಭಟನಾಕಾರರು ಬುರುಡೆ ಗ್ಯಾಂಗ್ ವಿರುದ್ಧ ಘೋಷಣೆ ಕೂಗಿದರು. ಅಪಪ್ರಚಾರಕ್ಕೆ ಮುಂದಾದವರಿಗೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ನಂತರ ಶಿರಸ್ತೇದಾರ್ ಪುನೀತ್ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಪ್ರತಿಭಟನಾಕಾರರನ್ನು ಉದ್ದೇಶಿಸಿ ಬಿಜೆಪಿ ಮುಖಂಡ ಎಸ್.ಡಿ.ದಿಲೀಪ್ ಕುಮಾರ್ ಮಾತನಾ, ಧರ್ಮಸ್ಥಳ ಉಳಿಸುವ ಹೋರಾಟ ಮಾಡುವುದು ಆಸ್ತಿಕರ ಕರ್ತವ್ಯವಾಗಿದೆ. ಧಾರ್ಮಿಕ ಶ್ರದ್ಧಾಕೇಂದ್ರವನ್ನು ಹಾಳು ಮಾಡುವ ಹುನ್ನಾರ ಇದಾಗಿದೆ. ನಿರಾಧಾರ ಆರೋಪಕ್ಕೆ ತಕ್ಕ ಶಿಕ್ಷೆಯಾಗಬೇಕು. ಈ ಕುತಂತ್ರಗಳು ಹಿಂದುತ್ವದ ಮೇಲೆ ನಡೆದಿರುವ ದಾಳಿಯಾಗಿದೆ. ಎಲ್ಲಾ ಧಾರ್ಮಿಕ ಕ್ಷೇತ್ರದ ಮೇಲೇರೆಗುವ ಈ ಎಡ ಪಂಥೀಯವರು ಧರ್ಮ ನಾಶಕ್ಕೆ ಮುಂದಾಗಿದ್ದಾರೆ. ಅನ್ಯ ಧರ್ಮೀಯರು ಹಿಂದೂ ಧಾರ್ಮಿಕ ಕ್ಷೇತ್ರದ ಸ್ಥಳದಲ್ಲಿ ಭೂ ಕಬಳಿಕೆ ನಡೆಸಿದ್ದಾರೆ. ಗುಬ್ಬಿ ತೊರೆ ಮಠದ ಭೂಮಿ ದಕ್ಕಿಸಿಕೊಳ್ಳಲು ಮುಂದಾಗಿದ್ದಾರೆ. ಗುಬ್ಬಿ ಪಟ್ಟಣದಲ್ಲಿ ನಮ್ಮ ಜಾಗಕ್ಕೆ ನಾವು ಬೀದಿಗಿಳಿದು ಹೋರಾಟ ಮಾಡಬೇಕಿದೆ. ತಹಶೀಲ್ದಾರ್ ಅವರು ಈ ಬಗ್ಗೆ ಸೂಕ್ಷ್ಮ ನಿಲುವು ತಾಳಬೇಕಿದೆ ಎಂದು ಎಚ್ಚರಿಕೆ ನೀಡಿದರು. ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಎಚ್.ಟಿ.ಭೈರಪ್ಪ ಮಾತನಾಡಿ, ಸಮಾಜಘಾತುಕ ತಂಡ ಧರ್ಮಸ್ಥಳಕ್ಕೆ ಮಸಿ ಬಳಿಯುವ ಕೆಲಸ ಮಾಡುತ್ತಿದೆ. ಇಂತಹ ಕಮ್ಯುನಿಸ್ಟ್ ಮೈಂಡ್ ಹಿಂದೆ ಬೆನ್ನೆಲುಬಾಗಿ ಕೆಲಸ ಮಾಡುವ, ಆರ್ಥಿಕ ನೆರವು ನೀಡುವವರ ಮೇಲೆ ಮೊದಲು ಕಾನೂನು ಕ್ರಮ ಕೈಗೊಳ್ಳಬೇಕು. ನಮ್ಮ ಧಾರ್ಮಿಕ ನೆಲೆಗಳ ಮೇಲೆ ಕಣ್ಣು ಹಾಕಿದ ಅನ್ಯ ಧರ್ಮೀಯರ ಸಂಘಟನೆಗಳು ಹಿಂದೂ ದೇವಾಲಯಗಳು, ಮಠಮಾನ್ಯಗಳು, ಧಾರ್ಮಿಕ ಕ್ಷೇತ್ರಗಳೇ ಇವರ ಟಾರ್ಗೆಟ್. ಅಯ್ಯಪ್ಪಸ್ವಾಮಿ, ತಿರುಪತಿ, ಸಿದ್ದಗಂಗಾ ಮಠ, ಪೇಜಾವರ ಶ್ರೀಗಳು ಹೀಗೆ ಮುಂದುವರೆದು ಧರ್ಮಸ್ಥಳಕ್ಕೆ ಬಂದಿದ್ದಾರೆ. ಸ್ಥಳೀಯವಾಗಿ ಸಹ ಭೂಮಿ ಕಸಿಯುವ ಕೆಲಸ ನಡೆದಿದೆ. ತೊರೆ ಮಠ ಭೂಮಿ ಉಳಿಸಲು ದೊಡ್ಡ ಹೋರಾಟ ಇಲ್ಲಿಯೂ ನಡೆಯಲಿದೆ ಎಂದರು.ಬಿಜೆಪಿ ನಿಕಟ ಪೂರ್ವ ಅಧ್ಯಕ್ಷ ಪಂಚಾಕ್ಷರಿ , ಜಿಪಂ ಮಾಜಿ ಸದಸ್ಯ ಚಂದ್ರಶೇಖರ ಬಾಬು, ಬಿಜೆಪಿ ತಾಲೂಕು ಅಧ್ಯಕ್ಷ ಬಲರಾಮಯ್ಯ, ಪಪಂ ಸದಸ್ಯ ಜಿ.ಆರ್.ಶಿವಕುಮಾರ್ ಈ ಸಂದರ್ಭದಲ್ಲಿ ಜಿ.ಸಿ.ಕೃಷ್ಣಮೂರ್ತಿ, ಜಿ.ಎನ್.ಅಣ್ಣಪ್ಪಸ್ವಾಮಿ, ಬಿಜೆಪಿ ಮುಖಂಡರಾದ ಸಿದ್ದರಾಮಯ್ಯ, ಅ.ನ.ಲಿಂಗಪ್ಪ, ಯತೀಶ್, ಹೊಸಹಳ್ಳಿ ಬಸವರಾಜ್, ಅರಿವೇಂದ್ರ ಲೋಕೇಶ್, ಜಿ.ಆರ್.ಬಸವರಾಜ್, ನಂದಿಕೋಲ್ ರವಿ, ಜೆಡಿಎಸ್ ಮುಖಂಡರಾದ ಜಿ.ಎನ್. ಬೆಟ್ಟಸ್ವಾಮಿ, ಹೊನ್ನಗಿರಿಗೌಡ, ಸಿದ್ದಗಂಗಮ್ಮ , ರಘು, ಶಿವಾನಂದ್ ಇತರರು ಇದ್ದರು.