ಧರ್ಮಸ್ಥಳ: ಮಂಜುನಾಥ ಸ್ವಾಮಿ, ಹೆಗ್ಗಡೆ ದರ್ಶನ ಪಡೆದ ಡಿಕೆಶಿ

| Published : Apr 21 2025, 12:46 AM IST

ಸಾರಾಂಶ

ಮಂಜುನಾಥ ಸ್ವಾಮಿಗೆ ಪ್ರಾಥನೆ ಸಲ್ಲಿಸಿ, ಹುಂಡಿಗೆ ಕಾಣಿಗೆ ಹಾಕಿದರು. ಬಳಿಕ ಧರ್ಮಾಧಿಕಾರಿ ಡಾ.ಡಿ.ವಿರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿ ಅರ್ಶಿವಾದ ಪಡೆದು ಬೆಳ್ತಂಗಡಿಯ ಕಾಂಗ್ರೆಸ್‌ ಕಾರ್ಯಕ್ರಮದತ್ತ ಪ್ರಯಾಣ ಮಾಡಿದರು.

ಕನ್ನಡಪ್ರಭ ವಾರ್ತೆ ಬೆಲ್ತಂಗಡಿ

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭಾನುವಾರ ಬೆಳಗ್ಗೆ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಮಂಜುನಾಥ ಸ್ವಾಮಿಯ ದರ್ಶನವನ್ನು ಪಡೆದರು.

ಮಂಜುನಾಥ ಸ್ವಾಮಿಗೆ ಪ್ರಾಥನೆ ಸಲ್ಲಿಸಿ, ಹುಂಡಿಗೆ ಕಾಣಿಗೆ ಹಾಕಿದರು. ಬಳಿಕ ಧರ್ಮಾಧಿಕಾರಿ ಡಾ.ಡಿ.ವಿರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿ ಅರ್ಶಿವಾದ ಪಡೆದು ಬೆಳ್ತಂಗಡಿಯ ಕಾಂಗ್ರೆಸ್‌ ಕಾರ್ಯಕ್ರಮದತ್ತ ಪ್ರಯಾಣ ಮಾಡಿದರು.ಮಾಜಿ ಎಂಎಲ್‌ಸಿ ಹರೀಶ್ ಕುಮಾರ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮುನಿಯಾಲು ಉದಯ ಕುಮಾರ್ ಶೆಟ್ಟಿ, ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗೇಶ್ ಕುಮಾರ್ ಸೇರಿದಂತೆ ಇನ್ನಿತರರು ಭಾಗಿಯಾಗಿದ್ದರು.

--------------------------------

ಜಾತಿಗಣತಿ ವಿಚಾರದಲ್ಲಿ ಆತುರದ ನಿರ್ಧಾರವಿಲ್ಲ: ಡಿಕೆಶಿ

ಕನ್ನಡಪ್ರಭ ವಾರ್ತೆ ಮಂಗಳೂರು

ಜಾತಿ ಗಣತಿ ವಿಚಾರದಲ್ಲಿ ಯಾವುದೇ ಆತುರದ ನಿರ್ಧಾರ ಇರುವುದಿಲ್ಲ. ತುಳಿತಕ್ಕೆ ಒಳಗಾದವರಿಗೆ ಶಕ್ತಿ ತುಂಬಿ, ಎಲ್ಲರಿಗೂ ನ್ಯಾಯ ಒದಗಿಸಿಕೊಡಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ಧರ್ಮಸ್ಥಳ ದೇವಾಲಯದಲ್ಲಿ ಭಾನುವಾರ ಮಂಜುನಾಥನ ದರ್ಶನ ಪಡೆದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.ಜಾತಿಗಣತಿಗೆ ಕೆಲ ಸಮುದಾಯಗಳ ವಿರೋಧ ವ್ಯಕ್ತವಾಗುತ್ತಿರುವ ಕುರಿತು ಪ್ರತಿಕ್ರಿಯಿಸಿ, ಕಾಂಗ್ರೆಸ್ ಎಲ್ಲ ಸಮುದಾಯಗಳನ್ನು ಸರಿಸಮನಾಗಿ ತೆಗೆದುಕೊಂಡು ಹೋಗಲು ಬದ್ಧವಾಗಿದೆ. ಎಲ್ಲರಿಗೂ ನ್ಯಾಯ ಒದಗಿಸುವ ಉದ್ದೇಶವಿದೆ. ಯಾರಿಗಾದರೂ ಅನ್ಯಾಯ ಮಾಡಬೇಕು ಎಂದು ಎಲ್ಲಿಯೂ ಹೇಳಿಲ್ಲ. ತುಳಿತಕ್ಕೆ ಒಳಗಾದವರಿಗೆ ಶಕ್ತಿ ತುಂಬುವುದು ಪ್ರಮುಖ ಉದ್ದೇಶ. ಜೈನರು, ಒಕ್ಕಲಿಗರು, ಲಿಂಗಾಯತರು ಸೇರಿದಂತೆ ಎಲ್ಲ ಸಮುದಾಯದಲ್ಲೂ ಬಡವರಿದ್ದಾರೆ. ಎಲ್ಲರಿಗೂ ನ್ಯಾಯ ಒದಗಿಸಿಕೊಡಲಾಗುವುದು ಎಂದರು.

ವರದಿಯ ಕುರಿತು ಈಗಷ್ಟೇ ಚರ್ಚೆ ಆರಂಭಿಸಿದ್ದೇವೆ. ಕೆಲವರು ಸಲಹೆ ನೀಡುತ್ತಿದ್ದಾರೆ. ಈ ಸಮೀಕ್ಷೆಯಲ್ಲಿ ಶೇ.90ರಷ್ಟು ಜನರಿಂದ ಮಾಹಿತಿ ಪಡೆದಿದ್ದಾರೆ. ವರದಿ ಕುರಿತು ಈಗಷ್ಟೇ ಅಧ್ಯಯನ ಆರಂಭಿಸಿದ್ದೇವೆ. ಇದಕ್ಕೆ ಸಾಕಷ್ಟು ಸಮಯ ಬೇಕು. ಈ ವಿಚಾರದಲ್ಲಿ ಯಾವುದೇ ಆತುರದ ತೀರ್ಮಾನವಿಲ್ಲ ಎಂದು ಡಿಕೆ ಶಿವಕುಮಾರ್‌ ತಿಳಿಸಿದರು.ಭಾವನೆಗಿಂತ ಬದುಕು ಮುಖ್ಯ:ಕರಾವಳಿ ಭಾಗದಲ್ಲಿ ಪಕ್ಷ ಬಲವರ್ಧನೆಗೆ ಆದ್ಯತೆ ನೀಡಲಾಗುತ್ತಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಕರಾವಳಿ ಭಾಗದಲ್ಲಿ ಜನರ ಬದುಕು ಮುಖ್ಯ. ಭಾವನೆಗಿಂತ ಬದುಕು ಮುಖ್ಯ. ಈ ಭಾಗದಲ್ಲಿ ನಮ್ಮ ಪಕ್ಷದಿಂದ ಕೇವಲ ಇಬ್ಬರು ಶಾಸಕರು ಮಾತ್ರ ಗೆದ್ದಿದ್ದಾರೆ. ಆದರೂ ಈ ಭಾಗದ ಕುಟುಂಬಗಳಿಗೆ ಕಾಂಗ್ರೆಸ್‌ನಿಂದ ಮಾತ್ರ ಸಹಾಯವಾಗುತ್ತಿದೆಯೇ ಹೊರತು ಬಿಜೆಪಿಯಿಂದಲ್ಲ. ಇದನ್ನು ಜನರಿಗೆ ಮನದಟ್ಟು ಮಾಡಬೇಕಿದೆ ಎಂದರು.ಎಲ್ಲ ಧರ್ಮದ ಕೋಟೆ:ಕರಾವಳಿ ಕೇವಲ ಹಿಂದೂ ಧರ್ಮಕ್ಕೆ ಮಾತ್ರವಲ್ಲ, ಎಲ್ಲ ಧರ್ಮಗಳಿಗೂ ಭದ್ರಕೋಟೆ. ಈ ಭಾಗದ ಶಿಕ್ಷಣ ಸಂಸ್ಥೆ, ಬ್ಯಾಂಕುಗಳು ಎಲ್ಲ ವರ್ಗಕ್ಕೂ ಇವೆ. ಕೆಲವರು ಮಾತ್ರ ನಾವು ಹಿಂದೂ, ನಾವು ಮಾತ್ರ ಮುಂದು ಎಂದು ಹೇಳುತ್ತಾರೆ. ಹಿಂದೂ, ಮುಸಲ್ಮಾನ, ಸಿಖ್, ಕ್ರೈಸ್ತ, ಜೈನ ಸೇರಿ ನಾವೆಲ್ಲರೂ ಒಂದು ಎಂದು ನಾವು ಹೇಳುತ್ತೇವೆ. ಬಿಜೆಪಿಯವರು ಏನಾದರೂ ಮಾಡಿಕೊಳ್ಳಲಿ. ನಾವು ಎಲ್ಲ ವರ್ಗದ ಜನರಿಗೆ ರಕ್ಷಣೆ ನೀಡುತ್ತೇವೆ ಎಂದು ಹೇಳಿದರು.

ನಮಗೆ ಧರ್ಮ ಬೇಕು, ಧರ್ಮಕ್ಕೆ ನಾವಲ್ಲ. ಈ ಧರ್ಮಕ್ಷೇತ್ರವು ಜನಸೇವೆ, ಸಾಮಾಜಿಕ, ಶೈಕ್ಷಣಿಕ ಸೇವೆ ಮಾಡಿಕೊಂಡು ಬಂದಿದೆ. ಇದಕ್ಕೆ ಸಹಕಾರ ನೀಡಬೇಕಾಗಿರುವುದು ನಮ್ಮ ಕರ್ತವ್ಯ. ನಾವು ಧರ್ಮವನ್ನು ಕಾಪಾಡಬೇಕು.ಕರಾವಳಿ ನಮ್ಮ ರಾಜ್ಯದ ಮುಖ್ಯವಾದ ಅಂಗ. ಮನುಷ್ಯನಿಗೆ ದೇಹದ ಅಂಗಗಳು ಎಷ್ಟು ಮುಖ್ಯವೋ, ಕರಾವಳಿ ಭಾಗವೂ ಅಷ್ಟೇ ಮುಖ್ಯ ಎಂದು ಡಿಕೆ ಶಿವಕುಮಾರ್‌ ಹೇಳಿದರು.